ADVERTISEMENT

ಸಮಾಜವಾದ ಸಿದ್ಧಾಂತಕ್ಕೆ ‘ಸಡಿಲ’ ಅರ್ಥದ ಪರಿಭಾವನೆ: ಡಿ.ಎಸ್.ನಾಗಭೂಷಣ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 9:42 IST
Last Updated 28 ಮಾರ್ಚ್ 2021, 9:42 IST
ಸಮಾಜವಾದಿ ಸಂಗಮ ಕಾರ್ಯಕ್ರಮದಲ್ಲಿ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನದ ಅಧ್ಯಕ್ಷ ಡಿ.ಎಸ್.ನಾಗಭೂಷಣ ಮಾತನಾಡಿದರು.
ಸಮಾಜವಾದಿ ಸಂಗಮ ಕಾರ್ಯಕ್ರಮದಲ್ಲಿ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನದ ಅಧ್ಯಕ್ಷ ಡಿ.ಎಸ್.ನಾಗಭೂಷಣ ಮಾತನಾಡಿದರು.    

ಶಿವಮೊಗ್ಗ: ಚಾರಿತ್ರಿಕ ಹಿನ್ನೆಲೆಯ ಸಮಾಜವಾದ ಒಂದು ಆದರ್ಶ. ಸಮಾಜದ ಆಶಯದ ಜತೆಗೆ ಸಾಮಾಜಿಕ ವಿಷಯಮತೆಗೂ ಪರಿಹಾರ ಹುಡುಕುವ ಮೇರು ಸಿದ್ಧಾಂತವನ್ನು ‘ಸಡಿಲ’ ಅರ್ಥದಲ್ಲಿ ಪರಿಭಾವಿಸಲಾಗುತ್ತಿದೆ ಎಂದು ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನದ ಅಧ್ಯಕ್ಷ ಡಿ.ಎಸ್.ನಾಗಭೂಷಣ ಬೇಸರ ವ್ಯಕ್ತಪಡಿಸಿದರು.

ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ಪ್ರೆಸ್‌ಟ್ರಸ್ಟ್‌ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಶಮಾನೋತ್ಸವ, ಪುಸ್ತಕಗಳ ಬಿಡುಗಡೆ, ಸಮಾಜವಾದಿ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಗತೀಕರಣ ನೀಡಿದೆ ಎನ್ನಲಾಗುವ ಸಮೃದ್ಧಿ ಹಿಂದೆ ಬಂಡವಾಳ ಶಾಹಿ ಶೋಷಣೆ ಇದೆ ಎನ್ನುವ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು. 2010ರ ಹೊತ್ತಿಗೆ ಪ್ರಚಲಿತಕ್ಕೆ ಬಂದ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಅಭಿವೃದ್ಧಿ ಪರಿಭಾಷೆಯ ಹಿಂದೆ ಸಮಾಜವಾದದ ಆಶಯ ಅಡಗಿದೆ. ಸಮಾಜವಾದವನ್ನು ಪುನರ್ ರೂಪಿಸುವ, ವ್ಯಾಖ್ಯಾನಿಸುವ ಕೆಲಸ ತುರ್ತಾಗಿ ಆಗಬೇಕಿದೆ. ತಾರ್ಕಿಕ ದೋಷ ಅವಲೋಕಿಸಿ, ಪರ್ಯಾಯ ‌ಸಮಾಜವಾದದ ಶೋಧನೆ ನಡೆಯಬೇಕಿದೆ.‌ ಪ್ರತಿಷ್ಠಾನ ದಶಕದಿಂದ ಲೋಹಿಯಾ ವಿಚಾರಗಳನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದರು.

ADVERTISEMENT

ಒಂದು ಕಾಲದಲ್ಲಿ ಕರ್ನಾಟಕದ ಎಲ್ಲ ದೊಡ್ಡ ಸಾಹಿತಿಗಳೂ ಲೋಹಿಯಾ ವಾದಿಗಳಾಗಿದ್ದರು. ಲೋಹಿಯಾ ಅವರದು ಸರ್ವಾಮೃತ ಸಮಾಜವಾದ. ಸದ್ಯ ಜಂಗಮವೂ, ಸ್ಥಾವರವೂ ಅಲ್ಲದ ಸ್ಥಿತಿಯಲ್ಲಿದೆ ಎಂದು ಪ್ರತಿಪಾದಿಸಿದರು.

