ADVERTISEMENT

ರಸ್ತೆ ವಿಸ್ತರಣೆ ಭೂ ಸ್ವಾಧೀನ ಪ್ರಕ್ರಿಯೆ ಅವೈಜ್ಞಾನಿಕ

ವಕೀಲರ ಸಂಘದಿಂದ ಖಂಡನೆ; ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದು ಸಭೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 4:49 IST
Last Updated 28 ಫೆಬ್ರುವರಿ 2023, 4:49 IST
ಸಾಗರದ ಬಿ.ಎಚ್. ರಸ್ತೆ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಅವೈಜ್ಞಾನಿಕವಾಗಿ ನಡೆಸಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಸೋಮವಾರ ವಕೀಲರ ಸಂಘದ ಸದಸ್ಯರು ಸಭೆ ನಡೆಸಿದರು.
ಸಾಗರದ ಬಿ.ಎಚ್. ರಸ್ತೆ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಅವೈಜ್ಞಾನಿಕವಾಗಿ ನಡೆಸಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಸೋಮವಾರ ವಕೀಲರ ಸಂಘದ ಸದಸ್ಯರು ಸಭೆ ನಡೆಸಿದರು.   

ಸಾಗರ: ನಗರದ ನ್ಯೂ ಬಿ.ಎಚ್. ರಸ್ತೆ ವಿಸ್ತರಣೆ ಕಾರ್ಯದ ಸಂದರ್ಭದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಅವೈಜ್ಞಾನಿಕವಾಗಿ ನಡೆಸಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಸೋಮವಾರ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದು ಸಭೆ ನಡೆಸಿದರು.

ರಸ್ತೆಯ ನಡು ಭಾಗದಿಂದ ಇಂತಿಷ್ಟು ಮೀಟರ್ ಜಾಗವನ್ನು ಬಿಡಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತ್ಯಾಗರ್ತಿ ವೃತ್ತದಿಂದ ಎಲ್‌ಬಿ ಕಾಲೇಜು ವೃತ್ತದವರೆಗೆ ಗುರುತು ಮಾಡಿದ್ದಾರೆ. ಕೆಲವೆಡೆ ಈ ಕೆಲಸ ಸಮರ್ಪಕವಾಗಿ ನಡೆದಿದ್ದು, ಮತ್ತೆ ಕೆಲವೆಡೆ ರಸ್ತೆಯ ಒಂದು ಭಾಗದಲ್ಲಿ ಹೆಚ್ಚುವರಿ ಜಾಗವನ್ನು ಭೂ ಸ್ವಾಧೀನ ಪ್ರಕ್ರಿಯೆ ಮೂಲಕ ವಶಪಡಿಸಿಕೊಳ್ಳಲು ಮುಂದಾಗಿರುವುದು ಅವೈಜ್ಞಾನಿಕ ನಡೆಯಾಗಿದೆ ಎಂದು ವಕೀಲರು ಪ್ರತಿಪಾದಿಸಿದರು.

‘ನ್ಯೂ ಬಿ.ಎಚ್. ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜು, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯ, ನಗರ ಪೊಲೀಸ್ ಠಾಣೆ ಕಚೇರಿ ಇರುವ ಭಾಗದಲ್ಲಿ ಹೆಚ್ಚುವರಿ ಜಾಗವನ್ನು ವಶಪಡಿಸಿಕೊಳ್ಳಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಸರ್ಕಾರಿ ಕಟ್ಟಡಗಳು ಹಾಗೂ ಜಾಗವನ್ನು ವಶಪಡಿಸಿಕೊಂಡರೆ ಪರಿಹಾರ ನೀಡುವ ಅಗತ್ಯವಿರುವುದಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ. ಕೆಲವು ಪ್ರಭಾವಿ ವ್ಯಕ್ತಿಗಳ ಆಸ್ತಿಯನ್ನು ಉಳಿಸುವ ಹುನ್ನಾರ ಕೂಡ ಈ ನಡೆಯಲ್ಲಿ ಅಡಗಿದೆ’ ಎಂದು ವಕೀಲರು ದೂರಿದರು.

