ADVERTISEMENT

ವಿದೇಶದತ್ತ ಮಕ್ಕಳು; ವೃದ್ಧಾಶ್ರಮಕ್ಕೆ ಪೋಷಕರು

ಬ್ರಾಹ್ಮಣ ವಿದ್ಯಾರ್ಥಿನಿಯಲದ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಸೂರ್ಯಪ್ರಕಾಶ್ ಪಂಡಿತ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 15:33 IST
Last Updated 10 ಫೆಬ್ರುವರಿ 2019, 15:33 IST
ಶಿವಮೊಗ್ಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಾಹ್ಮಣ ವಿದ್ಯಾರ್ಥಿನಿಲಯದ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್‌. ಸೂರ್ಯಪ್ರಕಾಶ್ ಪಂಡಿತ್ ಮಾತನಾಡಿದರು.
ಶಿವಮೊಗ್ಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಾಹ್ಮಣ ವಿದ್ಯಾರ್ಥಿನಿಲಯದ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್‌. ಸೂರ್ಯಪ್ರಕಾಶ್ ಪಂಡಿತ್ ಮಾತನಾಡಿದರು.   

ಶಿವಮೊಗ್ಗ:ಮಕ್ಕಳ ಉಜ್ವಲ ಭವಿಷ್ಯಕ್ಕೆ ತುಡಿಯುವ ಪೋಷಕರು ಕಷ್ಟಪಟ್ಟು ಶಿಕ್ಷಣ ಕೊಡಿಸಿ, ಉತ್ತಮ ವೇತನಕ್ಕೆ ವಿದೇಶಗಳಿಗೆ ಕಳುಹಿಸುತ್ತಾರೆ. ತಾವು ವೃದ್ಧಾಶ್ರಮಗಳ ಕದತಟ್ಟುತ್ತಿದ್ದಾರೆ ಎಂದು ‘ಪ್ರಜಾವಾಣಿ’ ಮುಖ್ಯ ಉಪ ಸಂಪಾದಕ ಎಸ್‌. ಸೂರ್ಯಪ್ರಕಾಶ್ ಪಂಡಿತ್ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಬಿ.ಎಚ್‌. ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿನಿಯಲದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಆರಂಭದಿಂದಲೇ ಅಧಿಕ ಶುಲ್ಕ ತೆತ್ತು ಪ್ರತಿಷ್ಠಿತ ಶಾಲೆಗಳಲ್ಲಿ ಓದಿಸುತ್ತಾರೆ. ಸಾಧನೆ ಕಂಡು ಖಷಿ ಪಡುತ್ತಾರೆ. ವಿದೇಶಗಳಲ್ಲಿ ಕೈತುಂಬಾ ಕೆಲಸ ಸಿಕ್ಕಾಗ ಅವರ ಸಂತಸಕ್ಕೆ ಪಾರವೇ ಇರುವುದಿಲ್ಲ. ಮಕ್ಕಳು ಶ್ರೇಯಸ್ಸು ಅವರಲ್ಲಿ ಆನಂದಸಾಗರವನ್ನೇ ತರುತ್ತದೆ. ಅಲ್ಲಿಗೆ ತೆರಳಿದ ಮಕ್ಕಳು ಅಲ್ಲೇ ಮದುವೆಯಾಗಿ, ಆ ದೇಶದ ಪೌರತ್ವ ಪಡೆದು, ಅಲ್ಲೇ ನೆಲೆನಿಂತಾಗ ಪೋಷಕರ ಸಂಭ್ರಮ ಕರಗಲು ಆರಂಭಿಸುತ್ತದೆ.

ADVERTISEMENT

ವೃದ್ಧಾಪ್ಯದಲ್ಲಿ ಅವರ ಸಾಮೀಪ್ಯ ದೊರಕದೆ ಕೊರಗುತ್ತಾರೆ. ಎಷ್ಟೇ ಹಣ ಇದ್ದರೂ ಸಂಬಂಧಗಳು ಹತ್ತಿರ ಇದ್ದಾಗ ಸಿಗುವ ಸುಖಕ್ಕೆ ಸಮವಲ್ಲ ಎಂಬ ಸತ್ಯ ಅರ್ಥವಾಗುತ್ತದೆ. ಮನೆಯಲ್ಲಿ ಬದುಕು ಅಸಹನೀಯವಾಗಿ ವೃದ್ಧಾಶ್ರಮಗಳತ್ತ ಮುಖಮಾಡುತ್ತಾರೆ ಎಂದು ಹಲವು ಕುಟುಂಗಳು ಅನುಭವಿಸುತ್ತಿರುವ ನೋವಿನ ಎಳೆ ಬಿಚ್ಚಿಟ್ಟರು. ಸಮಾಜದ ವತಿಯಿಂದ ವೃದ್ಧಾಶ್ರಮ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

