
ಭದ್ರಾವತಿ: ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ ಹಾಗೂ ಸರ್ಕಾರದ ಅನುದಾನ ಸೇರಿ ₹114.29 ಕೋಟಿ ನಿರೀಕ್ಷಿತ ಆದಾಯದ ಅಂದಾಜಿನಲ್ಲಿ 2026–27ನೇ ಬಜೆಟ್ ಸಿದ್ಧಪಡಿಸಲಾಗುತ್ತಿದೆ ಎಂದು ಪೌರಾಯುಕ್ತ ಕೆ.ಎನ್.ಹೇಮಂತ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ 2026–27ನೇ ಸಾಲಿನ ಆಯವ್ಯಯ ತಯಾರಿಸುವ ಸಂಬಂಧ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ನಗರದ ಅಭಿವೃದ್ಧಿ ಹಾಗೂ ನಿರ್ವಹಣೆ ದೃಷ್ಟಿಯಿಂದ 2026–27ನೇ ಸಾಲಿನಲ್ಲಿ ಆಸ್ತಿ ತೆರಿಗೆ, ನೀರಿನ ಶುಲ್ಕ ಸೇರಿ ₹ 16.18 ಕೋಟಿ, ರಾಜ್ಯ ಸರ್ಕಾರದ ಅನುದಾನ ₹ 60.91 ಕೋಟಿ, ಕೇಂದ್ರ ಸರ್ಕಾರದ ₹ 37.20 ಕೋಟಿ ಸೇರಿ ಒಟ್ಟು ₹ 114.29 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಜನ್ನಾಪುರ ತೆರಿಗೆದಾರರ ಸಂಘದ ಕಾರ್ಯದರ್ಶಿ ಬಿ.ಸಿ.ಚಂದ್ರಪ್ಪ ಮಾತನಾಡಿ, ‘ಹೊಸ ಸಿದ್ದಾಪುರ ಕೆರೆ ಅಭಿವೃದ್ಧಿ ಕಾಣದೆ ಸೊಳ್ಳೆಗಳ ಕಾಟ ಹೆಚ್ಚುತ್ತಿದೆ. ಪ್ರತಿ ವರ್ಷ ದೂರು ಹೇಳುತ್ತಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದರು. ಸದಸ್ಯ ಚನ್ನಪ್ಪ ಪ್ರತಿಕ್ರಿಯಿಸಿ, ‘ಕೆರೆ ಸುತ್ತ ವಾಕಿಂಗ್ ಪಾತ್ ನಿರ್ಮಿಸಿ ಅಭಿವೃದ್ಧಿಪಡಿಸಲು ₹5 ಕೋಟಿ ಬಿಡುಗಡೆಯಾಗಿದೆ. ಒಂದು ವರ್ಷದಲ್ಲಿ ಅಭಿವೃದ್ಧಿ ನಡೆಸಲಾಗುವುದು’ ಎಂದು ತಿಳಿಸಿದರು.
ಮನೆ ಮಾಲೀಕರ ಸಂಘದ ಅಧ್ಯಕ್ಷ ಬಸವರಾಜಯ್ಯ ಮಾತನಾಡಿ, ‘ಹಿರಿಯ ನಾಗರಿಕರು ಆಸ್ತಿ ಹೊಂದಿದ್ದಲ್ಲಿ ಅವರ ಆಸ್ತಿ ತೆರಿಗೆಯಲ್ಲಿ ಶೇ 10ರಷ್ಟು ಕಡಿಮೆ ಮಾಡಬೇಕು. ನಗರದ ಅಂಗಡಿಗಳ ಪರವಾನಗಿ ಕಡ್ಡಾಯ ಮಾಡುವುದರಿಂದ ನಗರಸಭೆ ಆದಾಯ ಹೆಚ್ಚಾಗುತ್ತದೆ. ವಿಐಎಸ್‌ಎಲ್, ಎಂಪಿಎಂ ವ್ಯಾಪ್ತಿಯಲ್ಲಿ ನಗರಸಭೆಗೆ ಆದಾಯ ಬರುವುದಿಲ್ಲ. ಆದರೆ ರಸ್ತೆ ತುಂಬಾ ಚೆನ್ನಾಗಿವೆ. ಕಂದಾಯ ವಸೂಲಿ ಆಗುವ ಹುಡ್ಕೋ ಕಾಲನಿ ಭಾಗಗಳಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲವಾಗಿದೆ ಎಂದು ತಿಳಿಸಿದರು.
