ADVERTISEMENT

ಭದ್ರಾ ಜಲಾಶಯ: ಎಡದಂಡೆ ನಾಲೆಗೆ ಜ.3ರಿಂದ, ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿವು

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:39 IST
Last Updated 2 ಜನವರಿ 2026, 5:39 IST
<div class="paragraphs"><p>ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ನಡೆದ ಸಭೆ</p></div>

ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ನಡೆದ ಸಭೆ

   

ಶಿವಮೊಗ್ಗ: ಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಜ.3ರಿಂದ ಹಾಗೂ ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿಸಲು ಶುಕ್ರವಾರ ಇಲ್ಲಿ ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ತೀರ್ಮಾನ ಕೈಗೊಂಡಿತು.

ಇಲ್ಲಿನ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಐಸಿಸಿ ಅಧ್ಯಕ್ಷರೂ ಆದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ತೀರ್ಮಾನ ಪ್ರಕಟಿಸಿದರು.

ADVERTISEMENT

'ನಾಲೆಗಳಿಗೆ ನೀರು ಹರಿವು ನಿಲ್ಲಿಸಿ ಈಗಾಗಲೇ 42 ದಿನಗಳಾಗಿವೆ. ಇದರಿಂದ ತೋಟದ ಬೆಳೆಗಳಿಗೆ ತೊಂದರೆಯಾಗಿದೆ. ಹೀಗಾಗಿ ತಕ್ಷಣ ನಾಲೆಗಳಿಗೆ ನೀರು ಹರಿಸಿ' ಎಂದು ಸಭೆಯಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮನವಿ ಮಾಡಿದರು.

ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಜನವರಿ 10ರಿಂದಲೇ ಬಲದಂಡೆ ಕಾಲುವೆಗೆ ನೀರು ಹರಿಸಿ ದಾವಣಗೆರೆ ಭಾಗದ ರೈತರ ಹಿತ ಕಾಯುವಂತೆ ಮನವಿ ಮಾಡಿದರು

ರೈತ ಮುಖಂಡ ರಘುನಾಥ್ ಮಾತನಾಡಿ, ಎಡದಂಡೆ ನಾಲೆ ಭಾಗದಲ್ಲಿ ಈಗ ಭತ್ತದ ಬದಲಿಗೆ ಅಡಿಕೆ ಬೆಳೆ ಪ್ರಾಧಾನ್ಯತೆ ಪಡೆದಿದೆ. ಹೀಗಾಗಿ 120 ದಿನಗಳ ಕಾಲಮಿತಿ ತೆಗೆದುಹಾಕಿ ಮೇ 30ರವರೆಗೂ ನೀರು ಹರಿಸುವಂತೆ ಹಾಗೂ ತಕ್ಷಣ ನೀರು ಬಿಡುವಂತೆ ಕೋರಿದರು.

ಹರಪನಹಳ್ಳಿ ಭಾಗದ ಕೊನೆಯ ಭಾಗದ ರೈತರಿಗೆ ತುರ್ತಾಗಿ ನೀರಿನ ಅಗತ್ಯ ಇದ್ದು, ಜ.8ರಿಂದಲೇ ನೀರು ಹರಿಸುವಂತೆ, ನಾಲೆ ಆಧುನೀಕರಣಗೊಳಿಸಿ ಕೊನೆಯ ಭಾಗದವರೆಗೂ ನೀರು ಹರಿಯುವಂತೆ ನೋಡಿಕೊಳ್ಳಲು ಮುಖಂಡ ಲಿಂಗರಾಜ್ ಕೋರಿದರು.

ಭದ್ರಾ ನಾಲೆಗಳ ಜಾಲ ಬಹುತೇಕ ಶಿಥಿಲಗೊಂಡಿವೆ. ತಜ್ಞರಿಂದ ವರದಿ ಪಡೆದು ದುರಸ್ತಿಗೆ ಕ್ರಮವಹಿಸುವಂತೆ ಶಿರಮಗೊಂಡನಹಳ್ಳಿಯ ಎ.ಬಿ.ಕರಿಬಸಪ್ಪ ಒತ್ತಾಯಿಸಿದರು.

ದಾವಣಗೆರೆ ವಿಭಾಗ ಹಾಗೂ ಮಲೆಬೆನ್ನೂರು ಶಾಖಾ ಕಾಲುವೆಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 15 ದಿನಗಳ ಕಾಲಾವಕಾಶ ಬೇಕಿದೆ. ಹೀಗಾಗಿ ಬಲದಂಡೆ ಕಾಲುವೆಗೆ ತುರ್ತಾಗಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ರವಿಕುಮಾರ್ ಸಭೆಗೆ ಮಾಹಿತಿ ನೀಡಿದರು.

ಕೊನೆಯ ಭಾಗದ ರೈತರಿಗೆ ನೀರು ಹರಿಸಲು ನೀರಿನ ನಿರ್ವಹಣೆ ಸರಿಯಾಗಿ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚಿಸಿದರು.

'ವಸ್ತುಸ್ಥಿತಿ ಹೇಳುತ್ತೇನೆ. ಬಲದಂಡೆ ನಾಲೆಯ ವ್ಯಾಪ್ತಿಯಲ್ಲಿ ನೀರು ಹರಿಸುವ ಅಚ್ಚುಕಟ್ಟು ವ್ಯಾಪ್ತಿಗಿಂತ ಹೆಚ್ಚು ಅಕ್ರಮ ಪಂಪ್ ಸೆಟ್ ಗಳಿಗೆ ನೀರು ಬಳಕೆಯಾಗುತ್ತಿದೆ. ಭಗವಂತನೇ ಬಂದರೂ ಈ ಪರಿಸ್ಥಿತಿ ನಿಭಾಯಿಸುವುದು ಕಷ್ಟವಿದೆ' ಎಂದು ಶಾಸಕ ಡಿ.ಜಿ.ಶಾಂತನಗೌಡ ಅಳಲು ತೋಡಿಕೊಂಡರು.

ಸಭೆಯನ್ನು ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಎಸ್ಪಿ ಬಿ.ನಿಖಿಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.