ADVERTISEMENT

ಭದ್ರಾವತಿ: ನಿರ್ಗತಿಕರ ಹಸಿವು ನೀಗಿಸುತ್ತಿರುವ ತಮಿಳ್ ಯೂತ್ ಅಸೋಸಿಯೇಷನ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 7:21 IST
Last Updated 19 ಮಾರ್ಚ್ 2025, 7:21 IST
ಭದ್ರಾವತಿಯ ತಮಿಳ್ ಯೂತ್‌ ಅಸೋಸಿಯೇಷನ್‌ ವತಿಯಿಂದ ಉಪಾಹಾರ ನೀಡುತ್ತಿರುವುದು
ಭದ್ರಾವತಿಯ ತಮಿಳ್ ಯೂತ್‌ ಅಸೋಸಿಯೇಷನ್‌ ವತಿಯಿಂದ ಉಪಾಹಾರ ನೀಡುತ್ತಿರುವುದು   

ಭದ್ರಾವತಿ: ಇಲ್ಲಿನ ತಮಿಳ್ ಯೂತ್ ಅಸೋಸಿಯೇಶನ್ ನಿರ್ಗತಿಕರಿಗೆ, ವಯೋವೃದ್ಧರಿಗೆ ಸರ್ಕಾರಿ ಆಸ್ಪತ್ರೆ ಬಳಿ ಇರುವ ಬಡ ರೋಗಿಗಳ ಸಹಾಯಕರಿಗೆ ಕಳೆದ ಆರು ತಿಂಗಳಿಂದ ನಿತ್ಯ ಉಚಿತವಾಗಿ ಉಪಾಹಾರ ವಿತರಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆಯುತ್ತಿದೆ.

ನಗರದ ಗಾಂಧಿ ವೃತ್ತ, ಬಸ್ ನಿಲ್ದಾಣ, ರಂಗಪ್ಪ ವೃತ್ತ, ಸರ್ಕಾರಿ ಆಸ್ಪತ್ರೆ ವೃತ್ತದಲ್ಲಿ ಬೀದಿ ಬದಿ ಮಲಗುವ ನಿರ್ಗತಿಕರಿಗೆ ಬೆಳಿಗ್ಗೆ 8ರಿಂದ 9ರವರೆಗ ಈ ಸಂಘಟನೆಯು ನಿರಂತರ ಬೆಳಗಿನ ಉಪಾಹಾರ ನೀಡುತ್ತಾ ಬಂದಿದೆ. ಇದರೊಂದಿಗೆ ನ್ಯೂಟೌನ್‌ನ ಅಂಧರ ಕೇಂದ್ರ, ಸಂಜೀವಿನಿ ವೃದ್ಧಾಶ್ರಮ, ಕಾರುಣ್ಯ ವೃದ್ಧಾಶ್ರಮ, ಸಿದ್ದಾಪುರದಲ್ಲಿರುವ ವೃದ್ಧಾಶ್ರಮಗಳನ್ನು ಆಯ್ಕೆ ಮಾಡಿ ನಿರಂತರವಾಗಿ ಉಪಾಹಾರವನ್ನು ಸ್ವಂತ ವಾಹನದಲ್ಲಿ ಪೂರೈಸಲಾಗುತ್ತಿದೆ. ಒಂದೊಂದು ಆಶ್ರಮದಲ್ಲಿಯೂ 25ಕ್ಕೂ ಅಧಿಕ ವಯೋವೃದ್ಧರಿದ್ದಾರೆ.

