ADVERTISEMENT

ಭದ್ರಾ ಯೋಜನಾ ಪ್ರದೇಶ ವಿಜೆಎನ್‌ಎಲ್‌ಗೆ ಹಸ್ತಾಂತರ ಬೇಡ: ಎಚ್.ಆರ್.ಬಸವರಾಜಪ್ಪ

ಸರ್ಕಾರಕ್ಕೆ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯ; ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 3:01 IST
Last Updated 8 ಜನವರಿ 2026, 3:01 IST
ಎಚ್.ಆರ್.ಬಸವರಾಜಪ್ಪ
ಎಚ್.ಆರ್.ಬಸವರಾಜಪ್ಪ   

ಶಿವಮೊಗ್ಗ: ಭದ್ರಾ ಅಣೆಕಟ್ಟು ಮತ್ತು ಅಚ್ಚುಕಟ್ಟು ಪ್ರದೇಶದ (ಭದ್ರಾ ಯೋಜನಾ ವೃತ್ತ) ನಿರ್ವಹಣೆ ಹಾಗೂ ಆಡಳಿತವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸದೇ ಈಗಿರುವಂತೆ ಕರ್ನಾಟಕ ನೀರಾವರಿ ನಿಗಮದ (ಕೆಎನ್‌ಎನ್) ವ್ಯಾಪ್ತಿಯಲ್ಲಿಯೇ ಮುಂದುವರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ. 

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾ ಯೋಜನಾ ವೃತ್ತವನ್ನು ಈಗಿರುವಂತೆಯೇ ಆಡಳಿತ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. 

ಭದ್ರಾ ಜಲಾಶಯ ತರೀಕೆರೆ, ಲಕ್ಕವಳ್ಳಿ ಗ್ರಾಮದ ಬಳಿ ಸಮುದ್ರ ಮಟ್ಟದಿಂದ ಸುಮಾರು 601 ಮೀಟರ್ ಎತ್ತರದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಜಲಾಶಯದ ಸಂಗ್ರಹಣಾ ಸಾಮರ್ಥ್ಯ 71,531 ಟಿಎಂಸಿ ಅಡಿ. ಈ ಜಲಾಶಯದಿಂದ 1965ರಿಂದ ಕಾಲುವೆಗಳಲ್ಲಿ ನೀರು ಹರಿಸಲಾಗಿದೆ. ಈ ಯೋಜನೆಯಿಂದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ವಿಜಯನಗರ ಜಿಲ್ಲೆಗಳ 2,53,292 ಎಕರೆ ವ್ಯಾಪ್ತಿಯಲ್ಲಿ ಎರಡು ಬೆಳೆಗಳಿಗೆ ನೀರು ಕೊಡಲಾಗುತ್ತಿದೆ ಎಂದರು.

ಭದ್ರಾ ನೀರಾವರಿ ಯೋಜನಾ ವೃತ್ತದಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಈ ಯೋಜನಾ ವೃತ್ತವನ್ನು ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ ವಿಶ್ವೇಶ್ವರಯ್ಯ ಜಲ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಹಸ್ತಾಂತರಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಈ ಭಾಗದ ರೈತರು ಒಪ್ಪುವುದಿಲ್ಲ. ಆದ್ದರಿಂದ ಭದ್ರಾ ಯೋಜನಾ ವೃತ್ತದ ಆಡಳಿತವನ್ನು ಯಾವುದೇ ಕಾರಣಕ್ಕೂ ಹಸ್ತಾಂತರಿಸಬಾರದು ಎಂದು ಆಗ್ರಹಿಸಿದರು. 

ADVERTISEMENT

ಭದ್ರಾ ಯೋಜನಾ ವೃತ್ತಕ್ಕೆ ಬರುವ ಜಿಲ್ಲೆಗಳ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಸರ್ಕಾರದ ನಿರ್ಧಾರದ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಇಲ್ಲದಿದ್ದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ವಿರುದ್ಧ ಚಳವಳಿಯ ಹಾದಿಯ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಾಘವೇಂದ್ರ, ರಾಜ್ಯ ಉಪಾಧ್ಯಕ್ಷರಾದ ಟಿ.ಎಂ.ಚಂದ್ರಪ್ಪ, ಇಟ್ಟೂರು ರಾಜು, ಪ್ರಮುಖರಾದ ಸಿ.ಬಿ.ಹನುಮಂತಪ್ಪ, ಜಿ.ಎನ್.ಪಂಚಾಕ್ಷರಿ, ಸಿ.ಚಂದ್ರಪ್ಪ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.