ADVERTISEMENT

ಕೇಂದ್ರ ಸರ್ಕಾರದ ಬಜೆಟ್ ಅಭಿವೃದ್ಧಿಗೆ ಪೂರಕ: ಬಿ.ವೈ. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 3:36 IST
Last Updated 14 ಫೆಬ್ರುವರಿ 2021, 3:36 IST
ಸಂಸದ ಬಿ.ವೈ. ರಾಘವೇಂದ್ರ
ಸಂಸದ ಬಿ.ವೈ. ರಾಘವೇಂದ್ರ   

ಶಿವಮೊಗ್ಗ: ‘ಕೃಷಿ ಉತ್ಪಾದನೆ ಪ್ರಮಾಣ, ಮೂಲ ಸೌಕರ್ಯ, ಆರೋಗ್ಯ ಕ್ಷೇತ್ರದಲ್ಲಿ ಸೌಲಭ್ಯ ಹೆಚ್ಚಳ ಮಾಡಿರುವ ಕೇಂದ್ರ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದೆ. ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಿದೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಸಮರ್ಥಿಸಿಕೊಂಡರು.

‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಚಿಂತನೆಯಿಂದ ಮಂಡಿಸಿರುವ ಬಜೆಟ್ 2025ರ ವೇಳೆಗೆ ಭಾರತವನ್ನು ಉನ್ನತ ಆರ್ಥಿಕ ವ್ಯವಸ್ಥೆಯತ್ತ ತೆಗೆದುಕೊಂಡು ಹೋಗಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೃಷಿ ಉತ್ಪಾದನೆ ಪ್ರಮಾಣ ಮತ್ತು ಮೂಲ ಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ಅಭಿವೃದ್ಧಿಗೆ ಈ ಬಜೆಟ್ ಪೂರಕ ಎನಿಸಲಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂ.ಎಫ್) ಭಾರತವು ಅತಿ ವೇಗದಿಂದ ಅಭಿವೃದ್ಧಿ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಇದೇ ಕಾರಣಕ್ಕೆ ಮೂಲ ಸೌಕರ್ಯಕ್ಕೆ ಗರಿಷ್ಠ ಒತ್ತು ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕೃಷಿ ಮೂಲ ಸೌಕರ್ಯಕ್ಕೆ ₹ 1 ಲಕ್ಷ ಕೋಟಿ ಖರ್ಚು ಮಾಡಲಾಗುವುದು. ವಿವಿಧ ಕ್ಷೇತ್ರಗಳ ಮೂಲ ಸೌಕರ್ಯ ವೃದ್ಧಿಗೆ ಒಟ್ಟಾಗಿ ಮುಂದಿನ 5 ವರ್ಷಗಳಲ್ಲಿ ₹ 100 ಲಕ್ಷ ಕೋಟಿ ಖರ್ಚು ಮಾಡಲಾಗುವುದು. ವಿತ್ತೀಯ ಕೊರತೆ ಕಳೆದ ಬಾರಿ ಶೇ 4.6 ರಷ್ಟಿದ್ದು, ಈ ಬಾರಿ ಶೇ 6.8 ರಷ್ಟಿದೆ. ಆದರೂ ಮೂಲ ಸೌಕರ್ಯಕ್ಕೆ ಹೆಚ್ಚು ಬಂಡವಾಳ ಹೂಡುವ ಕಾರಣ ಸರಕು ಸೇವಾ ಕ್ಷೇತ್ರ, ಆರೋಗ್ಯ ಸೇರಿ ವಿವಿಧ ರಂಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಎನಿಸಲಿದೆ’ ಎಂದರು.

‘ಈ ಬಜೆಟ್‍ನಲ್ಲಿ ರೈತರ ಕಲ್ಯಾಣಕ್ಕೆ, ಸಮಗ್ರ ಆರೋಗ್ಯ-ಯೋಗಕ್ಷೇಮಕ್ಕೆ, ಶುದ್ಧ ನೀರಿಗೆ, ರಾಷ್ಟ್ರೀಯ ಹೆದ್ದಾರಿಗೆ, ನೈಸರ್ಗಿಕ ಅನಿಲ ಪೂರೈಕೆ, ಇಂಧನ ಕ್ಷೇತ್ರ, ದೇಸಿ ಉತ್ಪಾದನೆಗೆ, ಸರ್ವರಿಗೂ ತಲೆಯ ಮೇಲೊಂದು ಸೂರು, ಆದಾಯ ತೆರಿಗೆ ಸುಧಾರಣೆಗೆ ಹಾಗೂ ಸಂಪನ್ಮೂಲ ಸಂಗ್ರಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲು ಬಜೆಟ್‍ನಲ್ಲಿ ಯತ್ನಿಸಲಾಗಿದೆ. 13 ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಬೆಂಗಳೂರಿನಲ್ಲಿ 2ನೇ ಹಂತದ ಮೆಟ್ರೊ ನಿರ್ಮಾಣ ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದರು.

ಏಪ್ರಿಲ್‌ನಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ: ‘ಶಿವಮೊಗ್ಗದಲ್ಲಿ ಏ.15ರಂದು ರೈಲುನಿಲ್ದಾಣದ ಮುಂಭಾಗದಲ್ಲಿ ಭದ್ರಾವತಿಯ ಕಡದಕಟ್ಟೆಯಲ್ಲಿ ₹ 25.92 ಕೋಟಿ ವೆಚ್ಚದ, ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ₹ 60.70 ಕೋಟಿ ವೆಚ್ಚದ ಹಾಗೂ ಕಾಶಿಪುರದಲ್ಲಿ ₹ 29.63 ಕೋಟಿ ವೆಚ್ಚದ ರೈಲ್ವೆ ಮೇಲ್ಸೇತುವೆಗಳಿಗೆ ಕೇಂದ್ರ ರೈಲ್ವೆ ಸಚಿವ ಪಿಯುಶ್ ಗೋಯಲ್ ಆನ್‌ಲೈನ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಶಾಸಕ ಕೆ.ಬಿ. ಅಶೋಕ್ ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಮುಖಂಡರಾದ ಎಂ.ಬಿ ಭಾನುಪ್ರಕಾಶ್,ಡಿ.ಎಸ್.ಅರುಣ್, ಎಸ್. ದತ್ತಾತ್ರಿ, ಪವಿತ್ರ ರಾಮಯ್ಯ, ಎಸ್.ಎಸ್. ಜ್ಯೋತಿಪ್ರಕಾಶ್, ಜಗದೀಶ್, ಜ್ಞಾನೇಶ್ವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.