ADVERTISEMENT

ಪಕ್ಷೇತರರ ಸಹಕಾರದಿಂದ ಶಿಕಾರಿಪುರ ಪುರಸಭೆ ಗದ್ದುಗೆ ಏರಿದ ಬಿಜೆಪಿ 

ಚುನಾವಣೆಯಲ್ಲಿ ಕಾಂಗ್ರೆಸ್‌ ಸದಸ್ಯರಿಂದ ಕಪ್ಪುಪಟ್ಟಿ ಪ್ರದರ್ಶನ, ಮಾತಿನ ಚಕಮಕಿ 

ಎಚ್.ಎಸ್.ರಘು
Published 9 ನವೆಂಬರ್ 2020, 15:01 IST
Last Updated 9 ನವೆಂಬರ್ 2020, 15:01 IST
ಶಿಕಾರಿಪುರ ಪುರಸಭೆ ನೂತನ ಅಧ್ಯಕ್ಷರಾಗಿ ಸೋಮವಾರ ಆಯ್ಕೆಯಾದ ಬಿಜೆಪಿ ಸದಸ್ಯೆ ಲಕ್ಷ್ಮೀ ಮಹಾಲಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪಕ್ಷೇತರ ಸದಸ್ಯ ಮೊಹಮದ್‌ ಸಾದಿಕ್‌ ಅವರನ್ನು ಸಂಸದ ಬಿ.ವೈ. ರಾಘವೇಂದ್ರ ಅಭಿನಂದಿಸಿದರು
ಶಿಕಾರಿಪುರ ಪುರಸಭೆ ನೂತನ ಅಧ್ಯಕ್ಷರಾಗಿ ಸೋಮವಾರ ಆಯ್ಕೆಯಾದ ಬಿಜೆಪಿ ಸದಸ್ಯೆ ಲಕ್ಷ್ಮೀ ಮಹಾಲಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪಕ್ಷೇತರ ಸದಸ್ಯ ಮೊಹಮದ್‌ ಸಾದಿಕ್‌ ಅವರನ್ನು ಸಂಸದ ಬಿ.ವೈ. ರಾಘವೇಂದ್ರ ಅಭಿನಂದಿಸಿದರು   

ಶಿಕಾರಿಪುರ: ಪಕ್ಷೇತರರ ಸಹಕಾರದಿಂದ ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಪುರಸಭೆ ನೂತನ ಅಧ್ಯಕ್ಷರಾಗಿ 12ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಲಕ್ಷ್ಮೀ ಮಹಾಲಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ 8ನೇ ವಾರ್ಡ್‌ನ ಪಕ್ಷೇತರ ಸದಸ್ಯ ಮೊಹಮದ್‌ ಸಾದಿಕ್‌ ಆಯ್ಕೆಯಾದರು.

ಪಟ್ಟಣದ 23 ವಾರ್ಡ್‌ಗಳ ಪೈಕಿ 12 ವಾರ್ಡ್‌ಗಳಲ್ಲಿ ಕಾಂಗ್ರೆಸ್‌, 8 ವಾರ್ಡ್‌ಗಳಲ್ಲಿ ಬಿಜೆಪಿ ಹಾಗೂ 3 ವಾರ್ಡ್‌ಗಳಲ್ಲಿ ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದರು. ಈಚೆಗೆ ಕಾಂಗ್ರೆಸ್‌ನ ಮೂವರು ಸದಸ್ಯರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಪರಿಣಾಮ ಕಾಂಗ್ರೆಸ್‌ ಸದಸ್ಯರ ಸಂಖ್ಯೆ 9ಕ್ಕೆ ಕುಸಿದಿತ್ತು. ಬಿಜೆಪಿಗೆ ಮೂವರು ಪಕ್ಷೇತರರು ಬೆಂಬಲ ನೀಡಿದ್ದರಿಂದ 11 ಸ್ಥಾನ ಹೊಂದಿತ್ತು. ಸಂಸದ ಬಿ.ವೈ. ರಾಘವೇಂದ್ರ ಮತ ಸೇರಿ 12 ಸದಸ್ಯರ ಬಲ ಬಿಜೆಪಿಗೆ ಇತ್ತು.

ಸೋಮವಾರ ಪುರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಕೈಎತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು.

ADVERTISEMENT

ಪುರಸಭೆ ಮೀಸಲಾತಿ ಪ್ರಕಾರ ಹಿಂದುಳಿದ ವರ್ಗ 2ಎ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 12ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಲಕ್ಷ್ಮೀ ಮಹಾಲಿಂಗಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೊಹಮದ್‌ ಸಾದಿಕ್‌ ಪರ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಪಕ್ಷೇತರ ಮೂವರು ಸದಸ್ಯರು ಸೇರಿ 12 ಸದಸ್ಯರು ಕೈ ಎತ್ತುವ ಮೂಲಕ ಮತದಾನ ಮಾಡಿದರು.

ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಮಲಮ್ಮ ಹುಲ್ಮಾರ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೊಹಮದ್‌
ದಸ್ತಗೀರ್ (ರೋಶನ್) ಅವರ ಪರ 9 ಸದಸ್ಯರು ಕೈ ಎತ್ತಿದರು. ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ಲಕ್ಷ್ಮೀ ಮಹಾಲಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಪಕ್ಷೇತರ ಸದಸ್ಯ ಮೊಹಮದ್‌ ಸಾದಿಕ್‌ ಆಯ್ಕೆಯನ್ನು ಚುನಾವಣಾಧಿಕಾರಿ ತಹಶೀಲ್ದಾರ್‌ ಎಂ.ಪಿ. ಕವಿರಾಜ್‌ ಘೋಷಿಸಿದರು.

ಕಾಂಗ್ರೆಸ್ ಸದಸ್ಯರಿಂದ ಕಪ್ಪು ಪಟ್ಟಿ ಪ್ರದರ್ಶನ:ಅಧ್ಯಕ್ಷರ ಆಯ್ಕೆ ಘೋಷಣೆ ನಂತರ ಸಂಸದ ಬಿ.ವೈ. ರಾಘವೇಂದ್ರ ನೂತನ ಅಧ್ಯಕ್ಷ –ಉಪಾಧ್ಯಕ್ಷರನ್ನು ಅಭಿನಂದಿಸಲು ವೇದಿಕೆ ಏರುತ್ತಿದ್ದಂತೆ ಪುರಸಭೆ ಕಾಂಗ್ರೆಸ್‌ ಸದಸ್ಯರಾದ ಎಸ್‌.ಪಿ. ನಾಗರಾಜ್‌ಗೌಡ್ರು, ಹುಲ್ಮಾರ್‌ ಮಹೇಶ್‌, ಗೋಣಿ ಪ್ರಕಾಶ್‌, ಉಳ್ಳಿದರ್ಶನ್‌‌ ಕಪ್ಪುಪಟ್ಟಿ ಪ್ರದರ್ಶಿಸುವ ಮೂಲಕ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್‌ ಸದಸ್ಯರಿಗೆ ಆಮಿಷ ಒಡ್ಡಿ ರಾಜೀನಾಮೆ ಕೊಡಿಸಿ, ಆಪರೇಷನ್‌ ಕಮಲ ಹಾಗೂ ರೆಸಾರ್ಟ್‌ ರಾಜಕಾರಣ ನಡೆಸುವ ಮೂಲಕ ಹಿಂಬಾಗಿಲಿನ ಮೂಲಕ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಪ್ರತಿಭಟಿಸಿದರು.

ಆಗ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಚುನಾವಣಾ ಸಂದರ್ಭ ಮಾತ್ರ ಪಕ್ಷ ರಾಜಕಾರಣ ಮಾಡಬೇಕು. ಪಕ್ಷಾತೀತವಾಗಿ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಪಟ್ಟಣದಲ್ಲಿ ಸೂರಿಲ್ಲದ ಬಡವರಿಗೆ ನಿವೇಶನ ಒದಗಿಸಲು ಮುಂದಾಗೋಣ’ ಎಂದು ಸಲಹೆ ನೀಡಿದರು.

ಸಂಸದ ರಾಘವೇಂದ್ರ ನೇತೃತ್ವದಲ್ಲಿ ಬಸ್ಸಿನಲ್ಲಿ ಬಂದ ಸದಸ್ಯರು:ಚುನಾವಣೆ ಕಾರಣ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಪುರಸಭೆ ಬಿಜೆಪಿ ಸದಸ್ಯರು ಹಾಗೂ ಪಕ್ಷೇತರ ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಳ್ಳಲು ಪುರಸಭೆ ಕಚೇರಿಗೆ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಬಸ್ಸಿನಲ್ಲಿ ಬಂದರು. ಪುರಸಭೆ ಕಚೇರಿ ಸುತ್ತಲೂ ಪೊಲೀಸ್‌ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಪುರಸಭೆ ಕಚೇರಿ ಮುಂಭಾಗ ಕಾಂಗ್ರೆಸ್‌ ಪ್ರತಿಭಟನೆ:ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಣಿ ಮಾಲತೇಶ್‌ ನೇತೃತ್ವದಲ್ಲಿ ಪುರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.