ನೂತನ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ್, ಉಪಾಧ್ಯಕ್ಷ ಬಶೀರ್ ಅಹಮದ್ ಉಪಸ್ಥಿತರಿದ್ದರು.
ಅನೇಕ ತ್ಯಾಜ್ಯ ವಸ್ತುಗಳಿಂದ ಭದ್ರಾ ನದಿ ಕಲುಷಿತಗೊಳ್ಳುತ್ತಿರುವುದನ್ನು ನಿತ್ಯ ಕಾಣುತ್ತಿದ್ದೇವೆ. ಹೊಳೆಗೆ ತ್ಯಾಜ್ಯಗಳನ್ನು ಸುರಿಯುವುದನ್ನು ತಪ್ಪಿಸಲು ನಾಗರಿಕರ ಸಹಕಾರವೂ ಅಗತ್ಯ. ಅಭಿವೃದ್ಧಿ ದೂರದೃಷ್ಟಿ ಇಟ್ಟುಕೊಂಡು ಬಜೆಟ್ ಸಿದ್ಧಪಡಿಸಲಾಗುವುದು
–ಗೀತಾ ರಾಜಕುಮಾರ್ ನಗರಸಭೆ ಅಧ್ಯಕ್ಷೆ
ದರ ಏರಿಕೆಗೆ ಯಾವ ಮಾನದಂಡ?
ಶಿವಮೊಗ್ಗದಲ್ಲಿ ಪ್ರತಿ ಅಂಗಡಿ ವಾಣಿಜ್ಯ ತೆರಿಗೆ ₹500 ಇದೆ. ಆದರೆ ಭದ್ರಾವತಿಯಲ್ಲಿ ₹1300 ಮಾಡಿದ್ದು ಕಸ ವಿಲೇವಾರಿಗೆ ₹360 ಸಂಗ್ರಹ ಮಾಡಲಾಗುತ್ತಿದೆ. ಇದೀಗ ಏಕಾಏಕಿ ₹3420ಕ್ಕೆ ಏರಿಕೆ ಮಾಡಲಾಗಿದೆ. ನಗರಸಭೆ ಆದಾಯ ನೋಡಿದರೆ ಸಾಲದು ಭದ್ರಾವತಿ ವ್ಯಾಪಾರದ ಸ್ಥಿತಿಗತಿ ಸಹ ಗಮನದಲ್ಲಿಟ್ಟುಕೊಳ್ಳಬೇಕು. ಏಕಾಏಕಿ ದರ ಏರಿಕೆಗೆ ಯಾವ ಮಾನದಂಡ ಎಂದು ವರ್ತಕರ ಸಂಘದ ಅಧ್ಯಕ್ಷ ಸಿ.ಎನ್.ಗಿರೀಶ್ ಪ್ರಶ್ನಿಸಿದರು. ಎಲ್ಲೆಂದರಲ್ಲಿ ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಬಾರದು. ಫುಟ್‌ಪಾತ್ ವ್ಯಾಪಾರಿಗಳಿಗೆ ಫುಡ್ ಕೋರ್ಟ್ ನಿರ್ಮಿಸಬೇಕು ಎಂದರು.
ಡಿ.ಸಿ.ಮಾಯಣ್ಣ ಹೆಸರಿಡಿ ನಗರಸಭೆಯಿಂದ ನಿರ್ಮಾಣವಾಗುತ್ತಿರುವ ಗುಂಪು ಮನೆಗಳ ವಸತಿ ಸಮುಚ್ಚಯಕ್ಕೆ ಹೋರಾಟಗಾರ ಡಿ.ಸಿ.ಮಾಯಣ್ಣ ಹೆಸರಿಡುವಂತೆ ಮಾನವ ಹಕ್ಕುಗಳ ಹೋರಾಟ ವೇದಿಕೆ ಅಧ್ಯಕ್ಷ ಬಿ.ಎನ್.ರಾಜು ಒತ್ತಾಯಿಸಿದರು. ನಗರದಲ್ಲಿ ನಿರ್ಮಾಣ ಆಗುತ್ತಿರುವ ಅಂಬೇಡ್ಕರ್ ಭವನಕ್ಕೆ ₹1 ಕೋಟಿ ಮೀಸಲಿಡಬೇಕು. ಏ.14ರೊಳಗೆ ಉದ್ಘಾಟಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.