
ಹೊಸನಗರ: ಸುತ್ತಲೂ ಮುಳುಗಡೆ, ಕಾಡು, ಅಭಯಾರಣ್ಯ ಮತ್ತಿತರ ಕಾರಣದಿಂದ ಅಭಿವೃದ್ಧಿ ಕುಂಟಿತವಾದ ನಗರ ಹೋಬಳಿಗೆ ಪ್ರವಾಸೋದ್ಯಮ ಮಾತ್ರ ಆಧಾರವಾಗಿದೆ. ಅದೇ ನಮಗಿರುವ ಭರವಸೆಯಾಗಿದೆ ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.
ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದೇವಗಂಗೆ ಕೊಳದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಎಳ್ಳಮವಾಸ್ಯೆ ಹಬ್ಬದ ಆಚರಣೆಯಲ್ಲಿ ಮಾತನಾಡಿದರು.
ಇಲ್ಲಿ ದೇವಗಂಗೆ, ಕೋಟೆ, ಕೊಡಚಾದ್ರಿ, ಹುಲಿಕಲ್ ಸೇರಿದಂತೆ ಹಲವು ಪ್ರಸಿದ್ಧ ಐತಿಹಾಸಿಕ ಪ್ರಾಕೃತಿಕ ತಾಣಗಳಿವೆ. ಪ್ರವಾಸಿ ಹಬ್ ಮಾಡಿ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದರು.
ನಾಡಿನ ಬೆಳಕಿಗಾಗಿ ಇಲ್ಲಿಯ ಜನ ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ರೈತರ ಸಮೃದ್ಧ ಭೂಮಿ, ಬದುಕು ಮುಳುಗಡೆಯಾಗಿದೆ. ಯಾವುದೇ ಉದ್ಯೋಗವಕಾಶ ಇಲ್ಲವಾಗಿದೆ. ನಾಡಿಗೆ ಕೊಡುಗೆ ನೀಡಿ ಬಸವಳಿದ ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಬಿದನೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಅಗತ್ಯ ಎಂದು ಪ್ರತಿಪಾಧಿಸಿದರು.
ಬೆಳಿಗ್ಗೆ ತೀರ್ಥ ಸ್ನಾನ, ಮಹಾಪೂಜೆ, ಅನ್ನ ಸಂತರ್ಪಣೆ, ಯಕ್ಷಗಾನ ಕಾರ್ಯಕ್ರಮ ನಡೆಯಿತು. ಬೆಳಕಿನ ದೃಶ್ಯ ವೈಭವಕ್ಕೆ ಮನಸೋತ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದರು. ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಬೆಳಕಿನ ದೃಶ್ಯವೈಭವಕ್ಕೆ ಮಾರು ಹೋಗಿ ಸೆಲ್ಫೀ ತೆಗೆದುಕೊಳ್ಳುವುದು ಮಾಮೂಲಿಯಾಗಿತ್ತು.
ವಿಶೇಷವಾಗಿ ಮಕ್ಕಳ ಸಂಭ್ರಮ ಕಂಡುಬಂದಿತು. ಇಡೀ ಕಾರ್ಯಕ್ರಮದ ಯಶಸ್ಸಿಗೆ ದೇವಗಂಗೆ, ಇಂದ್ರೋಡಿ, ಶ್ರೀಧರಪುರ, ಬಸವನಬ್ಯಾಣ, ಬಿದನೂರು ಭಾಗದ ಜನರ ಶ್ರಮ ಕಾರಣವಾಗಿದೆ.
ದೇವಗಂಗೆ ದೃಶ್ಯ ವೈಭವ
ದೇವಗಂಗೆಯಲ್ಲಿ ಈ ಬಾರಿಯ ಎಳ್ಳಮವಾಸ್ಯೆಯನ್ನು ವಿಶೇಷವಾಗಿ ಆಯೋಜಿಸಲಾಗಿತ್ತು. ಪ್ರಥಮ ಬಾರಿಗೆ ದೇವಗಂಗೆ ಕೊಳದಲ್ಲಿ ಉತ್ತರದ ಕಾಶಿಯಲ್ಲಿ ನಡೆಯುವ ಗಂಗಾರತಿ ಕಾರ್ಯಕ್ರಮ ನಡೆದಿದ್ದು ಭಕ್ತರ ಗಮನ ಸೆಳೆಯಿತು. ಈ ವೇಳೆ ಭಕ್ತರು ಹರ ಹರ ಮಹಾದೇವ ಎಂದು ಘೋಷಣೆ ಕೂಗಿದರು. ಭಕ್ತರ ವೇದವಾಕ್ಯದ ಎಲ್ಲೆಡೆ ಮಾರ್ಧನಿಸಿತು. ಸಂಜೆ ದೇವಗಂಗೆ ಗಂಗಾಧರೇಶ್ವರ ಸನ್ನಿಧಿ ಕೊಳದ ಆವರಣದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಬೆಳಕಿನ ದೃಶ್ಯವೈಭವ ಅದ್ಭುತವಾಗಿ ಮೂಡಿ ಬಂದಿತು. ಬೆಳಕಿನ ವಿವಿಧ ಚಿತ್ರ ಚಿತ್ತಾರವು ಸೇರಿದ್ದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.