ADVERTISEMENT

ಕುಟುಂಬ ವ್ಯವಸ್ಥೆ ಬಲಗೊಳ್ಳದಿದ್ದರೆ ವೃದ್ಧಾಶ್ರಮ ಹೆಚ್ಚಳ: ವಿಶ್ವೇಶ್ವರ ಹೆಗಡೆ

‘ನಾನು’ ಕೃತಿ ಬಿಡುಗಡೆ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 4:15 IST
Last Updated 27 ಜೂನ್ 2022, 4:15 IST
ಸಾಗರಕ್ಕೆ ಸಮೀಪದ ಮಡಸೂರು ಲಿಂಗದಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರ ಆತ್ಮಕಥನ ‘ನಾನು’ ಕೃತಿಯನ್ನು ವಾಗ್ಮಿ ಹಿರೇಮಗಳೂರು ಕಣ್ಣನ್ ಬಿಡುಗಡೆ ಮಾಡಿದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಅಶೋಕ ಹಾರನಹಳ್ಳಿ ಇದ್ದರು.
ಸಾಗರಕ್ಕೆ ಸಮೀಪದ ಮಡಸೂರು ಲಿಂಗದಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರ ಆತ್ಮಕಥನ ‘ನಾನು’ ಕೃತಿಯನ್ನು ವಾಗ್ಮಿ ಹಿರೇಮಗಳೂರು ಕಣ್ಣನ್ ಬಿಡುಗಡೆ ಮಾಡಿದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಅಶೋಕ ಹಾರನಹಳ್ಳಿ ಇದ್ದರು.   

ಸಾಗರ: ‘ಭಾರತೀಯ ಪರಂಪರೆಯಲ್ಲಿ ಕುಟುಂಬ ವ್ಯವಸ್ಥೆಯ ಮೌಲ್ಯಗಳಿಗೆ ದೊಡ್ಡ ಸ್ಥಾನವಿದೆ. ನಮ್ಮ ಕುಟುಂಬ ವ್ಯವಸ್ಥೆಯನ್ನು ಉತ್ತಮಪಡಿಸಿ ಭಾವನಾತ್ಮಕ ಸಂಬಂಧಗಳನ್ನು ಬಲಪಡಿಸಿಕೊಳ್ಳದೆ ಇದ್ದರೆ ಶಾಲೆಗಳನ್ನು ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳನ್ನಾಗಿ ಪರಿವರ್ತಿಸಬೇಕಾಗುತ್ತದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಮೀಪದ ಮಡಸೂರು ಲಿಂಗದಹಳ್ಳಿ ಗ್ರಾಮದಲ್ಲಿ ಸಾವಿತ್ರಮ್ಮ ಮತ್ತು ಎಲ್.ಟಿ.ತಿಮ್ಮಪ್ಪ ಹೆಗಡೆ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರ ಆತ್ಮಕಥನ ‘ನಾನು’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಎಲ್.ಟಿ.ತಿಮ್ಮಪ್ಪ ಹೆಗಡೆ ಅವರು ದೀರ್ಘಕಾಲ ರಾಜಕೀಯ, ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಲೇ ಕೌಟುಂಬಿಕವಾದ ಮಾನವೀಯ ಸಂಬಂಧಗಳನ್ನು ಉಳಿಸಿಕೊಂಡಿದ್ದಾರೆ. ಈ ಪ್ರವೃತ್ತಿ ಅವರ ಜೀವನದಲ್ಲಿ ಸಾರ್ಥಕತೆ ಮೂಡಿಸಲು ಕಾರಣವಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಸಹಕಾರ, ರಾಜಕೀಯ, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ಒಳಿತನ್ನು ಮಾಡಬೇಕು, ಒಳಿತು ಆಗಬೇಕು ಎಂಬ ನಂಬಿಕೆ ಹಾಗೂ ಬದ್ಧತೆಯಿಂದ ಎಲ್.ಟಿ.ಹೆಗಡೆ ಅವರು ಕೆಲಸ ಮಾಡಿದ್ದಾರೆ. ರಾಜಕೀಯ ವ್ಯವಸ್ಥೆಗೆ ಗೌರವ ತಂದ ಬೆರಳಣಿಕೆಯ ವ್ಯಕ್ತಿಗಳಲ್ಲಿ ಎಲ್.ಟಿ. ಕೂಡ ಒಬ್ಬರಾಗಿದ್ದಾರೆ’ ಎಂದರು.

‘ಇಂತವರನ್ನು ಮಾರ್ಗದರ್ಶಕರಾಗಿ ಅನುಸರಿಸಬಹುದು ಎಂಬ ಮೇಲ್ಪಂಕ್ತಿಯ ವ್ಯಕ್ತಿಗಳು ನಮ್ಮ ನಡುವೆ ವಿರಳವಾಗುತ್ತಿದ್ದಾರೆ. ಪ್ರತಿಫಲದ ಅಪೇಕ್ಷೆ ಇಲ್ಲದೆ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದ ಎಲ್.ಟಿ. ಹೆಗಡೆ ಅವರನ್ನು ನಿಸ್ಸಂಶಯವಾಗಿ ಮೇಲ್ಪಂಕ್ತಿಯ ವ್ಯಕ್ತಿ ಎಂದು ಗುರುತಿಸಬಹುದು’ ಎಂದರು.

‘ನಾನು’ ಆತ್ಮಕಥೆ ಉತ್ಕಟವಾದ ಭಾವನೆಗಳನ್ನು ಒಳಗೊಂಡಿರುವ ಜೊತೆಗೆ ಸರಾಗವಾಗಿ ಓದಿಸಿಕೊಂಡು ಹೋಗುವ ಗುಣವನ್ನೂ ಹೊಂದಿದೆ. ಕೃತಿಯ ಉದ್ದಕ್ಕೂ ಎಲ್.ಟಿ. ಅವರು ಸಾರ್ವಜನಿಕರ ಬದುಕಿನಲ್ಲಿ ತೋರಿರುವ ಶ್ರದ್ಧೆ, ಪ್ರಾಮಾಣಿಕತೆ, ಬದ್ಧತೆಯ ದರ್ಶನವಾಗುತ್ತದೆ’ ಎಂದರು.

‘ಬುದ್ದಿವಂತಿಕೆ, ವಿಚಾರವಂತಿಕೆಯ ಜೊತೆಗೆ ಆಚಾರವಂತಿಕೆಯನ್ನೂ ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿತ್ವ ಎಲ್.ಟಿ. ಅವರದ್ದು. ಅವರ ಆತ್ಮಕಥೆ ಅನ್ಯ ನಿರೂಪಿತವಾಗಿದ್ದರೂ, ಅವರೇ ಬರೆದಿರುವ ರೀತಿಯಲ್ಲಿ ಇರುವುದು ಕೃತಿಯ ವಿಶೇಷವಾಗಿದೆ’ ಎಂದುಕೃತಿ ಬಿಡುಗಡೆ ಮಾಡಿದ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಆತ್ಮಕಥೆಯನ್ನು ನಿರೂಪಿಸಿರುವ ಪತ್ರಕರ್ತ ಮಾ.ವೆಂ.ಸ. ಪ್ರಸಾದ್ ಮಾತನಾಡಿದರು. ಸಾವಿತ್ರಮ್ಮ ಎಲ್.ಟಿ.ತಿಮ್ಮಪ್ಪ ಹೆಗಡೆ ಇದ್ದರು. ನಿಧಿ ರಮೇಶ್ ಪ್ರಾರ್ಥಿಸಿದರು. ಎಲ್.ಟಿ.ತಿಮ್ಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವರುಣ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.