ಶಿವಮೊಗ್ಗ: ಮಲೆನಾಡಿನಲ್ಲಿ ‘ಭೂಮಿ ಹುಣ್ಣಿಮೆ’ಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
ಮಲೆನಾಡಿನ ಜನರ ಪ್ರಕೃತಿ ಅರಾಧನೆ, ಕಾನು–ಮಣ್ಣು, ನೀರು, ಪೈರಿಗೆ ಕೊಡುವ ಗೌರವದ ದ್ಯೋತಕವಾಗಿ ಆಚರಿಸಲಾದ ಭೂಮಿ ಹುಣ್ಣಿಮೆ ರೈತಾಪಿ ವರ್ಗ ಅನ್ನದ ಬಟ್ಟಲಿಗೆ ಸಲ್ಲಿಸುವ ಕೃತಜ್ಞತೆಯ ಬಿಂಬವಾಗಿ ಕಂಡಿತು. ಹೊಲಗದ್ದೆಗಳಲ್ಲಿನ ಪೈರನ್ನು ಗೌರಮ್ಮನ ರೂಪದಲ್ಲಿ ರಂಗೋಲಿ, ಹೂವು, ಅರಿಶಿನ–ಕುಂಕುಮ, ಹಸಿರು ಬಳೆಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ಕಡುಬು, ಅಕ್ಕಿರೊಟ್ಟಿ, ಹೋಳಿಗೆ, ಕರಿಗಡುಬು, ಅನ್ನ–ಹಾಲಿನ ನೈವೇದ್ಯ ಅರ್ಪಿಸಿ ಭೂತಾಯಿಗೆ ಉಡಿ ತುಂಬಿದರು. ನಂತರ ಚರಗ ಚೆಲ್ಲಿ ಭೂ ತಾಯಿಗೆ ನಮಿಸಿದರು. ನೆಲದ ಮಕ್ಕಳು ತಲತಲಾಂತರದಿಂದ ಬಂದ ಈ ವಿಶಿಷ್ಟ ಸಂಪ್ರದಾಯ ಆಚರಿಸಿದರು. ಕೊನೆಗೆ ಬಂಧು–ಬಳಗ, ಸ್ನೇಹಿತರೊಂದಿಗೆ ಸೇರಿ ವನಭೋಜನ ಸವಿದರು. ಹಾಡು–ಹಸೆ ಚಿತ್ತಾರಗಳ ಮೂಲಕ ಖುಷಿ ಪಟ್ಟರು. ಸೆಲ್ಫಿ ತೆಗೆದು, ರೀಲ್ಸ್ ಮಾಡಿ ಸಂಭ್ರಮಿಸಿದರು.
ದೀವರ ಸಂಸ್ಕೃತಿ ದ್ಯೋತಕ:
ಮಲೆನಾಡು, ಅರೆಮಲೆನಾಡಿನಲ್ಲಿ ಭೂಮಿ ಹುಣ್ಣಿಮೆಗೆ ಹೆಚ್ಚು ಮಹತ್ವವಿದ್ದು, ಅದರಲ್ಲೂ ದೀವರು ಸಮುದಾಯ ಈ ಹಬ್ಬವನ್ನು ವಿಶೇಷವಾಗಿ ಆಚರಿಸಿತು. ದೀವರು ಭೂಮಣ್ಣಿ ಬುಟ್ಟಿಗೆ ಕೆಮ್ಮಣ್ಣು ಮತ್ತು ಶೇಡಿಯ ಚಿತ್ತಾರ ಬಿಡಿಸಿ ಬುಟ್ಟಿಯಲ್ಲಿ ಪೂಜಾ ಸಾಮಗ್ರಿ ತುಂಬಿಕೊಂಡು ಹೊಲಗಳಿಗೆ ಹೋಗಿ ವಿಶೇಷವಾಗಿ ಪೂಜೆ ಮಾಡಿದರು.
