
ಶಿವಮೊಗ್ಗ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮ ತಂಡದ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಅಧ್ಯಕ್ಷರ ಆಯ್ಕೆ ಇನ್ನೂ ತೀರ್ಮಾನವಾಗಬೇಕಿದೆ’ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
‘ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ನೇತೃತ್ವದಲ್ಲಿ ನಮ್ಮ ತಂಡ ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದು, ಬಿಜೆಪಿಯಲ್ಲಿರುವ ಆಂತರಿಕ ಪ್ರಜಾಪ್ರಭುತ್ವದ ಭಾಗವಾಗಿಯೇ ಹೊರತು, ಅದು ಯಾರನ್ನೂ ಗುರಿಯಾಗಿಸಿಕೊಂಡು ಮಾಡಿದ ಹೋರಾಟವಲ್ಲ’ ಎಂದು ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು.
‘ಬಿಜೆಪಿ ಪಕ್ಷವಾಗಿಯೇ ನಾವು ಮಾಡಿದ್ದ ವಕ್ಫ್‌ಬೋರ್ಡ್ ಭೂಮಿ ಕಬಳಿಕೆ ವಿಚಾರ, ವಾಲ್ಮೀಕಿ ನಿಗಮದ ಹಗರಣಗಳ ಬಗ್ಗೆ ಮಾಡಿದ್ದ ಹೋರಾಟಗಳು ತಾರ್ಕಿಕ ಅಂತ್ಯಕ್ಕೆ ಹೋಗಿವೆ. ನಮಗೆ ಜಯ ಸಿಕ್ಕಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳ ಒಳನುಸುಳುಕೋರರ ವಿರುದ್ಧ ಕ್ರಮಕ್ಕೆ ನಾವು ಮೊದಲಿನಿಂದಲೂ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡಿಲ್ಲ’ ಎಂದರು.
‘ಈಗ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ನಕಲಿ ಮತದಾರರು ಮತ್ತು ನುಸುಳುಕೋರರು ಪತ್ತೆಯಾಗಲಿದ್ದಾರೆ. ಇದು ಅಗತ್ಯವಾಗಿ ಆಗಲೇಬೇಕಿದೆ. ನಮ್ಮ ಪಕ್ಷದ ನಿಲುವು ಈ ವಿಚಾರದಲ್ಲಿ ಅಚಲವಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದಂತಹ ಸ್ವಾಯುತ್ತ ಸಂಸ್ಥೆಯ ವಿರುದ್ಧ ಆರೋಪ ಮಾಡುವುದು ಸರಿಯಲ್ಲ’ ಎಂದು ಹೇಳಿದರು.
‘ಕುರ್ಚಿ ಗಲಾಟೆಯು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಯಾವುದೇ ಪಕ್ಷದ ಶಾಸಕರಿಗೂ ಸರ್ಕಾರ ಬೀಳುವುದು ಬೇಕಾಗಿಲ್ಲ. ಯಾರೋ ಈ ಸರ್ಕಾರ ಬೀಳುತ್ತೆ ಅಂದರೆ ಅದು ಅರ್ಥವಿಲ್ಲದ ಮಾತು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ರಸ್ತೆಗಳು ಗುಂಡಿ ಬಿದ್ದು ಅದ್ವಾನಗೊಂಡಿವೆ. ಯಾವುದೇ ಹೊಸ ಯೋಜನೆಗಳನ್ನು ಜಾರಿ ಮಾಡುವ ಪ್ರಯತ್ನ ನಡೆಯುತ್ತಿಲ್ಲ. ಬಹಳ ನಿರೀಕ್ಷೆಯಿಂದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದ ರಾಜ್ಯದ ಜನರು ಈಗ ನಿರಾಸೆಗೊಂಡಿದ್ದಾರೆ’ ಎಂದರು.
ಪಕ್ಷದ ಕೆಲಸಕ್ಕೆ ಮುಖಂಡರು ಕರೆದಾಗಲೆಲ್ಲ ಹೋಗುತ್ತೇನೆ. ಕರೆಯದೇ ಹೋಗುವುದಿಲ್ಲ. ರಾಜ್ಯಮಟ್ಟದ ಎಲ್ಲ ಚಟುವಟಿಕೆಯಲ್ಲೂ ಭಾಗಿಯಾಗುತ್ತೇನೆ. ಜಿಲ್ಲಾಮಟ್ಟದ ಕಾರ್ಯಕ್ರಮಗಳಿಗೆ ಕರೆದರೆ ಹೋಗುವೆ
-ಕುಮಾರ್ ಬಂಗಾರಪ್ಪ ಮಾಜಿ ಸಚಿವ
‘ಸೊರಬ ಸೇರಿ ಜಿಲ್ಲೆಯಲ್ಲಿ ಕಾಣದ ಅಭಿವೃದ್ಧಿ’
‘ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿವೆ ನಿಜ. ಆದರೆ ಸೊರಬ ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಶಿರಾಳಕೊಪ್ಪ–ಸೊರಬ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸೊರಬ ಕ್ಷೇತ್ರಕ್ಕೆ ಹಿಂದಿನ ಅವಧಿಯಲ್ಲಿ ₹700 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಮಂಜೂರಾತಿ ದೊರಕಿತ್ತು. ಆದರೆ ಈಗಿನ ಸಚಿವರು ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಅದು ಸರ್ಕಾರಿ ಅನುದಾನವೇ ಹೊರತು ಕಾಂಗ್ರೆಸ್ ಅಥವಾ ಬಿಜೆಪಿಯದ್ದಲ್ಲ. ಸಚಿವರ ನಿರ್ಲಕ್ಷ್ಯದಿಂದ ಹಣ ಹಿಂದಕ್ಕೆ ಹೋಗಿದೆ. ಸೊರಬದಲ್ಲಿ ಆಡಳಿತ ಸೌಧ ನಿರ್ಮಾಣಕ್ಕೆ ಹಿಂದಿನ ನಮ್ಮ ಸರ್ಕಾರ ಹಣ ಮಂಜೂರು ಮಾಡಿತ್ತು. ಆದರೆ ಸಚಿವರು ಗಮನ ಹರಿಸಿಲ್ಲ. ಅದಕ್ಕೆ ಅನುಭವದ ಕೊರತೆಯೂ ಇರಬಹುದು’ ಎಂದು ಕುಮಾರ್ ಬಂಗಾರಪ್ಪ ಟೀಕಿಸಿದರು. ‘ಆರಗ ಜ್ಞಾನೇಂದ್ರರಂತಹ ಹಿರಿಯರನ್ನು ಬಚ್ಚಾ ಎನ್ನುವ ಹಂತಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬೆಳೆದಿರಬಹುದು. ಅವರ ಆ ಭಾಷೆ ಮತ್ತು ವರ್ತನೆಯ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಸದಾ ಕಲಿಕೆಯಲ್ಲಿಯೇ ನಮ್ಮ ರಾಜಕಾರಣ ಸಾಗಿದೆ. ಹಾಗಾಗಿ ದೊಡ್ಡ ಮಾತುಗಳನ್ನಾಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.