ADVERTISEMENT

ಸರ್ವರ ಹಿತ ಬಯಸಿದ ಬಸವಣ್ಣ

ಅಭಿನಂದನಾ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 17:00 IST
Last Updated 10 ಜನವರಿ 2021, 17:00 IST
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು   

ಶಿಕಾರಿಪುರ: ಸರ್ವ ಜನಾಂಗದ ಹಿತ ಕಾಯುವ ಸಂದೇಶವನ್ನು ಬಸವಣ್ಣ ನೀಡಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸಲಹೆ ನೀಡಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ ಆಶ್ರಯದಲ್ಲಿ ವಿಶ್ವಬಂಧು ವೀರಶೈವ ಲಿಂಗಾಯತ ಸೌಹಾರ್ದ ಸಹಕಾರ ಸಂಘದ ಉದ್ಘಾಟನೆ, ಡಾ. ಶಿವಕುಮಾರ ಸ್ವಾಮೀಜಿ ಬಡಾವಣೆಗೆ ಚಾಲನೆ ಹಾಗೂ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಪ್ರಸ್ತುತ ಜಾತಿ, ಉಪಜಾತಿ ಎಂಬ ಸಂಘರ್ಷ ನಮ್ಮ ಮಧ್ಯೆ ತಾಂಡವವಾಡುತ್ತಿದೆ. ಜಾತಿ, ಉಪಜಾತಿ ಮರೆತು ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಬರಬೇಕು. ಸಿದ್ಧಗಂಗಾ ಮಠ, ತರಳುಬಾಳು, ಮುರುಘಾ ಮಠ ಸೇರಿ‌ ಹಲವು ಮಠಗಳು ದಾಸೋಹ ಪರಂಪರೆಯನ್ನು ನಡೆಸುವ ಮೂಲಕ ಸಮಾಜದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿವೆ’ ಎಂದರು.

ADVERTISEMENT

‘ಶಿಕಾರಿಪುರ ತಾಲ್ಲೂಕಿನಲ್ಲಿ ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿ ಹಲವು ಶರಣರು ಜನಿಸಿದ್ದಾರೆ. ಇಂತಹ ತಾಲ್ಲೂಕಿನಲ್ಲಿ ನಾವೆಲ್ಲಾ ಹುಟ್ಟಿರುವುದು ಹೆಮ್ಮೆಯ ವಿಷಯ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಸದಸ್ಯರು ಜನಪರ ಕೆಲಸ ಮಾಡಬೇಕು. ಜನರ ತಲೆ ಒಡೆದು ಹಣ ಮಾಡಲು ಮುಂದಾಗಬಾರದು ಎಂದು ಕಿವಿಮಾತು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಪಂಚಾಕ್ಷರಯ್ಯ, ‘ಸಹಕಾರ ಸಂಘ ಮಾಡಲು ಮುಂದಾಗಿರುವುದು ಒಳ್ಳೆಯ ಕೆಲಸ. ಸಂಘದಲ್ಲಿ ದೋಷ ಆಗದಂತೆ ನೋಡಿಕೊಂಡು, ಕಟ್ಟ ಕಡೆಯ ವ್ಯಕ್ತಿಗೆ ಆರ್ಥಿಕ ಸೌಲಭ್ಯ ತಲುಪಿಸಬೇಕು. ಗ್ರಾಮದ ಪ್ರಗತಿಯಿಂದ ರಾಷ್ಟ್ರದ ಅಭಿವೃದ್ಧಿಯಾಗುತ್ತದೆ ಎಂದು ಗಾಂಧೀಜಿ ಹೇಳಿದ್ದರು.ನೂತನ ಸದಸ್ಯರು ನಿರೀಕ್ಷೆ ತಕ್ಕಂತೆ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಕಾಳೇನಹಳ್ಳಿ ಶಿವಯೋಗಾಶ್ರಮದ ಪೀಠಾಧ್ಯಕ್ಷ ರೇವಣಸಿದ್ಧ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವಿ. ಈರೇಶ್ ಅಧ್ಯಕ್ಷತೆ ವಹಿಸಿದ್ದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಮುಖಂಡರಾದ ನಿವೇದಿತಾ ರಾಜು, ಬಿ.ಡಿ. ಭೂಕಾಂತ್, ಚುರ್ಚಿಗುಂಡಿ ರುದ್ರಮುನಿ, ಗಿರೀಶ್ ಧಾರಾವಾಡ, ಚನ್ನೇಶ್, ರುದ್ರಮೂರ್ತಿ, ಎಂ.ಜಿ. ಪ್ರಕಾಶ್, ಕೊಟ್ರೇಶಪ್ಪ, ಶಿವನಗೌಡ್ರು ಕುಮಾರಸ್ವಾಮಿ ಹಿರೇಮಠ್, ವೀರನಗೌಡ, ಅಶ್ವಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.