ADVERTISEMENT

‘ಭಗೀರಥರಿಂದ ಪಾಪ‌ ಕಳೆಯುವ ಶ್ರೇಷ್ಠ ಕಾಯಕ’

ಭಗೀರಥ ಜಯಂತಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2025, 15:55 IST
Last Updated 4 ಮೇ 2025, 15:55 IST
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು   

ಶಿವಮೊಗ್ಗ: ಭಗೀರಥರು ನಿರ್ಜೀವ ವಸ್ತುಗಳಿಗೆ ಸಂಸ್ಕಾರ ನೀಡಿದವರು. ಪಿತೃಗಳಿಗೆ ಮುಕ್ತಿ ನೀಡಲು ಅತ್ಯಂತ ಪವಿತ್ರಳಾದ ಗಂಗೆಯನ್ನು ಧರೆಗಿಳಿಸಿ, ನಮ್ಮೆಲ್ಲರನ್ನು ಪವಿತ್ರಗೊಳಿಸಿದವರು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. 

ಜಿಲ್ಲಾಡಳಿತ, ಉಪ್ಪಾರ ಸಮಾಜದ ಜಿಲ್ಲಾ ಘಟಕದಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪಿತೃಗಳಿಗೆ ಶಕ್ತಿ ಕೊಡಲು ಗಂಗೆಯನ್ನು ಧರೆಗಿಳಿಸಿ ನಮ್ಮೆಲ್ಲರ ಪಾಪ‌ ಕಳೆಯುವ ಶ್ರೇಷ್ಠ ಕೆಲಸ ಮಾಡಿದರು. ಕಲುಷಿತವನ್ನು ಪವಿತ್ರಗೊಳಿಸುವುದು ಗಂಗೆ ಮಾತ್ರ. ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ’ ಎಂದರು.

ADVERTISEMENT

‘ಉಪ್ಪಾರ ಸಣ್ಣ ಸಮಾಜವಲ್ಲ.‌ ಪವಿತ್ರ ಗಂಗೆಯನ್ನು ನೀಡಿದ ಸಮಾಜ. ಎಲ್ಲ ಸಣ್ಣ ಸಮಾಜಗಳು ಒಟ್ಟಾಗಿದ್ದಾಗ ಇಡೀ ಸಮಾಜಕ್ಕೆ ಶಕ್ತಿ ಬರುತ್ತದೆ. ಭಗೀರಥ ಪ್ರಯತ್ನದ ಮೂಲಕವೇ ಸಮಾಜವನ್ನು‌ ಇನ್ನೂ ಉತ್ತಮ ರೀತಿಯಲ್ಲಿ‌ ಕಟ್ಟಿ, ಶ್ರೇಷ್ಠ ಕೊಡುಗೆಗಳನ್ನು ನೀಡಬೇಕಿದೆ’ ಎಂದರು.

‘ಯಶಸ್ವಿ ತಪಸ್ಸಿನ‌ ಮೂಲಕ ಗಂಗಾ ಮಾತೆಯನ್ನು ಧರೆಗಿಳಿಸಿದವರು ಭಗೀರಥ. ಭರತ ಖಂಡದಲ್ಲಿ‌ ಅತ್ಯಂತ ಪವಿತ್ರ ನದಿ ಗಂಗೆ. ಇಂತಹ ಗಂಗೆ ಮಾತೆಯನ್ನು‌ ಪಡೆದ ನಾವೇ ಧನ್ಯರು’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಮಟ್ಟದ ಅಧ್ಯಕ್ಷ ಚಂದ್ರಭೂಪಾಲ್ ಹೇಳಿದರು.

‘ಉಪ್ಪಾರ ಸಮಾಜಕ್ಕೆ ಒಂದು ಉತ್ತಮ‌ ಇತಿಹಾಸವಿದೆ. ಬೇರೆ ಬೇರೆ ಸ್ಥಳಗಳಲ್ಲಿ ಈ ಸಮಾಜವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಉಪ್ಪಾರರು ಇಕ್ಷಾಕು ಕುಲಕ್ಕೆ ಸೇರಿದವರು. ಉಪ್ಪಾರ ಸಮಾಜದ ಹೆಸರು ಉಳಿಯಲು ಭಗೀರಥರು ಕಾರಣರು’ ಎಂದು ಉಪ್ಪಾರ ಸಂಘದ ಪ್ರಧಾನ ಜಿಲ್ಲಾ ಕಾರ್ಯದರ್ಶಿ ಕೆ. ದೇವೇಂದ್ರಪ್ಪ‌ ಹೇಳಿದರು.

‘ಸಮಾಜದವರೆಲ್ಲ ಒಗ್ಗೂಡಿ, ಒಗ್ಗಟ್ಟಿನಿಂದ ಮುಂದೆ ಬರಬೇಕು. ಸಮಾಜದ ಇತಿಹಾಸ ತಿಳಿಯಬೇಕು. ಪ್ರಯತ್ನ ಎಂದಿಗೂ ಕೈಬಿಡಬಾರದು. ಛಲ ಬಿಡದೆ, ದೃಢ ಸಂಕಲ್ಪದಿಂದ ಉತ್ತಮ‌ ಫಲ ಸಿಗುತ್ತದೆ ಎಂದು ಭಗೀರಥರು ತಿಳಿಸಿಕೊಟ್ಟಿದ್ದು, ನಾವೆಲ್ಲ ಅವರ ದಾರಿಯಲ್ಲಿ‌ ಸಾಗಬೇಕು’ ಎಂದು ಖಜಾಂಚಿ ನಾಗರಾಜ ಕಂಕಾರಿ ಹೇಳಿದರು. 

ತಹಶೀಲ್ದಾರ್‌ ರಾಜೀವ್ ಸ್ವಾಗತಿಸಿದರು. ಸಮಾಜದ ಮುಖಂಡರು ಪಾಲ್ಗೊಂಡಿದ್ದರು. 

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ: ಎಸ್.ಟಿ.ಹಾಲಪ್ಪ

‘ರಾಮನ ಕುಲದಲ್ಲಿ ಹುಟ್ಟಿದ ನಾವು ನಂತರದ ದಿನಗಳಲ್ಲಿ ತಮ್ಮ‌ ಕುಲ ಕಸುಬಿನಿಂದ ಗುರುತಿಸಲ್ಪಡುತ್ತ ಮಣ್ಣಿನ‌ ಕೆಲಸ ಕೆರೆ ಕಟ್ಟೆ ಮನೆ ಕಟ್ಟುವ ಕೆಲಸದಲ್ಲಿ ತೊಡಗಿದ್ದೇವೆ. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಬೇಕು. ಶೈಕ್ಷಣಿಕ ಸಾಮಾಜಿಕ ಆರ್ಥಿಕವಾಗಿ ಬೆಳೆದು ಸಮಾಜಕ್ಕೆ ಉತ್ತಮ‌ ಕೊಡುಗೆ ನೀಡಬೇಕು. ಸಮಾಜದವರು ಒಗ್ಗಟ್ಟಿನಿಂದ ಇರಬೇಕು’ ಎಂದು ಉಪ್ಪಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಟಿ.ಹಾಲಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.