ADVERTISEMENT

ಭದ್ರಾವತಿ | ಸಂಚಾರ ದಟ್ಟಣೆ: ಫುಡ್‌ ಕೋರ್ಟ್ ನಿರ್ಮಾಣವೇ ಸಮಸ್ಯೆಗಳಿಗೆ ಪರಿಹಾರ

ತಿಂಡಿ ಅಂಗಡಿ, ತಳ್ಳುಗಾಡಿ, ಮೊಬೈಲ್ ಕ್ಯಾಂಟೀನ್‌ಗಳ ಕಾರುಬಾರು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 7:37 IST
Last Updated 14 ಏಪ್ರಿಲ್ 2024, 7:37 IST
<div class="paragraphs"><p>ಬಸವೇಶ್ವರ ವೃತ್ತದಲ್ಲಿ ತಿಂಡಿ ಗಾಡಿಗಳ ಮುಂದೆ ನಿಲ್ಲಿಸಿರುವ ವಾಹನಗಳು</p></div>

ಬಸವೇಶ್ವರ ವೃತ್ತದಲ್ಲಿ ತಿಂಡಿ ಗಾಡಿಗಳ ಮುಂದೆ ನಿಲ್ಲಿಸಿರುವ ವಾಹನಗಳು

   

ಭದ್ರಾವತಿ: ನಗರದಲ್ಲಿ ಆಹಾರಪ್ರಿಯರ ಸಂಖ್ಯೆ ಹೆಚ್ಚಿದಂತೆಲ್ಲಾ, ಎಲ್ಲೆಂದರೆಲ್ಲಿ ಬೀದಿಬದಿ ತಿಂಡಿ ಅಂಗಡಿಗಳು, ತಳ್ಳುಗಾಡಿಗಳು, ಮೊಬೈಲ್ ಕ್ಯಾಂಟೀನ್‌ಗಳೂ ಹುಟ್ಟುಕೊಂಡಿವೆ. ಸಂಜೆ ಆಗುತ್ತಿದ್ದಂತೆಯೇ ಜನರು ಅಲ್ಲಿಗೆ ಲಗ್ಗೆಯಿಡುತ್ತಾರೆ. ರಸ್ತೆಯ ಇಕ್ಕೆಲಗಳಲ್ಲಿ ಹೀಗೆ ಜನ ಸೇರುವುದರಿಂದ ವಾಹನ ದಟ್ಟಣೆ ಹೆಚ್ಚಾಗುವುದರ ಜತೆಗೆ ಪಾರ್ಕಿಂಗ್ ಸಮಸ್ಯೆಯೂ ಶುರುವಾಗಿದೆ. 

ಜನದಟ್ಟಣೆ ಹೆಚ್ಚಿದ ಪ್ರದೇಶದಲ್ಲಿ ಮೊಬೈಲ್‌ ಕ್ಯಾಂಟೀನ್‌ಗಳು ಹೆಚ್ಚಾಗಿ ಕಂಡುಬರುತ್ತಿವೆ. ಗ್ರಾಹಕರು ಅದರ ಮುಂದೆಯೇ ತಮ್ಮ ವಾಹನ ನಿಲ್ಲಿಸಿಕೊಂಡು ತಿಂಡಿ ಸೇವಿಸುತ್ತಾರೆ. ಹೀಗಾಗಿ ದಟ್ಟಣೆ ಮಾಮೂಲಿ ಎಂಬಂತಾಗಿದೆ. ನಗರದಲ್ಲಿ ನಾಲ್ಕೈದು ಸಂಖ್ಯೆಯಲ್ಲಿದ್ದ ಮೊಬೈಲ್‌ ಕ್ಯಾಂಟೀನ್‌ಗಳು ಈಗ ಬಸವೇಶ್ವರ ವೃತ್ತವೊಂದರಲ್ಲೇ 20ಕ್ಕೂ ಹೆಚ್ಚಿವೆ. ತರೀಕೆರೆ ವೃತ್ತ, ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತ, ಬಸ್ ನಿಲ್ದಾಣ ಸೇರಿದಂತೆ ಎಲ್ಲೆಲ್ಲೂ ಮೊಬೈಲ್ ಕ್ಯಾಂಟೀನ್‌ಗಳದ್ದೇ ಕಾರುಬಾರು.

ADVERTISEMENT

ಸಂಜೆ ಹೊತ್ತು ತೆರೆಯುತ್ತಿದ್ದ ಕ್ಯಾಂಟೀನ್‌ಗಳು ಈಗ ಹಗಲು ಹೊತ್ತಿನಲ್ಲೇ ಶುರುವಾಗುತ್ತಿವೆ. ಮಾಂಸಾಹಾರಿ ಖಾದ್ಯಗಳ ಕ್ಯಾಂಟೀನ್‌ ಬಳಿ ಅಳಿದುಳಿದ ತಿಂಡಿ ತಿನ್ನಲು ಬರುವ ನಾಯಿಗಳ ಕಾಟವೂ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಫುಡ್‌ಕೋರ್ಟ್ ಪರಿಹಾರ: ಜನ, ವಾಹನ ದಟ್ಟಣೆ ತಗ್ಗಿಸಲು, ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಸುಸಜ್ಜಿತ ಫುಡ್‌ಕೋರ್ಟ್ ನಿರ್ಮಿಸಿ, ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಸ್ಥಳೀಯರಾದ ಶಂಕರ್ ಆಗ್ರಹಿಸುತ್ತಾರೆ.