ADVERTISEMENT

‘ಇಲ್ಲಿನ ನ್ಯಾಯಾಲಯಕ್ಕೆ 125 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಸಾಮಾನ್ಯವಾಗಿ ಹೆಚ್ಚಿನ ಊರುಗಳಲ್ಲಿ ನ್ಯಾಯಾಲಯ ನಗರದಿಂದ ದೂರದ ಪ್ರದೇಶದಲ್ಲಿರುತ್ತದೆ. ಆದರೆ, ಸಾಗರವನ್ನು ಕಟ್ಟಿದ ಹಿರಿಯರ ದೂರದೃಷ್ಟಿಯಿಂದ ನ್ಯಾಯಾಲಯ, ತಾಲ್ಲೂಕು ಪಂಚಾಯಿತಿ, ಉಪ ವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಊರಿನ ಹೃದಯ ಭಾಗದಲ್ಲಿ ಅಕ್ಕಪಕ್ಕದಲ್ಲೇ ಬರುವಂತೆ ನಿರ್ಮಾಣವಾಗಿದೆ. ಈಗ ಯೋಜಿಸಿರುವಂತೆ ರಸ್ತೆ ವಿಸ್ತರಣೆ ಕಾರ್ಯ ನಡೆದರೆ ನ್ಯಾಯಾಲಯದ ಪ್ರಮುಖ ಭಾಗ ರಸ್ತೆ ವಿಸ್ತರಣೆಗೆ ಹೋಗಲಿದೆ’ ಎಂದು ದೂರಿದರು.

‘ರಸ್ತೆಯ ಇಕ್ಕೆಲಗಳಲ್ಲಿ ಹೆದ್ದಾರಿಗಾಗಿ ಬಿಡಬೇಕಾದ ಜಾಗದ ವಿಷಯದಲ್ಲಿ ತ್ಯಾಗರ್ತಿ ವೃತ್ತದಿಂದ ಎಲ್‌ಬಿ ಕಾಲೇಜು ವೃತ್ತದವರೆಗೂ ಒಂದೇ ಮಾನದಂಡವನ್ನು ಅನುಸರಿಸಬೇಕು. ಇದನ್ನು ಬಿಟ್ಟು ತಾರತಮ್ಯ ನೀತಿ ತೋರಿದರೆ ನ್ಯಾಯಾಲಯದ ಜಾಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೀದಿ ಹೋರಾಟ ನಡೆಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲು ಕೂಡ ಮುಂದಾಗಬೇಕಾಗುತ್ತದೆ’ ಎಂದು ವಕೀಲರು ಎಚ್ಚರಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಎಚ್.ಆರ್.ಶ್ರೀಧರ್, ಕಾರ್ಯದರ್ಶಿ ರಮೇಶ್ ಎಚ್.ಬಿ, ಎಂ.ಎಸ್.ಗೌಡರ್, ಟಿ.ಬಿ.ಮಂಜುನಾಥ ಶೆಟ್ಟಿ, ಕೆ.ಎನ್.ಶ್ರೀಧರ್, ರವೀಶ್ ಕುಮಾರ್, ಮರಿದಾಸ್, ಕೆ.ಎಲ್.ಭೋಜರಾಜ್, ಎಚ್.ಕೆ.ಅಣ್ಣಪ್ಪ, ಜ್ಯೋತಿ ಕೋವಿ, ಕೆ.ಎಚ್.ರಮೇಶ್, ವಿ.ಶಂಕರ್,
ವಾಸು, ಲಿಂಗರಾಜ್, ಟಿ.ಜೆ.ಸೋಮಶೇಖರ್, ರಮೇಶ್ ಮರತ್ತೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.