
ಶಿವಮೊಗ್ಗ: ‘ಕಾಳುಮೆಣಸು ವಹಿವಾಟಿನಲ್ಲಿ ಜಾಗತಿಕವಾಗಿ ವಿಯೆಟ್ನಾಂ ದೇಶದ ಏಕಸ್ವಾಮ್ಯ ಮೀರುವ ಎಲ್ಲ ಅವಕಾಶವೂ ಭಾರತೀಯ ರೈತರಿಗೆ ಇದೆ. ಅದನ್ನು ಬಳಸಿಕೊಂಡು ಕೃಷಿ ಆದಾಯ ದುಪ್ಪಟ್ಟು ಮಾಡಿಕೊಳ್ಳಿ’ ಎಂದು ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎ.ಬಿ.ಪಾಟೀಲ ಸಲಹೆ ನೀಡಿದರು.
ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನಲ್ಲಿ ಗುರುವಾರ ‘ಅಡಿಕೆ ಸಮೃದ್ಧಿಗಾಗಿ ಕಾಳು ಮೆಣಸಿನ ಅಂತರ ಬೆಳೆ’ ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಸದ್ಯ 7 ಲಕ್ಷ ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಆ ಪೈಕಿ 2 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಅಂತರ ಬೆಳೆಯಾಗಿ ಕಾಳು ಮೆಣಸು ಬೆಳೆಯಲಾಗುತ್ತಿದೆ. ಉಳಿದ ಐದು ಲಕ್ಷ ಹೆಕ್ಟೇರ್‌ನಲ್ಲಿ ಕಾಳು ಮೆಣಸು ಬೆಳೆದಿದ್ದೇ ಆದರೆ ದೇಶದ ಆಂತರಿಕ ಬೇಡಿಕೆಯಷ್ಟು ಕಾಳು ಮೆಣಸು ಇಲ್ಲಿಯೇ ಲಭ್ಯವಾಗಲಿದೆ. ಜೊತೆಗೆ ಆಮದು ಕೂಡ ತಪ್ಪಿಸಬಹುದು’ ಎಂದು ಅಭಿಪ್ರಾಯಪಟ್ಟರು.
‘ರೈತರು ಒಟ್ಟಾರೆ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ತೋಟಗಾರಿಕೆಯಲ್ಲಿ ಅತಿ ಲಾಭದಾಯಕ ಮಿಶ್ರ ಬೆಳೆ ಇದ್ದರೆ ಅದು ಕಾಳು ಮೆಣಸು. ಸದ್ಯ ದೇಶದಲ್ಲಿ ಕಾಳು ಮೆಣಸಿನ ಉತ್ಪಾದನೆ ಹಾಗೂ ರಫ್ತು ಎರಡೂ ಕಡಿಮೆ ಆಗಿದೆ. ಕಡಿಮೆ ಉತ್ಪಾದನಾ ವೆಚ್ಚದ ಕಾರಣ ಅಗ್ಗದ ಬೆಲೆಗೆ ಕಾಳು ಮೆಣಸು ರಫ್ತು ಮಾಡುವ ವಿಯೆಟ್ನಾಂನ ಸ್ಪರ್ಧೆ ನಿಭಾಯಿಸಲು ಭಾರತೀಯ ಕೃಷಿಕರು ಮೌಲ್ಯವರ್ಧನೆ, ಬ್ರ್ಯಾಂಡಿಂಗ್, ಮಾರುಕಟ್ಟೆ, ಹಾಗೂ ಉತ್ಪಾದನೋತ್ತರ ಕೃಷಿಯತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಜಿ.ಎಂ.ದೇವಗಿರಿ ಮಾತನಾಡಿ, ‘ನಿಧಾನ ಸೊರಗು ರೋಗ ಹಾಗೂ ವೇಗದ ಸೊರಗು ರೋಗದ ಪರಿಣಾಮ ಕಳೆದೊಂದು ದಶಕದಿಂದ ರಾಜ್ಯದಲ್ಲಿ ಕಾಳು ಮೆಣಸಿನ ಪ್ರದೇಶ ಕಡಿಮೆ ಆಗುತ್ತಿದೆ. ಕಾಫಿಗಿಂತ ಅಡಿಕೆಯಲ್ಲಿ ಅಂತರ ಬೆಳೆಯಾಗಿ ಕಾಳು ಮೆಣಸು ಅತ್ಯಂತ ಸೂಕ್ತ. ಏಕೆಂದರೆ ಸಾಮಾನ್ಯವಾಗಿ ಶೇ 40ರಷ್ಟು ನೆರಳು ಹಾಗೂ ಬಿಸಿಲಿನ ಹಂಚಿಕೆ ಆಗುತ್ತದೆ. ಇದರಿಂದ ಇಲ್ಲಿ ರೋಗ ಬಾಧೆಯ ಆತಂಕ ಕಡಿಮೆ’ ಎಂದು ಹೇಳಿದರು.