‘ಮೊದಲು 50 ಜನ ನಿರ್ಗತಿಕರಿಗೆ ಉಪಾಹಾರ ನೀಡಲು ಆರಂಭಿಸಿದ್ದೆವು. ನಂತರ 100, 200 ದಾಟಿ ಈಗ 600 ಜನರಿಗೆ ಉಪಾಹಾರ ನೀಡಲಾಗುತ್ತಿದೆ. ಈ ಸಮಯದಲ್ಲಿ ಕೆಲವು ದಾನಿಗಳು ಜನ್ಮದಿನ , ವಿವಾಹ ವಾರ್ಷಿಕೋತ್ಸವ, ಪುಣ್ಯ‌ಸ್ಮರಣೆ... ಹೀಗೆ ಹಲವು ಕಾರ್ಯಕ್ರಮಗಳನ್ನು ನಮ್ಮೊಂದಿಗೆ ಆಚರಿಸಿಕೊಂಡು ಉಪಹಾರದ ಪ್ರಾಯೋಜಕತ್ವ ವಹಿಸಿಕೊಳ್ಳುತ್ತಾರೆ. ಪ್ರಾಯೋಜಕತ್ವದಿಂದ ತಿಂಗಳಿಗೆ ಶೇ 50 ಭಾಗದಷ್ಟು ಉಪಾಹಾರ ಸಂಗ್ರಹಿಸಲಾಗುತ್ತಿದೆ. ಇನ್ನುಳಿದ ಭಾಗವನ್ನು ಅಸೋಸಿಯೇಶನ್ ವತಿಯಿಂದಲೇ ನೀಡಲಾಗುತ್ತಿದೆ. ದಿನಕ್ಕೆ ₹ 3,000 ದಿಂದ ₹ 3,500ದವರೆಗೆ ಖರ್ಚು ಬರುತ್ತದೆ. ತಮ್ಮದೇ ಗಾಡಿಯಲ್ಲಿ ವಿತರಣೆ ಕಾರ್ಯ ನಡೆಸುವುದರಿಂದ ಸಾಗಣೆ ವೆಚ್ಚ ಉಳಿಯುತ್ತದೆ’ ಎಂದು ಅಸೋಸಿಯೇಷನ್ ಗೌರವಾಧ್ಯಕ್ಷ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹಸಿವು ನೀಗಿಸುವ ಕಾರ್ಯ 200 ದಿನಗಳಿಗೂ ಹೆಚ್ಚು ದಿನಗಳಿಂದ ನಡೆಯುತ್ತಿದೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಉಪಾಹಾರದ ಪ್ರಾಯೋಜಕತ್ವ ನೀಡುವವರಿಗೆ ಸಂದೇಶ ರವಾನಿಸಲಾಗುತ್ತದೆ. ಅದು ಬಿಟ್ಟರೆ ಪ್ರಚಾರಕ್ಕೆ ಯಾವುದೇ ಮಾರ್ಗೋಪಾಯಗಳಿಲ್ಲ. ನಮ್ಮೊಂದಿಗೆ ಇತರರು ಈ ಕಾರ್ಯದಲ್ಲಿ ಕೈಜೋಡಿಸಿದರೆ. ನಿರ್ಗತಿಕರಿಗೆ ನೆರವಿನ ಹಸ್ತ ಚಾಚಬಹುದು’ ಎಂದು ಅವರು ಮನವಿ ಮಾಡಿದರು.

ಊಟದ ಬದಲು ಉಪಾಹಾರ:

‘ನಿರ್ಗತಿಕರು ಮಧ್ಯಾಹ್ನದ ಊಟ ಪಡೆಯಲು ಹೆಚ್ಚು ಅವಕಾಶ ಇದೆ. ಆದರೆ, ಬೆಳಗ್ಗಿನ ಉಪಾಹಾರ ಪಡೆಯಲು ಹೆಣಗಾಡುತ್ತಿರುತ್ತಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಹಸಿವಿನಿಂದ ಇರುವುದು ಗಮನಿಸಿ ಉಪಾಹಾರ ನೀಡಲು ತೀರ್ಮಾನ ಮಾಡಿದೆವು’ ಎಂದು ಸಂಘದ ಪದಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಸಿವು ನೀಗಿಸುವ ಕಾರ್ಯಕ್ಕೆ ಪ್ರೇರಣೆ

‘2024ರ ಆಗಸ್ಟ್ 15ರಂದು ಕೊಲ್ಕತ್ತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಪಟ್ಟಂತೆ ತಮಿಳು ಯೂತ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಆ ವೇಳೆ ಪ್ರತಿಭಟನೆಯಲ್ಲಿ ನಿರತ ವ್ಯಕ್ತಿಗಳಿಗೆ ಉಪಾಹಾರ ನೀಡಲಾಯಿತು. ಆ ಸಮಯದಲ್ಲಿ ಅಲ್ಲಿಗೆ ನಿರ್ಗತಿಕರು ವಯೋವೃದ್ದರೂ ಬಂದು ಉಪಾಹಾರದ ಪೊಟ್ಟಣ ಪಡೆದರು. ಇದು ಬಡವರ ಹಸಿವು ನೀಗಿಸುವ ಕಾರ್ಯಕ್ಕೆ ಪ್ರೇರಣೆಯಾಯಿತು. ಅದೇ ದಿನ ಸಂಘ ರಚಿಸಲಾಯಿತು. ಅದರಲ್ಲಿ ಈಗ 3000ಕ್ಕೂ ಹೆಚ್ಚು ಸದಸ್ಯರು ಇದ್ದಾರೆ’ ಎಂದು ಸಂಘದ ಉಪಾಧ್ಯಕ್ಷ ಪ್ರದೀಪ್ ಸಾಮಾಜಿಕ ಕಾರ್ಯಕ್ಕೆ ಪ್ರೇರಣೆಯಾದ ಘಟನೆ ಬಗ್ಗೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.