ಹಲವರು ಹಣ ಬಂದ ಸಮಾಜ ಸೇವೆಯ ಮಾತುಗಳನ್ನು ಆಡುತ್ತಾರೆ. ಅಂಥವರಲ್ಲಿ ಎಷ್ಟೋ ಜನರು ತಮ್ಮ ಕುಟುಂಬಗಳನ್ನೇ ಸರಿಯಾಗಿ ನೋಡಿಕೊಳ್ಳುವುದಿಲ್ಲ. ನೆರೆಹೊರೆಯವರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದಿಲ್ಲ. ಅವರೆಲ್ಲ ಹೇಗೆ ಸಮಾಜ ಸೇವಕರಾಗಲು ಸಾಧ್ಯ ಎಂದು ಪ್ರಶ್ನಿಸಿದರು.

ಪುನರ್ಮಿಲನ ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಕೆ.ಪಿ. ಪುತ್ತೂರಾಯ ಮಾತನಾಡಿ, ಮಾತೃ ಋಣ, ಆಚಾರ್ಯ ಋಣ, ಭೂಮಿ ಋಣ, ಈ ಸಮಾಜದ ಋಣ ಪ್ರತಿಯೊಬ್ಬರೂ ತೀರಿಸಲೇಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ಗಳಿಕೆ, ಉಳಿಕೆ, ಬಳಕೆ ಮೂರೂ ಸಮತೋಲನವಾಗಿರುವಂತೆ ಬದುಕು ನಡೆಸಬೇಕು. ಉಳಿಕೆಯಲ್ಲಿ ಒಂದಷ್ಟು ಪಾಲು ಸಮಾಜಕ್ಕೆ ವಿನಿಯೋಗಿಸಬೇಕು ಎಂದು ಕಿವಿಮಾತು ಹೇಳಿದರು.

ಒಂದು ಮರ ನೆಟ್ಟ ತಕ್ಷಣ ಅದರ ಫಲ ನೆಟ್ಟವನೆ ತಿನ್ನುವುದಿಲ್ಲ. ಒಮದು ತಲೆ ಮಾರು ಕಾಯಬೇಕು. ಹಾಗೆ 100 ವರ್ಷಗಳ ಹಿಂದೆ ಸ್ಥಾಪಿಸಿದ ಈ ಹಾಸ್ಟೆಲ್‌ ಎಷ್ಟು ತಲೆ ಮಾರುಗಳಿಗೆ ಆಸರೆ ನೀಡಿದೆ . ಇದು ಸಮಾಜಕ್ಕೆ ಹೆಮ್ಮೆ ಎಂದು ಶ್ಲಾಘಿಸಿದರು.

ಹಿಂದೆ ಇದ್ದ ಹಾಸ್ಟೆಲ್‌ ಸ್ಥಿತಿಗತಿ, ಅಂದಿನ ಕಾರ್ಯವೈಖರಿ, ಅನುಭವ, ಗೆಳೆಯರು, ಅವರ ಒಡನಾಟ, ವ್ಯವಸ್ಥಾಪನೆ, ಸಮಸ್ಯೆಗಳ ಕುರಿತು ಹಳೆಯ ವಿದ್ಯಾರ್ಥಿಗಳು ಮೆಲುಕು ಹಾಕಿದರು. ಇಡೀ ವಿದ್ಯಾರ್ಥಿನಿಲಯವನ್ನು ಹೊಸ ಮಾದರಿಯಲ್ಲಿ ರೂಪಿಸಲು ಚರ್ಚೆ ನಡೆಸಲಾಯಿತು.

ಶಿಕ್ಷಣ ತಜ್ಞರ ಡಾ.ಎಂ.ಬಾಲಸುಬ್ರಹ್ಮಣ್ಯ, ಗಾಯತ್ರಿ ಪ್ರತಿಷ್ಠಾನದ ಅಧ್ಯಕ್ಷ ಎಚ್‌.ವಿ. ಸುಬ್ರಹ್ಮಣ್ಯ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್ ಉಪಸ್ಥಿತರಿದ್ದರು.

ಸಂಜೆ ಹಾಸ್ಟೆಲ್ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ವೈ.ಶೇಷಾಚಲ ಅವರಿಗೆಗುರುವಂದನೆಸಲ್ಲಿಸಲಾಯಿತು.ನಿವೃತ್ತ ಪ್ರಾಂಶುಪಾಲ ಟಿ.ಎಸ್.ರಾಮಕುಮಾರ್ ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳುಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.