ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಕೆ.ಸಿ. ಗೀತಾ ರಾಜಕುಮಾರ್ ಸೂಚಿಸಿದರು.
ಇಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.
‘ಈ ಹಿಂದೆ ಪೊಲೀಸ್ ಅಧಿಕಾರಿಗಳು ಪ್ರತಿನಿತ್ಯ ಸಂಜೆ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಮುಖಂಡರು, ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಿದ್ದರು. ಈಗ ಅಧಿಕಾರಿಗಳು ಗಮನಹರಿಸದ ಕಾರಣ ಸಮಸ್ಯೆ ಹೆಚ್ಚಿದೆ’ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಟಿ. ನಾಗರಾಜ್ ಹೇಳಿದರು.
‘ಈಗ ಪೊಲೀಸ್ ಅಧಿಕಾರಿಗಳಿಗೆ ಜನರ ಸಂಪರ್ಕವೇ ಇಲ್ಲವಾಗಿದೆ. ₹ 5 ಲಕ್ಷ ವೆಚ್ಚದಲ್ಲಿ ಟವರ್, ಮೈಕ್, ಸಿಗ್ನಲ್ ಅಳವಡಿಸಲಾಗಿತ್ತು. ಅವೆಲ್ಲವೂ ಈಗ ನಾಪತ್ತೆಯಾಗಿದೆ’ ಎಂದು ದೂರಿದರು.
‘ಭದ್ರಾ ಕಾಲೊನಿ ಸರ್ಕಾರಿ ಶಾಲೆ ಎದುರು ಅಪಘಾತಗಳು ಹೆಚ್ಚುತ್ತಿವೆ. ಅಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ನಗರದೆಲ್ಲೆಡೆ ಸಂಚಾರ ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಿ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸಸದಸ್ಯ ಚನ್ನಪ್ಪ ಹೇಳಿದರು.
‘ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವಾಹನಗಳು ನಿಲ್ಲಿಸಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಿ.ಎಚ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳು ಹೆಚ್ಚಿದ್ದು, ಜನರಿಗೆ ಓಡಾಡಲು ಆಗದಂತಾಗಿದೆ’ ಎಂದು ಸದಸ್ಯರಾದ ಜಾರ್ಜ್, ಮೋಹನ್‌ಕುಮಾರ್ ದೂರಿದರು.
ಸದಸ್ಯ ಆರ್. ಶ್ರೇಯಸ್ ಎಲ್ಲಾ ವೃತ್ತಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿದರು.
‘ನಗರದೆಲ್ಲೆಡೆ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ತೊಂದರೆಯಾಗುತ್ತಿದೆ. ಶಾಲೆಗಳ ಕಾಂಪೌಂಡ್ ಹಾರಿ ಕಿಡಿಗೇಡಿಗಳು ಮಧ್ಯ ಸೇವನೆ ಮಾಡುತ್ತಾರೆ. ಮಹಿಳೆಯರು ರಸ್ತೆಗಳಲ್ಲಿ ಓಡಾಡುವುದೇ ಕಷ್ಟವಾಗಿದೆ. ಈ ಬಗ್ಗೆ ಕ್ರಮ ಜರುಗಿಸಿ’ ಎಂದು ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಸೂಚಿಸಿದರು.
‘ಸಂಚಾರ ನಿಯಮ ಪಾಲನೆ ಅರಿವು ಸೇರಿದಂತೆ ವಾಹನ ದಟ್ಟಣೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಪಿಐ ಶ್ರೀಶೈಲಕುಮಾರ್ ಹೇಳಿದರು.
ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್, ಪಿಎಸ್‌ಐ ಕವಿತಾ, ಕೆ. ಸುದೀಪ್‌ಕುಮಾರ್, ಕಾಂತರಾಜ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.