ADVERTISEMENT

ಬಿಳಕಿ ವೈಮನಸ್ಸು: ದೇವಸ್ಥಾನ ಕಾಮಗಾರಿ ನನೆಗುದಿಗೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 10:43 IST
Last Updated 22 ಅಕ್ಟೋಬರ್ 2018, 10:43 IST

ಶಿವಮೊಗ್ಗ: ಎರಡು ಸಮುದಾಯಗಳ ಭಿನ್ನಾಭಿಪ್ರಾಯದ ಪರಿಣಾಮ ಭದ್ರಾವತಿ ತಾಲ್ಲೂಕು ಬಿಳಿಕಿ ಪುರಾತನ ಈಶ್ವರ-ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನನೆಗುದಿಗೆ ಬಿದ್ದಿದೆ. ಕಾಮಗಾರಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಶೇ 70ರಷ್ಟು ಪೂರ್ಣಗೊಂಡಿದೆ. ಇಂತಹ ಸಮಯದಲ್ಲಿ ಒಂದು ಸಮುದಾಯ ದೇವಸ್ಥಾನದ ಒಳಗೆ ದಿಢೀರ್ ಎಂದು ಯಲ್ಲಮ್ಮ ದೇವಿ ಪ್ರತಿಷ್ಠಾಪಿಸಿದ್ದಾರೆ. ಇದು ಗ್ರಾಮದಲ್ಲಿ ಬಿಗುವಿನ ವಾತಾವರಣಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಗ್ರಾಮದ ಮುಖಂಡ ಬಿ.ಜಿ. ಶಂಕರಪ್ಪ ಪಟೇಲ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಈಶ್ವರ-ಬಸವೇಶ್ವರ ಅತ್ಯಂತ ಪ್ರಾಚೀನ ದೇಗುಲ. ದೇವಸ್ಥಾನದ ಬಳಿ ಇರುವ ವೀರಗಲ್ಲು ಮತ್ತಿತರ ಅಂಶಗಳು ದೇವಾಲಯದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ವಿಭಾಗ ಈ ಕುರಿತು ಅಧ್ಯಯನ ನಡೆಸಿದೆ. ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು, ಭಕ್ತರು, ಹಾಲಿ, ಮಾಜಿ ಶಾಸಕರು ಹಣ ನೀಡಿದ್ದಾರೆ. ಆದರೆ, ಕೆಲವರು ಇದಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಪೊಲೀಸರಿಗೆ, ತಹಶೀಲ್ದಾರ್‌ ಅವರಿಗೆ ದೂರು ನೀಡಲಾಗಿದೆ. ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣವೇ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಮಲ್ಲಿಕಾರ್ಜುನಪ್ಪ, ಹಾಲೇಶಪ್ಪ, ಉಮೇಶಪ್ಪ, ವೀರೇಶ, ಫಾಲಾಕ್ಷಪ್ಪ, ರುದ್ರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.