ADVERTISEMENT

ಅಧೀನ ಸಿಬ್ಬಂದಿಯಿಂದ ಲಂಚ: ಡಿವೈಎಸ್ಪಿ TP ಕೃಷ್ಣಮೂರ್ತಿ ಲೋಕಾಯುಕ್ತ ಬಲೆಗೆ

ಡಿಎಆರ್ ಕಚೇರಿಯಲ್ಲಿ ಸಿಬ್ಬಂದಿಯನ್ನು ಅವರಿಗೆ ಅಗತ್ಯವಿರುವ ಕಡೆ ಕರ್ತವ್ಯಕ್ಕೆ ನಿಯೋಜನೆಗೆ ಲಂಚ ಪಡೆಯಲಾಗುತ್ತದೆ ಎಂಬ ದೂರುಗಳು ಈ ಮೊದಲು ಕೇಳಿಬಂದಿದ್ದವು.

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 12:23 IST
Last Updated 25 ಮಾರ್ಚ್ 2025, 12:23 IST
<div class="paragraphs"><p>ಡಿವೈಎಸ್ಪಿ TP ಕೃಷ್ಣಮೂರ್ತಿ</p></div>

ಡಿವೈಎಸ್ಪಿ TP ಕೃಷ್ಣಮೂರ್ತಿ

   

ಶಿವಮೊಗ್ಗ: ಭದ್ರಾವತಿಯ ತಾಲ್ಲೂಕು ಕಚೇರಿಯ ಖಜಾನೆಯಲ್ಲಿಯೇ ಸೇವೆ ಮುಂದುವರೆಸಲು ಅವಕಾಶ ನೀಡುವಂತೆ ಕೋರಿದ್ದ ಸಹೋದ್ಯೋಗಿಯಿಂದ ₹ 5,000 ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್‌) ಡಿವೈಎಸ್‌ಪಿ ಟಿ.ಪಿ. ಕೃಷ್ಣಮೂರ್ತಿ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಡಿಎಆರ್ ಕಾನ್‌ಸ್ಟೆಬಲ್ ಟಿ.ಎಸ್‌.ಪ್ರಸನ್ನಕುಮಾರ್ ಕಳೆದ ಒಂದೂವರೆ ವರ್ಷದಿಂದ ಭದ್ರಾವತಿಯ ತಾಲ್ಲೂಕು ಕಚೇರಿ ಖಜಾನೆಯಲ್ಲಿ ಭದ್ರತೆಯ ಸೇವೆಯಲ್ಲಿದ್ದು, ಯುಪಿಎಸ್‌ಸಿ ಪರೀಕ್ಷೆಗೆ ಪೂರ್ವಸಿದ್ಧತೆ ನಡೆಸಿದ್ದ ಅವರು, ಖಜಾನೆ ಸೇವೆಯಲ್ಲೇ ಮುಂದುವರಿಸಿದರೆ ಓದಿಕೊಳ್ಳಲು ಅನುಕೂಲವಾಗುತ್ತದೆ ಎಂದು ಮೇಲಧಿಕಾರಿ ಕೃಷ್ಣಮೂರ್ತಿ ಅವರಿಗೆ ಅಲ್ಲಿಯೇ ಮುಂದುವರೆಸುವಂತೆ ಮನವಿ ಮಾಡಿದ್ದರು. ಅದಕ್ಕೆ ₹ 5,000 ಲಂಚಕ್ಕೆ ಬೇಡಿಕೆ ಇರಿಸಲಾಗಿತ್ತು.

ADVERTISEMENT

ಲಂಚ ನೀಡಲು ಇಷ್ಟವಿಲ್ಲದೇ ಪ್ರಸನ್ನ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಿಗದಿಯಂತೆ ಡಿವೈಎಸ್‌ಪಿ ಕೃಷ್ಣಮೂರ್ತಿ ಅವರು ಪೊಲೀಸ್ ವಸತಿ ಗೃಹದಲ್ಲಿ ಲಂಚ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ಎಸ್‌ಪಿ ಮಂಜುನಾಥ ಚೌಧರಿ ನೇತೃತ್ವದ ತಂಡ, ಆರೋಪಿಯನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಡಿಎಆರ್‌ನ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಎಂ.ಕೆ.ರವಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಡಿಎಆರ್ ಕಚೇರಿಯಲ್ಲಿ ಸಿಬ್ಬಂದಿಯನ್ನು ಅವರಿಗೆ ಅಗತ್ಯವಿರುವ ಕಡೆ ಸೇವೆಗೆ ನಿಯೋಜಿಸಲು ಲಂಚ ಪಡೆಯಲಾಗುತ್ತದೆ ಎಂಬ ದೂರುಗಳು ಈ ಮೊದಲು ಕೇಳಿಬಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.