‘ಅಡಿಕೆ ರೋಗ ಇಲ್ಲವೇ ಬೆಲೆ ಕುಸಿತದಿಂದ ಬಾಧೆಗೊಳಗಾಗಿ ಲಾಭದ ಬದಲು ನಷ್ಟದ ಹಾದಿ ಹಿಡಿದಲ್ಲಿ ಆಗ ಕಾಳು ಮೆಣಸು ನಿಶ್ಚಿತವಾಗಿಯೂ ಬೆಳೆಗಾರರಿಗೆ ಆದಾಯದ ಮೂಲವಾಗಲಿದೆ. ಹೀಗಾಗಿ ಏಕ ಬೆಳೆಯ ಬದಲು ಬಹುಬೆಳೆಗೆ ಒತ್ತು ನೀಡುವುದು ಹೆಚ್ಚು ಸೂಕ್ತ’ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಆರ್.ಸಿ.ಜಗದೀಶ್, ‘ಅಡಿಕೆ ಬೆಲೆ ಸದಾ ಸ್ಥಿರವಾಗಿರಲು ಮ್ಯಾಮ್ಕೋಸ್, ತುಮ್‌ಕೋಸ್, ಕ್ಯಾಂಪ್ಕೊದಂತಹ ಸಹಕಾರಿ ತತ್ವದ ಸಂಸ್ಥೆಗಳು ಕಾರಣ. ಕಾಳು ಮೆಣಸಿಗೂ ಅಂತಹದ್ದೇ ಬೆಂಬಲ ಸಿಕ್ಕರೆ ಬೆಳೆಗಾರರ ಹಿತ ಕಾಯಲು ನೆರವಾಗಲಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಗೋಡಂಬಿ ನಿರ್ದೇಶನಾಲಯದ ನಿರ್ದೇಶಕ ದಿನಕರ್ ಅಡಿಗ, ಕಾಸರಗೋಡಿನ ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಕೆ.ಬಾಲಚಂದ್ರ ಹೆಬ್ಬಾರ್, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ.ನಾಗರಾಜ ಅಡಿವೆಪ್ಪರ, ಸಾಂಬಾರು ಮಂಡಳಿಯ ಸದಸ್ಯ ಪ್ರಸನ್ನ ಕೆರೆಕೈ ಪಾಲ್ಗೊಂಡಿದ್ದರು.
ಮಡಿಕೇರಿಯ ಸಾಂಬಾರು ಬೆಳೆ ಸಂಶೋಧನಾ ಕೇಂದ್ರದ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಎಸ್.ಜೆ.ಅಂಕೇಗೌಡ, ಐಸಿಎಆರ್‌ನ ನಿವೃತ್ತ ಪ್ರಧಾನ ವಿಜ್ಞಾನಿ ಎಂ.ಎನ್.ವೇಣುಗೋಪಾಲ್, ಪ್ರೊ.ಇಮ್ರಾನ್‌ಖಾನ್, ಪ್ರದೀಪ್ ಗೋಪಕ್ಕಲಿ ಕಾಳು ಮೆಣಸು ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕ ನಂ 1 ಆದರೆ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆಯಲ್ಲಿ ಮಾತ್ರ ಹಿಂದುಳಿದಿದ್ದೇವೆ. ಹೀಗಾಗಿ ಆ ವಿಚಾರಗಳಿಗೆ ಬೆಳೆಗಾರರು ಹೆಚ್ಚು ಒತ್ತು ಕೊಡಬೇಕು.ವಿಶ್ವೇಶ್ವರ ಭಟ್ ಶಿರಸಿ ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಸಲಹೆಗಾರ
ಸರ್ಕಾರ ಯಾವುದೇ ನೀತಿ ನಿರೂಪಣೆ ಮಾಡಿದರೆ ಅದರ ನೇರ ಪರಿಣಾಮ ನೇರವಾಗಿ ರೈತರ ಮೇಲೆ ಬೀರುತ್ತದೆ. ಆದರೆ ಎಲ್ಲರೂ ವಿ.ವಿ.ಗಳತ್ತ ಬೊಟ್ಟು ತೋರುತ್ತಾರೆ. ನಮ್ಮ ಕೆಲಸ ಬರೀ ಸಂಶೋಧನೆ ಮತ್ತು ರೈತರಿಗೆ ತಿಳಿವಳಿಕೆ ಕೊಡುವುದು ಮಾತ್ರಪ್ರೊ.ಆರ್.ಸಿ.ಜಗದೀಶ್ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೊಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.