ADVERTISEMENT

ಧರ್ಮಸ್ಥಳ ಪರ ಪ್ರತಿಭಟನೆ; ಹರತಾಳು ಹಾಲಪ್ಪಗೆ ನೈತಿಕತೆ ಇಲ್ಲ: ಶಾಸಕ ಗೋಪಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:41 IST
Last Updated 3 ಸೆಪ್ಟೆಂಬರ್ 2025, 4:41 IST
ಗೋಪಾಲಕೃಷ್ಣ ಬೇಳೂರು
ಗೋಪಾಲಕೃಷ್ಣ ಬೇಳೂರು   

ಸಾಗರ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಸೇರಿಸಲು ಹೊರಟಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಧರ್ಮಸ್ಥಳ ಕ್ಷೇತ್ರದ ಪರವಾಗಿ ಪ್ರತಿಭಟನೆ ನಡೆಸಲು ನೈತಿಕತೆ ಎಲ್ಲಿದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದವರಿಗೆ ಸೇರಿದ ಸಿಗಂದೂರು ದೇವಸ್ಥಾನವನ್ನು ಮುಳುಗಿಸುವ ಪ್ರಯತ್ನ ಮಾಡಿದ್ದ ಹಾಲಪ್ಪ ಅವರು ಈಗ ಧರ್ಮಸ್ಥಳ ಉಳಿಸಿ ಎಂದು ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಟೀಕಿಸಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಮೇಲೆ ಅಪವಾದ ಬಂದಾಗ ರಾಜ್ಯ ಸರ್ಕಾರ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಎಸ್ಐಟಿ ನೇಮಿಸಿದಾಗ ರಾಜ್ಯದ ಬಿಜೆಪಿ ಮುಖಂಡರು ಅದನ್ನು ಸ್ವಾಗತಿಸಿದ್ದರು. ರಾಜ್ಯ ಸರ್ಕಾರದ ಈ ದಿಟ್ಟ ನಿರ್ಧಾರದಿಂದ ಧರ್ಮಸ್ಥಳದ ಮೇಲಿನ ಆರೋಪ ಸುಳ್ಳು ಎಂಬುದು ಲೋಕಕ್ಕೆ ಗೊತ್ತಾಗಿದೆ. ಈಗ ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಧರ್ಮಸ್ಥಳದ ಹೆಸರಿನಲ್ಲಿ ಯಾತ್ರೆ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಹಿಂದುತ್ವ ಅಥವಾ ಧರ್ಮಸ್ಥಳವನ್ನು ರಾಜ್ಯದ ಜನರು ಬಿಜೆಪಿಗೆ ಬರೆದುಕೊಟ್ಟಿಲ್ಲ. ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರವನ್ನು ರಾಜ್ಯ ಸರ್ಕಾರ ಬಯಲಿಗೆ ಎಳೆದಿದೆ. ಇದರ ಶ್ರೇಯಸ್ಸು ಕಾಂಗ್ರೆಸ್‌ಗೆ ದೊರಕುತ್ತದೆ ಎಂಬ ಭಯದಿಂದ ಬಿಜೆಪಿಯವರು ಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಲೆನಾಡು ಭಾಗದಲ್ಲಿ ಈ ವರ್ಷ ವಾಡಿಕೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು ಭತ್ತ, ಜೋಳ, ಅಡಿಕೆ ಬೆಳೆಗಾರರಿಗೆ ಅಧಿಕ ನಷ್ಟ ಉಂಟಾಗಿದೆ. ಈಗಾಗಲೇ ವಿಧಾನಸಭೆಯ ಅಧಿವೇಶನದಲ್ಲಿ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದ್ದೇನೆ. ಈ ಪ್ರಯತ್ನವನ್ನು ಮುಂದುವರೆಸಲಾಗುವುದು ಎಂದುಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.