ADVERTISEMENT

ಶಿಕಾರಿಪುರ | ಒಂದು ಬೈಕ್ ಕಳ್ಳತನ: 16 ಬೈಕ್ ಕಳವು ಪ್ರಕರಣ ಬಯಲಿಗೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 15:48 IST
Last Updated 26 ಏಪ್ರಿಲ್ 2025, 15:48 IST
ಶಿಕಾರಿಪುರದಲ್ಲಿ ಶುಕ್ರವಾರ ಆರೋಪಿಗಳನ್ನು ಬೈಕ್ ಸಮೇತ ವಶಕ್ಕೆ ಪಡೆಯಲಾಗಿದೆ
ಶಿಕಾರಿಪುರದಲ್ಲಿ ಶುಕ್ರವಾರ ಆರೋಪಿಗಳನ್ನು ಬೈಕ್ ಸಮೇತ ವಶಕ್ಕೆ ಪಡೆಯಲಾಗಿದೆ   

ಶಿಕಾರಿಪುರ: ಪಟ್ಟಣದಲ್ಲಿ ನಡೆದ ಬೈಕ್ ಕಳವು ಪ್ರಕರಣ ಬೇಧಿಸಲು ಹೊರಟ ಪೊಲೀಸರಿಗೆ 16 ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, ₹20.5 ಲಕ್ಷ  ಮೌಲ್ಯದ 16 ಬೈಕ್‌ಗಳನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ.

ತರೀಕೆರೆ ತಾಲ್ಲೂಕು ದೊಡ್ಡಲಿಂಗೇನಹಳ್ಳಿಯ ಪ್ರತಾಪ್ (33), ಜಗಳೂರು ತಾಲ್ಲೂಕು ಬಿಳಚೋಡು ಗ್ರಾಮದ ಭೋಜರಾಜ (32) ಬಂಧಿತರು.

ಪಟ್ಟಣದ ಸುಬೇದಾರ್ ಕೇರಿ ನಿವಾಸಿ ಫೈಜಾನ್‌ಬಾಷಾ ಅವರ ಪಲ್ಸರ್ ಬೈಕ್ ಈಚೆಗೆ ಕಳವಾಗಿತ್ತು. ಆರೋಪಿಗಳು ಅದನ್ನು ಕದ್ದೊಯ್ಯುವಾಗ ರಾತ್ರಿ ಬೀಟ್‌ನಲ್ಲಿದ್ದ ಪಟ್ಟಣ ಠಾಣೆ ಪಿಎಸ್‌ಐ ಶರತ್ ಹಾಗೂ ಸಿಬ್ಬಂದಿ ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ, ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.

ADVERTISEMENT

ಆರೋಪಿಗಳನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ, ಆರೋಪಿಗಳಿಬ್ಬರು 16 ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಎಲ್ಲ ಪ್ರಕರಣಗಳ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಟ್ಟಣದಲ್ಲಿ ಕಳ್ಳತನವಾದ ಬೈಕ್ ಪಲ್ಸರ್ ಆಗಿದ್ದರೆ, ಇನ್ನುಳಿದವು ಬುಲೆಟ್ ಬೈಕ್‌ಗಳಾಗಿರುವುದು ವಿಶೇಷ.

ಅರಸೀಕರೆ, ತರೀಕೆರೆ, ಚನ್ನರಾಯಪಟ್ಟಣ, ಶಿರಾ, ಚಿತ್ರದುರ್ಗ, ಜಗಳೂರು, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಬೆಂಡೆಗೆರೆ, ಮುನಿರಾಬಾದ್, ಮುಂಡರಗಿ, ಹೂವಿನಹಡಗಲಿ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣ ದಾಖಲಾಗಿವೆ. ಡಿವೈಎಸ್‌ಪಿ ಕೇಶವ್, ವೃತ್ತ ನಿರೀಕ್ಷ ರುದ್ರೇಶ್ ಮಾರ್ಗದರ್ಶನದಲ್ಲಿ ಪ್ರಕರಣ ತನಿಖೆ ಕೈಗೊಳ್ಳಲಾಗಿತ್ತು, ತನಿಖಾ ತಂಡದ ಕಾರ್ಯಕ್ಕೆ ಶಿವಮೊಗ್ಗ ಎಸ್‌ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.