ಶಿಕಾರಿಪುರ: ‘ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಜನರ ತೆರಿಗೆ ಹಣದಿಂದ ಮಾಡಿದ್ದೇನೆ ಜಿಲ್ಲಾ ಉಸ್ತುವಾರಿ ಸಚಿವರೆ ಜಿಲ್ಲೆಗೆ ನೀವೆನು ಮಾಡಿದ್ದೀರಿ’ ಎಂದು ಲೆಕ್ಕಕೊಡಿ ಎಂದು ಸಂಸದ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ರೈತ ಮೋರ್ಚಾ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಅವರಪ್ಪನೇ ಇನ್ನೂ ಅಧಿಕಾರದಲ್ಲಿ ಇದ್ದಾರೆ ಎನ್ನುವಂತೆ ಮಾತನಾಡುತ್ತಾರೆ, ಜಿಲ್ಲೆಯ ಅಭಿವೃದ್ಧಿ ಅವರಪ್ಪನ ಹಣದಿಂದ ಮಾಡಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನನ್ನ ವಿರುದ್ಧ ಹಗುರವಾಗಿ ಮಾತನಾಡುತ್ತಾರೆ. ‘ನಾನೂ ನಮ್ಮಪ್ಪನ ಹಣದಿಂದ ಅಭಿವೃದ್ಧಿ ಮಾಡಿಲ್ಲ, ಅವರೂ ಅವರಪ್ಪನ ಹಣದಿಂದ ಯೋಜನೆ ನೀಡಿಲ್ಲ, ಜನರ ತೆರಿಗೆ ಹಣದಿಂದ ನಾನೆಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಪಟ್ಟಿ ಕೊಡುತ್ತೇನೆ ನಿಮ್ಮ ಕಾಲದಲ್ಲಿ ನೀವೆಷ್ಟು ಅಭಿವೃದ್ಧಿ ಮಾಡಿದ್ದೀರಿ ಲೆಕ್ಕಕೊಡಿ’ ಎಂದು ಸವಾಲು ಹಾಕಿದರು.
‘ಶಿವಮೊಗ್ಗ ವಿಮಾನ ನಿಲ್ದಾಣ ಮಾಡಿದ್ದೇವೆ, ಅಲ್ಲಿ ರಾತ್ರಿ ವಿಮಾನ ಲ್ಯಾಂಡಿಂಗ್‌ಗೆ ಅಗತ್ಯವಿರುವ ಯಂತ್ರ ನೀಡಿದ್ದೇವೆ ಅದನ್ನು ಅಳವಡಿಸುವ ಕಾರ್ಯ ಆರು ತಿಂಗಳಾದರೂ ಆಗಿಲ್ಲ. ರೈತರಿಗೆ ಟಿಸಿ ಉಚಿತವಾಗಿ ನೀಡುತ್ತಿದ್ದೇವು, ಇದೀಗ ₹ 3 ಲಕ್ಷ ನೀಡುವ ಅನಿವಾರ್ಯ ಸ್ಥಿತಿ ಎದುರಾಗಿದೆ. ಸಾವಿರಾರು ಕೋಟಿ ವೆಚ್ಚದಲ್ಲಿ ಏತ ನೀರಾವರಿ ಮಾಡಿದ್ದು ಅದಕ್ಕೆ ವಿದ್ಯುತ್ ಶುಲ್ಕ ಕಟ್ಟುವುದಕ್ಕೂ ರಾಜ್ಯ ಸರ್ಕಾರಕ್ಕೆ ಆಗಿಲ್ಲ. ಮಳೆಯಿಂದ ಜಿಲ್ಲೆಯ ರೈತರ ಮೆಕ್ಕೆಜೋಳ ನಾಶವಾಗಿದ್ದು ಅವರಿಗೆ ಸಾಂತ್ವನ ಹೇಳುವ ಕೆಲಸ ಆಗಿಲ್ಲ ರಾಜ್ಯದ ಆಡಳಿತ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.
‘ಬಗರ್ ಹುಕುಂ ಸಾಗುವಳಿ ರೈತರ ಒಕ್ಕಲೆಬ್ಬಿಸಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕು, ಒಕ್ಕಲೆಬ್ಬಿಸುವುದಕ್ಕೆ ನಾವು ಎಂದಿಗೂ ಬಿಡುವುದಿಲ್ಲ. ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಟೋಲ್ ಹಾಕುವುದಕ್ಕೆ ಬಿಟ್ಟಿರಲಿಲ್ಲ. ತಾಲ್ಲೂಕಿನ ಕುಟ್ರಳ್ಳಿ ಸಮೀಪದ ಟೋಲ್ ರೈತರೇ ಕೀಳುವುದಕ್ಕೂ ಮುನ್ನ ಸರ್ಕಾರ ತೆಗೆಯಬೇಕು. ಕೊಳೆರೋಗಕ್ಕೆ ತಾಲ್ಲೂಕಿಗೆ ₹ 1.5 ಲಕ್ಷ ನೀಡಿದ್ದು ಅದು ಯಾವುದಕ್ಕೂ ಸಾಕಾಗುವುದಿಲ್ಲ. ದೇಶಕ್ಕೆ ಕಳ್ಳದಾರಿ ಮೂಲಕ ಮ್ಯಾನ್ಮಾರ್‌ನಿಂದ ಬರುತ್ತಿದ್ದ ಅಡಿಕೆಯನ್ನು ಕೇಂದ್ರ ಸರ್ಕಾರ ಬಂದ್ ಮಾಡುತ್ತಿದೆ. ಅಡಿಕೆ ದೋಟಿಗೆ ₹ 1500 ಸಹಾಯ ಧನ ಇತ್ತು ಕೇಂದ್ರ ಸರ್ಕಾರ ಅದನ್ನು ₹ 30-40 ಸಾವಿರಕ್ಕೆ ಏರಿಸಲಿದೆ’ ಎಂದರು.
ಪ್ರತಿಭಟನೆ ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಮುಖಂಡರುಗಳಾದ ರೇವಣಪ್ಪ, ಕೆ.ಎಸ್.ಗುರುಮೂರ್ತಿ, ಸಿದ್ಧಲಿಂಗಪ್ಪ, ಹನುಮಂತಪ್ಪ, ಪಾಲಾಕ್ಷಪ್ಪ ಭದ್ರಾಪುರ, ಗುರುರಾಜ್, ಅಂಬಾರಗೊಪ್ಪ ಶೇಖರಪ್ಪ, ಗಿರೀಶ್ ಧಾರವಾಡ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.