ಭದ್ರಾವತಿ: ತಾಲ್ಲೂಕಿನ ಮಾವಿನಕೆರೆ ಗ್ರಾಮದ ರೈತ, ಬಿ.ಎಸ್.ಸಿ ಪದವೀಧರ ಸೈಯದ್ ತೌಫಿಕ್ ಅಹಮದ್ ಅವರು ತಮ್ಮ 5 ಎಕರೆ ಕೃಷಿಭೂಮಿಯಲ್ಲಿ ಹೈನುಗಾರಿಕೆ, ಕುಕ್ಕುಟೋದ್ಯಮ ಹಾಗೂ ಮೀನುಗಾರಿಕೆ ಒಳಗೊಂಡ ಸಮಗ್ರ ಕೃಷಿ ವಿಧಾನದಡಿ ಉತ್ತಮ ಲಾಭ ಪಡೆಯುತ್ತಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.
ಬಾಳೆ, ರಾಗಿ, ತೆಂಗು, ಭತ್ತ, ಶುಂಠಿ, ಅಡಿಕೆ, ಪಶುಗಳಿಗೆ ಮೇವಾಗಿ ಜೋಳ, ಹುಲ್ಲು ಬೆಳೆದಿದ್ದಾರೆ. ಕೃಷಿ ಹೊಂಡ ನಿರ್ಮಾಣ, ಮೀನುಗಾರಿಕೆ, ಗೊಬ್ಬರಕ್ಕಾಗಿ ಗುಂಡಿ ನಿರ್ಮಾಣ, ಹಸು ಮತ್ತು ಕೋಳಿ ಸಾಕಾಣಿಕೆ ಹೀಗೆ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಯಶಸ್ಸು ಸಾಧಿಸಿದ್ದಾರೆ.
ಹೈನುಗಾರಿಕೆ:
25ಕ್ಕೂ ಹೆಚ್ಚು ಜಾನುವಾರುಗಳನ್ನು ಸಾಕಿದ್ದು, ಅವುಗಳಿಂದ ಪ್ರತಿದಿನ 135 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಮಾವಿನಕೆರೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ರೈತ ಎಂಬ ಹೆಗ್ಗಳಿಕೆ ಇವರಿಗಿದೆ.
‘ಪಶುಗಳ ಮೇವಿಗಾಗಿಯೇ ಹುಲ್ಲು, ಜೋಳ ಬೆಳೆಯಲು 1 ಎಕರೆಯಷ್ಟು ಮೀಸಲಿಡಲಾಗಿದೆ. ಗೊಬ್ಬರದ ಗುಂಡಿ ತೆರೆದು ಹಸುಗಳ ಸಗಣಿಯನ್ನು ಅಲ್ಲಿ ಸಂಗ್ರಹಿಸಲಾಗುತ್ತದೆ. ಅದು ಗೊಬ್ಬರವಾಗಿ ಮಾರ್ಪಟ್ಟ ಬಳಿಕ ತಮ್ಮ ಜಮೀನಿಗೆ ಹಾಗೂ ಇತರರಿಗೂ ಮಾರಾಟ ಮಾಡಿ ಆದಾಯ ಪಡೆಯಲಾಗುವುದು. ವರ್ಷಕ್ಕೆ 30 ಟನ್‌ನಷ್ಟು ಗೊಬ್ಬರ ದೊರೆಯುತ್ತದೆ’ ಎಂದು ಸೈಯದ್ ತೌಫಿಕ್ ಅಹಮದ್ ಹೇಳುತ್ತಾರೆ.
ಕೃಷಿ ಹೊಂಡ:
‘ಕೃಷಿ ಇಲಾಖೆಯ ಸಹಾಯದಿಂದ ಕೃಷಿ ಹೊಂಡ ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ಜಮೀನಿಗೆ ನೀರು ಬಳಸುವುದಲ್ಲದೇ, ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತದೆ. ಈಚೆಗೆ ಸಾವಿರ ಮೀನು ಮರಿಗಳನ್ನು ಅವುಗಳಲ್ಲಿ ಬಿಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಕೋಳಿ ಸಾಕಣೆ:
150X25 ಅಡಿ ವಿಸ್ತೀರ್ಣದ ಎರಡು ಶೆಡ್ ನಿರ್ಮಿಸಲಾಗಿದ್ದು, 6,000 ಕೋಳಿ ಸಾಕಾಣಿಕೆ ಮಾಡಲಾಗಿದೆ. ಇದರಿಂದಲೂ ಉತ್ತಮ ಆದಾಯ ಪಡೆಯಬಹುದು’ ಎಂದು ತೌಫಿಕ್ ಹೇಳುತ್ತಾರೆ.
ಕೋಳಿಗಳಿಂದ ಸಿಗುವ ಗೊಬ್ಬರವನ್ನು ಸಂಗ್ರಹಿಸಿ, ಅದನ್ನೂ ಮಾರಾಟ ಮಾಡಲಾಗುವುದು. ಗೊಬ್ಬರ ಮಾರಾಟದಿಂದಲೇ ತಿಂಗಳಿಗೆ ₹ 20,000ದಷ್ಟು ಆದಾಯ ಪಡೆಯಲಾಗುತ್ತಿದೆ. ಕೋಳಿ ಸಾಕಣೆಯಿಂದ ಲಾಭ ಪಡೆಯಲು ಸ್ವಚ್ಛತೆ ಮತ್ತು ನಿರ್ವಹಣೆ ಅವಶ್ಯಕ. ಪ್ರತಿ ದಿನ ಮುಂಜಾನೆ 4 ಗಂಟೆಯಿಂದಲೇ ಸ್ವಚ್ಛತೆ ಕಾರ್ಯ ಆರಂಭವಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ ಎದುರು ವಿವರಿಸಿದ್ದಾರೆ.
ಸಮಗ್ರ ಕೃಷಿಯಿಂದ ಸಿಗುವ ಲಾಭದ ಕುರಿತು ಇಲಾಖೆಯಿಂದ ಸಿಕ್ಕ ಮಾಹಿತಿ ನನ್ನ ಯಶಸ್ಸಿಗೆ ಕಾರಣಸೈಯದ್ ತೌಫಿಕ್ ಅಹಮದ್ ಕೃಷಿಕ
ಕೃಷಿಯಲ್ಲಿ ತೌಫಿಕ್ ಸಾಧನೆ ಗುರುತಿಸಿ ಈಚೆಗೆ ಕೃಷಿ ಇಲಾಖೆ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಲಾಗಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ರೈತರು ಯಶಸ್ಸು ಕಾಣಬಹುದುರಾಕೇಶ್ ತಾಲ್ಲೂಕು ಕೃಷಿ ಇಲಾಖೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.