ADVERTISEMENT

ಬಿಜೆಪಿ ಸಂಘಟನಾತ್ಮಕ ಪಕ್ಷ: ಡಿ.ಎಚ್‌. ಶಂಕರಮೂರ್ತಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 17:00 IST
Last Updated 28 ನವೆಂಬರ್ 2020, 17:00 IST
ಶಿವಮೊಗ್ಗದಲ್ಲಿ ಬಿಜೆಪಿ ನಗರ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಪ್ರಶಿಕ್ಷಣ ವರ್ಗದ ಕಾರ್ಯಕ್ರಮವನ್ನು ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಉದ್ಘಾಟಿಸಿದರು.
ಶಿವಮೊಗ್ಗದಲ್ಲಿ ಬಿಜೆಪಿ ನಗರ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಪ್ರಶಿಕ್ಷಣ ವರ್ಗದ ಕಾರ್ಯಕ್ರಮವನ್ನು ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಉದ್ಘಾಟಿಸಿದರು.   

ಶಿವಮೊಗ್ಗ: ಬಿಜೆಪಿ ಒಂದು ವಿಭಿನ್ನ ರಾಜಕೀಯ ಪಕ್ಷ. ಅಧಿಕಾರಕ್ಕೆ ಜೋತು ಬೀಳದೆ, ಸೋಲಿಗೆ ಹೆದರದೇ ಗೆಲುವಿಗೆ ಮಾಡುವ ಪ್ರಯತ್ನದಿಂದಲೇ ಬಿಜೆಪಿಗೆ ಗೆಲುವು ಸುಲಭವಾಗುತ್ತದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಹೇಳಿದರು.

ಶುಭಮಂಗಳ ಸಮುದಾಯ ಭವನದಲ್ಲಿ ಬಿಜೆಪಿ ನಗರ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಪ್ರಶಿಕ್ಷಣ ವರ್ಗದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸತ್‍ನಲ್ಲಿ ಒಂದೇ ಒಂದು ಸ್ಥಾನ ಇಲ್ಲದಿದ್ದರೂ ಹೆದರಲಿಲ್ಲ. ಸೋಲಿಗೆ ಎಂದೂ ಭಯಪಡದ ಪಕ್ಷವಿದು. ರಾಜಕೀಯಕ್ಕೆ ಬರುವವರೆಲ್ಲ ಅಧಿಕಾರ ಬೇಕು ಎಂದು ಬಯಸುವುದೂ ಅಲ್ಲ. ಆದರೆ, ಪ್ರಯತ್ನ ಮಾತ್ರ ಬಿಡಬಾರದು. ಇಂತಹ ಪ್ರಯತ್ನದಿಂದ ಬಿಜೆಪಿ ಇಂದು ಇಡೀ ದೇಶದಾದ್ಯಂತ ಸಂಘಟನೆಯನ್ನು ಕಟ್ಟಿದೆ ಎಂದು ಹೇಳಿದರು.

ADVERTISEMENT

‘370ನೇ ವಿಧಿ ತೆಗೆದುಹಾಕಿದ್ದು, ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, ಗುಲಾಮಗಿರಿಯ ಕಟ್ಟಡ ಕೆಡವಿದ್ದು, ಇವೆಲ್ಲವೂ ನನ್ನಂತಹ ಹಿರಿಯ ಬಿಜೆಪಿಗರಿಗೆ ಅತ್ಯಂತ ಖುಷಿಯ ವಿಚಾರಗಳು. ರಾಜಕೀಯದಲ್ಲಿ ಹಿಂದೂ ಆಶಯಗಳನ್ನು ಇಟ್ಟುಕೊಂಡೇ ಬೆಳೆದು ಬಂದ ನಮ್ಮಂತಹವರಿಗೆ ಸಂಘಟನೆಯೇ ಮುಖ್ಯವಾಗಿತ್ತು. ಈಗಲೂ ಬಿಜೆಪಿ ಒಂದು ಸಂಘಟನಾತ್ಮಕ ಪಕ್ಷ’ ಎಂದರು.

ಬಿಜೆಪಿಗೆ ಹೊಸದಾಗಿ ಸೇರುವವರು, ಈಗಾಗಲೇ ಸೇರಿದವರು, ನಿಷ್ಠಾವಂತರು ಈ ತತ್ವ ಸಿದ್ದಾಂತದ ಅಡಿಯಲ್ಲಿಯೇ ಕೆಲಸ ಮಾಡಬೇಕು. ಹಿಂದೂ ರಾಷ್ಟ್ರೀಯವಾದದ ಮೂಲಕ ಪಕ್ಷವನ್ನು ಸಂಘಟನೆ ಮಾಡಿ ಬಲಿಷ್ಠ ಭಾರತವನ್ನು ಕಟ್ಟುವತ್ತ ಯೋಚಿಸಬೇಕು. ಎಲ್ಲದಕ್ಕೂ ಮುಖ್ಯವಾಗಿ ಸಂಘಟನೆ ಬೇಕೇಬೇಕು. ಇಂತಹ ಸಂಘಟನಾ ಶಕ್ತಿಯನ್ನು ಪ್ರಶಿಕ್ಷಣ ವರ್ಗ ಕಲಿಸುತ್ತದೆ ಎಂದು
ವಿವರಿಸಿದರು.

ಮೇಯರ್ ಸುವರ್ಣ ಶಂಕರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಎನ್.ಜೆ. ನಾಗರಾಜ್, ಪಾಲಿಕೆ ಸದಸ್ಯ ಎಸ್. ಜ್ಞಾನೇಶ್ವರ್, ಎಸ್.ಎನ್. ಚನ್ನಬಸಪ್ಪ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಮೋಹನ್, ರಮೇಶ್, ಮೋಹನ್ ರೆಡ್ಡಿ, ಬಳ್ಳೆಕೆರೆ ಸಂತೋಷ್, ಸುನಿತಾ ಕೆ.ವಿ. ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.