ADVERTISEMENT

ಜಿಎಸ್‌ಎಸ್ ಕಾವ್ಯ ಸಾಂಸ್ಕೃತಿಕ ಮೌಲ್ಯಗಳ ಬಲಪಡಿಸಿವೆ: ಬಿಎಸ್‌ವೈ

ಕರ್ನಾಟಕ ಸಂಘ: ಪ್ರೊ.ಓ.ಎಲ್.ನಾಗಭೂಷಣಸ್ವಾಮಿಗೆ ಜಿಎಸ್‌ಎಸ್ ಪುರಸ್ಕಾರ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:38 IST
Last Updated 22 ಫೆಬ್ರುವರಿ 2026, 1:38 IST
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಎಸ್‌ಎಸ್ ಕುರಿತ ‘ನುಡಿ ಬೆಳಕು’ ಹಾಗೂ ‘ಭಾವ ಸಮನ್ವಯ’ ಕೃತಿಗಳನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆಗೊಳಿಸಿದರು
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಎಸ್‌ಎಸ್ ಕುರಿತ ‘ನುಡಿ ಬೆಳಕು’ ಹಾಗೂ ‘ಭಾವ ಸಮನ್ವಯ’ ಕೃತಿಗಳನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆಗೊಳಿಸಿದರು   

ಶಿವಮೊಗ್ಗ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಕವಿತೆಗಳು ನಾಡಿನ ಸಾಂಸ್ಕೃತಿಕ ಮೌಲ್ಯಗಳನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. 

ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ಜಿಎಸ್‌ಎಸ್ ಪ್ರತಿಷ್ಠಾನದಿಂದ ಆಯೋಜಿಸಿದ್ದ ಜಿಎಸ್‌ಎಸ್ ಪುರಸ್ಕಾರ ಹಾಗೂ ‘ಕಾವ್ಯ ಸೌರಭ’ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಜಿಎಸ್‌ಎಸ್ ಅವರು ಯಾವುದೇ ಸ್ಥಾನಮಾನ, ಪ್ರಶಸ್ತಿಗಳನ್ನು ಬೆನ್ನುಹತ್ತದೇ ಸರಳತೆ ಮತ್ತು ಸಜ್ಜನಿಕೆಯಿಂದ ಸಾಹಿತ್ಯ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿತ್ವವಾಗಿದ್ದರು ಎಂದು ಬಣ್ಣಿಸಿದರು. 

ADVERTISEMENT

ಜಿಎಸ್‌ಎಸ್ ಅವರ ಬದುಕು ಸಾಧನೆ ಮತ್ತು ಪ್ರಾಮಾಣಿಕತೆಯ ಪ್ರತಿರೂಪವಾಗಿತ್ತು. ಸಾಹಿತ್ಯದ ಮೂಲಕ ಸಮಾಜದ ಮನಸ್ಸುಗಳನ್ನು ರೂಪಿಸಿದ ಅವರು, ನಾಡಿನ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಇಂದಿನ ಯುವಪೀಳಿಗೆ ಅವರ ಕೃತಿಗಳನ್ನು ಅಧ್ಯಯನ ಮಾಡಿ, ಅದರಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

ಜ್ಞಾನಪೀಠ ಪುರಸ್ಕೃತ ಕುವೆಂಪು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಪಸರಿಸುವಲ್ಲಿ ಜಿಎಸ್‌ಎಸ್ ಪಾತ್ರ ಮಹತ್ವದ್ದಾಗಿದೆ. ಶಿವಮೊಗ್ಗದ ಹೆಮ್ಮೆಯ ಪುತ್ರರಾಗಿದ್ದ ಅವರು ಸಮನ್ವಯ ಕವಿ ಹಾಗೂ ನವೋದಯ ಸಾಹಿತ್ಯ ಪರಂಪರೆಯ ಪ್ರಮುಖ ಧ್ವನಿಯಾಗಿದ್ದರು ಎಂದು ಸ್ಮರಿಸಿದರು. 

ಜಿಎಸ್‌ಎಸ್ ಕುರಿತ ‘ನುಡಿ ಬೆಳಕು’ ಹಾಗೂ ‘ಭಾವ ಸಮನ್ವಯ’ ಕೃತಿಗಳನ್ನು ಬಿಡುಗಡೆಗೊಳಿಸಿ ಪ್ರತಿಷ್ಠಾನದ ಗೌರವಾಧ್ಯಕ್ಷರೂ ಆದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶಿಕಾರಿಪುರದಲ್ಲಿ ಸಾವಿರ ಆಸನಗಳ ವ್ಯವಸ್ಥೆಯೊಂದಿಗೆ ಭೋಜನ ಸಭಾಂಗಣ ಹೊಂದಿದ ಸಾಂಸ್ಕೃತಿಕ ಭವನ ನಿರ್ಮಾಣವಾಗಿದ್ದು, ಅದಕ್ಕೆ ಶೀಘ್ರದಲ್ಲೇ ಜಿಎಸ್‌ಎಸ್ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಹೇಳಿದರು. 

ಜಿಲ್ಲಾ ಕೇಂದ್ರದಲ್ಲಿ ಜಿಎಸ್‌ಎಸ್ ಹೆಸರಿನ ಭವನ ಇಲ್ಲದಿರುವುದರಿಂದ ಸೂಡಾ ಮೂಲಕ ಸಿಎ ನಿವೇಶನ ಮಂಜೂರು ಮಾಡಿಸಿ ಸುಸಜ್ಜಿತ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
 
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಈಶ್ವರಪ್ಪ, ಜಿಎಸ್‌ಎಸ್ ಪುರಸ್ಕಾರ ಸ್ವೀಕರಿಸಿದ ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ, ಪ್ರೊ.ಸಬಿತಾ ಬನ್ನಾಡಿ, ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ.ಕಿರಣ್ ದೇಸಾಯಿ ಮಾತನಾಡಿದರು. 

ಶಿವಮೊಗ್ಗದ ಕರ್ನಾಟಕದ ಸಂಘದಲ್ಲಿ ಶನಿವಾರ ಸಂಜೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಮೈಸೂರಿನ ಓ.ಎಲ್.ನಾಗಭೂಷಣಸ್ವಾಮಿ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಎಸ್‌ಎಸ್‌ ಪುರಸ್ಕಾರ ಪ್ರದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.