ಶಿವಮೊಗ್ಗ: ಇಲ್ಲಿನ ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಯತ್ತ ಸಾಗಿದ್ದು, ಶುಕ್ರವಾರ ಸಂಜೆ ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಐದು ಸಾವಿರ ಕ್ಯುಸೆಕ್ ನೀರು ಹರಿಸಲಾಯಿತು.
186 ಅಡಿ ನೀರು ಸಂಗ್ರಹ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ ಮಧ್ಯಾಹ್ನದ ವೇಳೆಗೆ 175 ಅಡಿ ನೀರು ಸಂಗ್ರಹವಾಗಿತ್ತು. ಒಳಹರಿವು 11,991 ಕ್ಯುಸೆಕ್ ಇದೆ.
ಇತಿಹಾಸದಲ್ಲೇ ಮೊದಲು:
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ನದಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಹಾಗೂ ಮುಂಗಾರು ಪೂರ್ವದಲ್ಲಿ ಅಧಿಕ ಮಳೆ ಸುರಿದ ಪರಿಣಾಮ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಜಲಾಶಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜುಲೈ 11ಕ್ಕೆ ಕ್ರಸ್ಟ್‌ಗೇಟ್‌ಗಳ (ಸ್ಪಿಲ್ ವೇ) ಮೂಲಕ ನದಿಗೆ ನೀರು ಹರಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಮೂಲಗಳು ಹೇಳಿವೆ.
ಸಾಮಾನ್ಯವಾಗಿ ಭದ್ರಾ ಜಲಾಶಯದಲ್ಲಿ ನೀರಿನಮಟ್ಟ 175 ಅಡಿ ತಲುಪುತ್ತಿದ್ದಂತೆಯೇ ನೀರಾವರಿ ಉದ್ದೇಶಕ್ಕೆ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಆದರೆ ಈ ಬಾರಿ ಭದ್ರಾ ಎಡದಂಡೆ ನಾಲೆಗೆ ಹೊಸ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿರುವುದರಿಂದ ಮುಂಗಾರು ಹಂಗಾಮಿಗೆ ಬೆಳೆಗಳಿಗೆ ನೀರು ಕೊಡುತ್ತಿಲ್ಲ. ಭದ್ರಾ ಬಲದಂಡೆ ನಾಲೆಯಿಂದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಕೊಂಡೊಯ್ಯುವ ಕಾಮಗಾರಿ ನಡೆಯುತ್ತಿದೆ. ಅದು ಪೂರ್ಣಗೊಂಡು ನಾಲೆ ಸಿದ್ಧವಾಗುವವರೆಗೂ ನೀರು ಹರಿಸಲು ಸಾಧ್ಯವಿಲ್ಲ. ಹೀಗಾಗಿ ನದಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಜಲಾನಯನ ಪ್ರದೇಶದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಜಲಾಶಯ ಭರ್ತಿ ಆಗುವ ಸಾಧ್ಯತೆ ಇದೆ. ಸುರಕ್ಷತೆಯ ದೃಷ್ಟಿಯಿಂದ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕಳೆದ ವರ್ಷ ಇದೇ ದಿನ (2024 ಜುಲೈ 11) ಭದ್ರಾ ಜಲಾಶಯದಲ್ಲಿ 136 ಅಡಿ ನೀರಿನ ಸಂಗ್ರಹ ಇತ್ತು. 6,246 ಕ್ಯುಸೆಕ್ ಒಳಹರಿವು ಇತ್ತು. ಹಿಂದಿನ ಬಾರಿಗಿಂತ ಈಗ 40 ಅಡಿ ನೀರು ಹೆಚ್ಚು ಸಂಗ್ರಹಗೊಂಡಿದೆ.
ತುಂಗಭದ್ರೆಗೆ ಭರಪೂರ ನೀರು..
ಗಾಜನೂರಿನ ತುಂಗಾ ಜಲಾಶಯ ಈಗಾಗಲೇ ಭರ್ತಿ ಆಗಿದೆ. ಅಲ್ಲಿಂದ ನದಿಗೆ 30107 ಕ್ಯುಸೆಕ್ ನೀರು ಹರಿಬಿಡಲಾಗಿದೆ. ಭದ್ರೆಯಿಂದಲೂ ಐದು ಸಾವಿರ ಕ್ಯುಸೆಕ್ ನೀರು ಬಿಟ್ಟಿದ್ದು ಶಿವಮೊಗ್ಗ ಸಮೀಪದ ಕೂಡಲಿ ಬಳಿ ತುಂಗ–ಭದ್ರಾ ಎರಡೂ ನದಿಗಳು ಸೇರುವ ಸಂಗಮ ಸ್ಥಳ ಮೈದುಂಬಿದೆ. ತುಂಗಭದ್ರಾ ಎರಡೂ ಸೇರಿ ಒಟ್ಟು 35107 ಕ್ಯುಸೆಕ್ ನೀರು ಹರಿಯುತ್ತಿದೆ.
ಗಾಜನೂರು ಡ್ಯಾಂ: ಕಾಲುವೆಗೆ
ನೀರು ಬಿಡುಗಡೆ ಜುಲೈ 14ಕ್ಕೆ ಶಿವಮೊಗ್ಗ: ಜಿಲ್ಲೆಯ ಗಾಜನೂರು ಜಲಾಶಯದಿಂದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಲ್ಲಿ ಮುಂಗಾರು ಹಂಗಾಮಿಗೆ ಶಿವಮೊಗ್ಗ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳಿಗೆ ಜುಲೈ 14ರಿಂದ ನೀರು ಹರಿಸಲಾಗುವುದು. ಅಚ್ಚುಕಟ್ಟು ರೈತರಿಗೆ ಹಾಗೂ ಸಾರ್ವಜನಿಕರಿಗೆ ಜನ ಜಾನುವಾರುಗಳೊಂದಿಗೆ ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತುಂಗಾ ಮೇಲ್ದಂಡೆ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.