ಕಾಡಿನ ಸೊಪ್ಪುಗಳನ್ನು ತಂದು ಸಾಗುಸೊಪ್ಪು ಸಿದ್ಧಪಡಿಸಿ ಸೌತೆಕಾಯಿ ಕಡುಬು, ಕೆಸುವಿನ ದಡಿಯ ಕಡುಬು, ಮೊಸರನ್ನದ ಬುತ್ತಿ, ಹಾಲು ಅನ್ನ, ತುಪ್ಪದ ಅನ್ನ, ಚಿತ್ರಾನ್ನವನ್ನು ಭೂಮಿ ತಾಯಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಚರಗವನ್ನು ಹೊಲದ ಸುತ್ತ ಬೀರಿದರು. ಭೂಮಾತೆಗೆ ಪೂಜೆ ಮಾಡಿ ಒಳ್ಳೆಯ ಫಸಲು ನೀಡು ಎಂದು ಬೇಡಿಕೊಳ್ಳುವ ಜೊತೆಗೆ ಇಷ್ಟು ವರ್ಷಗಳ ಕಾಲ ಅನ್ನ ನೀಡಿದ್ದಕ್ಕಾಗಿ ಕೃತಜ್ಞತೆ ಅರ್ಪಿಸಿದರು.
ಭೂತಾಯಿಯ ಋಣ ತೀರಿಸೋಣ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ ಹಾಗೂ ಪರೋಪಕಾರಂನ ಸಂಯುಕ್ತಾಶ್ರಯದಲ್ಲಿ ಮಂಗಳವಾರ ತಾಲ್ಲೂಕಿನ ಅಬ್ಬಲಗೆರೆ ಬಳಿಯ ಈಶ್ವರವನದಲ್ಲಿ ಭೂಮಿ ಹುಣ್ಣಿಮೆ ಆಚರಿಸಲಾಯಿತು. ಈ ವೇಳೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ ಹೆತ್ತ ತಾಯಿಯಷ್ಟೇ ಹೊತ್ತ ತಾಯಿಗೂ (ಭೂತಾಯಿ) ನಾವು ಪ್ರಾಮುಖ್ಯತೆ ನೀಡಬೇಕು. ಪರಿಸರ ಸಂರಕ್ಷಿಸಿ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಭೂತಾಯಿಯ ಋಣ ತೀರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷ ನವ್ಯಶ್ರೀ ನಾಗೇಶ್ ಉಪಾಧ್ಯಕ್ಷೆ ಶಶಿಕಲಾ ನಾಗೇಶ್ ಅವರನ್ನು ಅಭಿನಂದಿಸಲಾಯಿತು. ಜಯಲಕ್ಷ್ಮೀ ಕೆ.ಎಸ್. ಈಶ್ವರಪ್ಪ ಜಿ.ಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್. ಶಾಲಿನಿ ಕಾಂತೇಶ್ ಶ್ರೀಧರ್ ಎನ್.ಎಂ. ಜೋಡಿಯಾಕ್ ಪ್ರಕಾಶ್ ನಾಗರಾಜ್ ಶೆಟ್ಟರ್ ದೀಪ ಶೆಟ್ಟರ್ ಅನಿಲ್ ಹೆಗ್ಗಡೆ ದೀಪ ಶ್ರೀಧರ್ ರಾಘವೇಂದ್ರ ಮಹೇಂದ್ರಕರ್ ಸಾರಥಿ ಶಿವಾನಂದ್ ಎಂ. ಶ್ರೀಕಾಂತ್ ಗಾಡಿಕೊಪ್ಪ ಕುಮಾರ್ ಶಾಂತಮ್ಮ ಕುಮಾರಣ್ಣ ವೀರನಗೌಡ ಬಿರಾದರ್ ಕಾವೇರಿ ಬಿರಾದಾರ್ ದುಮ್ಮಳ್ಳಿ ರಾಜಣ್ಣ ಜಿ.ವಿ. ಪಾಂಡುರಂಗಪ್ಪ ಓಂ ಪ್ರಕಾಶ್ ಎನ್.ಎಂ.ಲೀಲಾಬಾಯಿ ಬಿ.ಪಾರ್ಶ್ವನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.