ADVERTISEMENT

‘ಬಂಗಾರಪ್ಪ ಜನಾನುರಾಗಿ ವ್ಯಕ್ತಿತ್ವದ ನಾಯಕ’

ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಎಸ್.ಬಂಗಾರಪ್ಪ 93ನೇ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:57 IST
Last Updated 28 ಅಕ್ಟೋಬರ್ 2025, 4:57 IST
ಶಿವಮೊಗ್ಗದ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ನಡೆದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹುಲ್ತಿಕೊಪ್ಪ ಶ್ರೀಧರ್ ಮಾತನಾಡಿದರು
ಶಿವಮೊಗ್ಗದ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ನಡೆದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹುಲ್ತಿಕೊಪ್ಪ ಶ್ರೀಧರ್ ಮಾತನಾಡಿದರು   

ಶಿವಮೊಗ್ಗ: ‘ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ವೈಯಕ್ತಿಕ ಬದುಕಿನಲ್ಲೂ ಉತ್ತಮ ವ್ಯಕ್ತಿತ್ವ ಹೊಂದಿದ್ದ ಜನಾನುರಾಗಿಯಾಗಿದ್ದರು’ ಎಂದು ಜಿಲ್ಲಾ ಆರ್ಯ–ಈಡಿಗ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್‌ ತಿಳಿಸಿದರು. 

ಇಲ್ಲಿನ ಜಿಲ್ಲಾ ಆರ್ಯ ಈಡಿಗರ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಬಂಗಾರಪ್ಪ ಅವರ 93ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ಬಂಗಾರಪ್ಪ ಬರೀ ರಾಜಕಾರಣಿ ಆಗಿರಲಿಲ್ಲ. ಕಲಾಪ್ರೇಮಿ ಹಾಗೂ ಕ್ರೀಡಾಪಟುವೂ ಆಗಿದ್ದರು. ಬಡವರಿಗೆ ಸೂರು ಕೊಡಲು ಆಶ್ರಯ ಯೋಜನೆ, ರೈತರ ಪಂಪ್‌ಸೆಟ್‌ಗಳಿಗೆ 10 ಎಚ್‌ಪಿ ವರೆಗೆ ಉಚಿತ ವಿದ್ಯುತ್, ಹಳ್ಳಿಗಳಲ್ಲಿನ ಗುಡಿ-ಗುಂಡಾರಗಳಿಗೆ ಕೇರಿಯಮ್ಮ, ದ್ಯಾವಮ್ಮ, ಬೀರಪ್ಪ, ಭೂತಪ್ಪ, ಚೌಡಮ್ಮ ಮತ್ತು ಗಣಪತಿ ದೇವಸ್ಥಾನಗಳ ಅಭಿವೃದ್ಧಿಗೆ ಆರಾಧನಾ ಯೋಜನೆ ರೂಪಿಸಿದ್ದರು’ ಎಂದು ಸ್ಮರಿಸಿದರು. 

ADVERTISEMENT

‘ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಟ್ರಿಬ್ಯುನಲ್ ಆದೇಶ ಧಿಕ್ಕರಿಸಿ ಸುಗ್ರೀವಾಜ್ಞೆ ಜಾರಿಗೊಳಿಸಿ ರಾಜ್ಯದ ರೈತರ ಹಿತ ಕಾಯ್ದು ಎದೆಗಾರಿಕೆ ಪ್ರದರ್ಶಿಸಿದ್ದರು. ಗ್ರಾಮೀಣ ಕೃಪಾಂಕ ಜಾರಿಗೊಳಿಸಿ ಹಳ್ಳಿಗಾಡಿನ ಲಕ್ಷಾಂತರ ಕುಟುಂಬಗಳ ಮಕ್ಕಳ ಸರ್ಕಾರಿ ನೌಕರಿಯ ಕನಸು ನನಸು ಮಾಡಿದ್ದು ಬಂಗಾರಪ್ಪ’ ಎಂದರು. 

‘ಶಿವಮೊಗ್ಗಕ್ಕೆ ಕೃಷಿ ಕಾಲೇಜು, ಜಿಲ್ಲಾ ಮೆಗ್ಗಾನ್ ಅಸ್ಪತ್ರೆ, ಮಹಾನಗರ ಪಾಲಿಕೆ ಹಾಗೂ ಗಾಜನೂರು ಜಲಾಶಯದಿಂದ ಶಿವಮೊಗ್ಗಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಗೊಳಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಎಸ್.ಸಿ.ರಾಮಚಂದ್ರ, ಕಾಗೋಡು ರಾಮಪ್ಪ, ಎನ್.ಪಿ.ಧರ್ಮರಾಜ್, ಸುರೇಶ್ ಬಾಳೆಗುಂಡಿ, ಎ.ಎಂ. ರಮೇಶ್, ರಾಜಪ್ಪ ತೆಕಲೆ, ಎನ್. ಕೃಷ್ಣಪ್ಪ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.