‘ತಿಂಡಿ ತಿನ್ನುವವರು ಗಾಡಿಗಳ ಬಳಿ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರಿಗೆ ಕಷ್ಟವಾಗಿದೆ ಎಂದು ಸಾವಿತ್ರಿ ತಿಳಿಸಿದರು. 

‘ಪ್ರತಿದಿನ ಬೆಳಿಗ್ಗೆ ರಸ್ತೆ ಸ್ವಚ್ಛಗೊಳಿ ಸುವಾಗ ಪ್ಲೇಟ್‌, ಎಲೆ, ಪೇಪರ್‌ ಪೊಟ್ಟಣಗಳು ಎಲ್ಲೆಂದರಲ್ಲಿ ಬಿದ್ದಿರು ತ್ತವೆ. ಫುಡ್‌ಕೋರ್ಟ್ ನಿರ್ಮಿಸಿದರೆ ಸಾರ್ವಜನಿಕರು, ವ್ಯಾಪಾರಸ್ಥರು ಒಂದೇ ಸ್ಥಳದಲ್ಲಿ ಸೇರಿದರೆ ಸ್ವಚ್ಛಗೊಳಿಸಲು ಅನುಕೂಲವಾಗುತ್ತದೆ’ ಎಂದು ಪೌರಕಾರ್ಮಿಕ ಮಣಿಕಂಠ ಕೋರಿದರು.

ಸಿದ್ಧವಾಗುತ್ತಿದೆ ಯೋಜನೆ

ನಗರವು ಶುಚಿತ್ವದಿಂದ ಕೂಡಿರಬೇಕು. ಜನತೆ ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಫುಡ್‌ಕೋರ್ಟ್‌ ನಿರ್ಮಾಣ ಮಾಡಲಾಗುತ್ತದೆ ಎಂದು ನಗರಸಭೆ ಆಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ತಿಳಿಸಿದರು. 

ಸುಸಜ್ಜಿತ ಹಾಗೂ ಆಕರ್ಷಕವಾದ ಶೆಲ್ಟರ್‌, ಪ್ರತಿಯೊಬ್ಬರಿಗೂ ಇಂತಿಷ್ಟು ಜಾಗ, ವಿದ್ಯುತ್‌ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ಗ್ರಾಹಕರು ಆಹಾರ ಸೇವಿಸಲು ಸ್ಥಳಾವಕಾಶ, ಪಾದಚಾರಿಗಳು ಓಡಾಡಲು ರಸ್ತೆ, ಫುಡ್‌ಕೋರ್ಟ್‌ ಸಮೀಪಕ್ಕೆ ವಾಹನಗಳು ಬರದಂತೆ ರೈಲಿಂಗ್ಸ್‌ ನಿರ್ಮಾಣ ಸೇರಿ ಹಲವು ವ್ಯವಸ್ಥೆಗಳನ್ನು ಕಲ್ಪಿಸುವ ಯೋಜನೆ ಸಿದ್ದಗೊಳ್ಳುತ್ತಿದೆ ಎಂದರು. 

‘ಫುಡ್‌ಕೋರ್ಟ್ ಆರಂಭವಾದ ನಂತರ ಎಲ್ಲೆಂದರಲ್ಲಿ ತಿಂಡಿ ವಾಹನ ನಿಲ್ಲಿಸಿಕೊಳ್ಳುವಂತಿಲ್ಲ. ತಿಂಡಿ ಒಂದೆಡೆ ಇದ್ದರೆ ವ್ಯಾಪಾರಿಗಳಿಗೂ, ಗ್ರಾಹಕರಿಗೂ ಅನುಕೂಲವಾಗಲಿದೆ. ತಾರತಮ್ಯಕ್ಕೆ ಆಸ್ಪದ ನೀಡದಂತೆ ಎಲ್ಲ ವ್ಯಾಪಾರಿಗಳಿಗೂ ಜಾಗ ಒದಗಿಸಲಾಗುತ್ತದೆ’ ಎಂದು ತಿಳಿಸಿದರು. 

5 ಕಡೆ ಫುಡ್‌ ಕೋರ್ಟ್‌
ನಗರದ ಐದು ಸ್ಥಳಗಳಲ್ಲಿ ಫುಡ್‌ಕೋರ್ಟ್ ನಿರ್ಮಿಸಲು ಸ್ಥಳ ನಿಗದಿಪಡಿಸಲಾಗಿದೆ ಎಂದು ನಗರಸಭೆ ಎಂಜಿನಿಯರ್ ಪ್ರಸಾದ್ ತಿಳಿಸಿದರು.  ಮೊದಲ ಹಂತದಲ್ಲಿ ₹ 95 ಲಕ್ಷ ವೆಚ್ಚದಲ್ಲಿ ತರೀಕೆರೆ ರಸ್ತೆಯಲ್ಲಿ 24 ಮಳಿಗೆಗಳ ಫುಡ್‌ಕೋರ್ಟ್ ನಿರ್ಮಾಣವಾಗಲಿದೆ. ಲೋಕಸಭಾ ಚುನಾವಣೆ ನಂತರ ಟೆಂಡರ್ ಕರೆಯಲಾಗುವುದು. ಮುಂದಿನ ದಿನಗಳಲ್ಲಿ ಹೂ, ಹಣ್ಣು ವ್ಯಾಪಾರಕ್ಕೂ ಒಂದೆಡೆ ಸ್ಥಳ ಒದಗಿಸಲಾಗುವುದು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.