
ಸಾಗರ: ‘ವೈರಾಗ್ಯವೆಂದರೆ ಆಸೆಗೆ ಕಡಿವಾಣ ಹಾಕುವುದೇ ಹೊರತು ಜೀವನಕ್ಕೆ ವಿಮುಖರಾಗುವುದಲ್ಲ’ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಶಾರದಾಂಬಾ ದೇವಸ್ಥಾನದಲ್ಲಿ ಗುರುವಾರ ನಡೆದ ಭಗವದ್ಗೀತೆ ಅಭಿಯಾನ ಕಾರ್ಯಕ್ರಮದಲ್ಲಿ ಅಭಿಯಾನದ ಭಿತ್ತಿಪತ್ರ ಬಿಡುಗಡೆಗೊಳಿಸಿ ‘ಶ್ರೀಧರರು ಮತ್ತು ಭಗವದ್ಗೀತೆ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
‘ತಾಲ್ಲೂಕಿನ ವರದಪುರ ಕ್ಷೇತ್ರದ ಶ್ರೀಧರ ಸ್ವಾಮಿಗಳು ಶ್ರದ್ಧೆ ಮತ್ತು ವೈರಾಗ್ಯದ ಪ್ರತೀಕದಂತಿದ್ದರು. ಭೋಗದ ಕಡೆ ಮನಸ್ಸನ್ನು ಹರಿಯಬಿಡದೆ ಮೌಲ್ಯಗಳನ್ನು ಅಳವಡಿಸಿಕೊಂಡರೆ ಬದುಕು ಅರ್ಥಪೂರ್ಣವಾಗುತ್ತದೆ ಎಂಬ ಅವರ ಸಂದೇಶ ಇಂದಿಗೂ ಸಕಾಲಿಕವಾಗಿದೆ’ ಎಂದರು.
‘ನ. 30ರಂದು ಶಿವಮೊಗ್ಗದಲ್ಲಿ ಭಗವದ್ಗೀತಾ ಅಭಿಯಾನ ಮಹಾ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಅಭಿಯಾನದ ಮೂಲಕ ಸಕಾರಾತ್ಮಕ ಚಿಂತನೆ ಬೆಳೆಸುವ, ನಮ್ಮ ಸಂಸ್ಕೃತಿಯ ಶ್ರೇಷ್ಠತೆಯನ್ನು ಬಿಂಬಿಸುವ ಕಾಯಕ ನಡೆದಿದೆ’ ಎಂದು ಅವರು ತಿಳಿಸಿದರು.
ಭಗವದ್ಗೀತಾ ಅಭಿಯಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವಿ.ಜಯರಾಮ್, ಪ್ರಮುಖರಾದ ಮ.ಸ.ನಂಜುಂಡಸ್ವಾಮಿ, ಕೃಷ್ಣಮೂರ್ತಿ ವಾಮನಾಚಾರ್, ಜ್ಯೋತಿ ಮಣೂರು, ಬದರೀನಾಥ್, ಸವಿತಾ ಶ್ರೀಕಾಂತ್, ಪ್ರಭಾ ವೆಂಕಟೇಶ್, ಜ್ಯೋತಿ ನಂಜುಂಡಸ್ವಾಮಿ, ಎಸ್.ಕೆ.ಪ್ರಭಾವತಿ, ರೇಷ್ಮಾ ರಘುಪತಿ, ಕಸ್ತೂರಿ ಕೃಷ್ಣಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.