‘ರಸಿಕರುದ್ರ ತಪಸ್ವಿ ಲೋಹಿಯಾ’ ಮತ್ತು ‘ಸಮಾಜವಾದದ ಸಾಲು ದೀಪಗಳು’ ಪುಸ್ತಕಗಳ ಕುರಿತು ಮಾತನಾಡಿದ ಚಿಂತಕಿ ತಾರಿಣಿ ಶುಭದಾಯಿನಿ, ಲೋಹಿಯಾರ ಬರಹಗಳು ಒಂದು ಸಾಂಸ್ಕೃತಿಕ ಪಠ್ಯ. ಲೋಹಿಯಾ ಆಶಯಗಳು ಗುಪ್ತಗಾಮಿನಿಯಾಗಿ ಎಲ್ಲರ ಮದ್ಯೆ ಇವೆ. ಸಮ ಸಮಾಜದ ಕನಸು ಈಗಲೂ ಜೀವಂತವಾಗಿವೆ. ಸಮಾಜವಾದಿ ಚಿಂತಕರು ಇಂದಿಗೂ ಅಶಯಗಳನ್ನು ಜೀವಂತವಾಗಿ ಇಟ್ಟಿದ್ದಾರೆ ಎನ್ನುವುದನ್ನು ಕೃತಿಗಳಲ್ಲಿನ ಅಂಶಗಳು ಸಾದರಪಡಿಸಿವೆ ಎಂದು ವಿಶ್ಲೇಷಿಸಿದರು.

ಲೋಹಿಯಾ ಚಿಂತನೆ ಯುವ ಪೀಳಿಗೆ ಮುಟ್ಟಬೇಕಿದೆ. ಅವರ ಚಿಂತನೆಗಳಲ್ಲಿ ಗಾಂಧಿ ಪ್ರಜ್ಞಾಪೂರ್ವಕವಾಗಿ ಹಿನ್ನೆಲೆಗೆ ಇಟ್ಟ ವಿಷಯಗಳಿಗೆ ಆದ್ಯತೆ ದೊರಕಿದೆ. ಲೋಹಿಯಾ ಗಾಂಧಿ ಉತ್ತರಾಧಿಕಾರಿ ಆಗಬೇಕಿತ್ತು ಎನ್ನುವ ನಿರೀಕ್ಷೆ ಸಾಕಾರಗೊಳ್ಳಲಿಲ್ಲ. ಗಾಂಧಿ–ನೆಹರು ಸಂಯೋಜನೆಯಲ್ಲಿ‌ ಅಂತಹ ಆಶಯ ಹಿನ್ನೆಲೆಗೆ ಸರಿಯಿತು. ಲೋಹಿಯಾ ಅವರು ಗಾಂಧಿ ಚಿಂತನೆಯನ್ನು ಪ್ರಾಯೋಗಿಕವಾಗಿ ನೋಡುತ್ತಾ ಸದಾ ಒರೆಗೆ ಹಚ್ಚುತ್ತಿದ್ದರು. ಕಾಂಗ್ರೆಸ್ ಮತ್ತು ಕಾಂಗ್ರೆಸೇತರ ರಾಜಕಾರಣದ ವಿಮರ್ಶೆ ಮಾಡುತ್ತಿದ್ದರು.
ಗಾಂಧೀಜಿ ಅವರ ಸತ್ಯ ಅಹಿಂಸೆಗಳನ್ನು ಸಮಾಜವಾದದ ಜತೆ ಕಸಿಮಾಡಿಕೊಂಡಿದ್ದರು ಎಂದು ಪ್ರತಿಪಾದಿಸಿದರು.

ಪುಸ್ತಕಗಳನ್ನು ಬಿಡುಗಡೆ ಮಾಡಿದ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ಮೈಸೂರಿನಲ್ಲಿ ಮಹಾರಾಜರ ಜಂಭೂ ಸವಾರಿ ವಿರುದ್ಧ ಶಾಂತವೇರಿ ಗೋಪಾಲಗೌಡರ ಜತೆ ನಡೆಸಿದ ಹೋರಾಟ. ಲೋಹಿಯಾ ಅವರು ಕಾರು ಚಾಲಕನ‌ ಬಗ್ಗೆಯೂ ಹೊಂದಿದ್ದ ಕಳಕಳಿ ಸ್ಮರಿಸಿದರು.

ಚನ್ನಪಟ್ಟಣ ಅರಳಾಳುಸಂದ್ರದ ರೈತ ನಾಯಕಿ ಅನಸೂಯಮ್ಮ ದಶಮಾನೋತ್ಸವ ಹಿನ್ನೋಟ ಪುಸ್ತಿಕೆ ಬಿಡುಗಡೆ ಮಾಡಿದರು. ರೈತ ಮುಖಂಡ ಕಡಿದಾಳು ಶಾಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಬಳ್ಳಾರಿ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಅಧ್ಯಕ್ಷತೆ ವಹಿಸಿದ್ದರು.

ಕುಪ್ಪಳಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್, ಗಾಂಧಿ ಕಥನ ಕೃತಿಯ ಪ್ರಕಾಶಕ ಎಂ.ಸಿ.ನರೇಂದ್ರ, ನಿವೃತ್ತ ಪ್ರಾಧ್ಯಾಪಕ ಜಿ.ಬಿ.ಶಿವರಾಜು, ಪ್ರತಿಷ್ಠಾನದ ಮಾಜಿ ಟ್ರಸ್ಟಿ ಪ್ರತಿಭಾ ಪುಟ್ಟರಾಜು ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.