
ಶಿಕಾರಿಪುರ: ‘ರಾಜ್ಯದಲ್ಲಿ ಶತಮಾನ ಕಂಡ ಎಲ್ಲ ಶಾಲೆಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು, ವಿದ್ಯಾರ್ಥಿ ಸಂಖ್ಯೆ ಹೆಚ್ಚಿಸುವುದಕ್ಕೆ ಕ್ರಮ ಕೈಗೊಳ್ಳುವ ಮೂಲಕ ಶತಮಾನೋತ್ಸವ ಆಚರಣೆ ಮಾಡಬೇಕು’ ಎಂದು ಶಾಸಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಪಟ್ಟಣದಲ್ಲಿ ಭಾನುವಾರ ಹಳಿಯೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಶಾಲೆ ಶತಮಾನೋತ್ಸವ ಆಚರಣೆ ನೆಪದಲ್ಲಿ ಹಳೆ ವಿದ್ಯಾರ್ಥಿಗಳು, ದಾನಿಗಳು ಸೇರಿ ಪರಿಕರ, ಅಡುಗೆ ಮನೆ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿರುವುದು ಶ್ಲಾಘನೀಯ. ಈ ಶಾಲೆ ಆವರಣದಲ್ಲಿ ನಾನು ಗೋಲಿ ಆಡಿದ ನೆನಪು ಹಸಿರಾಗಿದೆ, ನನ್ನ ಅಕ್ಕಂದಿರು ಓದಿರುವ ಈ ಶಾಲೆಗೆ ಹೆಚ್ಚಿನ ಮಕ್ಕಳು ದಾಖಲಾಗುವುದಕ್ಕೆ ಶ್ರಮಿಸೋಣ ಇಲ್ಲಿ ಉತ್ತಮ ಶಿಕ್ಷಣ ಸಿಗುವುದಕ್ಕೆ ಎಲ್ಲರೂ ಸಹಕರಿಸೋಣ’ ಎಂದರು.
‘ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ಆರಂಭಿಸಬೇಕು ಎನ್ನುವುದು ಶಾಲಾಭಿವೃದ್ಧಿ ಸಮಿತಿ ಆಶಯ ಅದಕ್ಕೆ ಅನುಮತಿ ನೀಡುವುದಕ್ಕೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶಕ್ಕೆ ಜಿಲ್ಲೆಯಲ್ಲಿ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲೂ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಬಿ.ಎಸ್.ಯಡಿಯೂರಪ್ಪ ಕೊಡುಗೆ ಅಪಾರ. ಎಲ್ಲ ಸರ್ಕಾರಿ ಶಾಲೆ ಶತಮಾನೋತ್ಸವ ಆಚರಿಸುವಂತಾಗಲಿ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷೆ ಬಿ.ವೈ.ಅರುಣಾದೇವಿ ಅಧ್ಯಕ್ಷತೆ ವಹಿಸಿದ್ದರು.
ಸಲಹಾ ಸಮಿತಿ ಅಧ್ಯಕ್ಷ ವಸಂತಗೌಡ, ಪುರಸಭೆ ಸದಸ್ಯ ಉಳ್ಳಿ ದರ್ಶನ್, ಬಿಇಒ ಲೋಕೇಶಪ್ಪ, ಮುಖ್ಯಶಿಕ್ಷಕಿ ಗೀತಾ, ಮುಖಂಡರಾದ ಕೆ.ಎಸ್.ಗುರುಮೂರ್ತಿ, ಮಂಜಣ್ಣ ರಾಜಲಕ್ಷ್ಮಿ, ಕಾಶೀಬಾಯಿ, ರೇಖಾಬಾಯಿ, ಎಂ.ಬಿ.ಚನ್ನವೀರಪ್ಪ, ಯಾದವಮೂರ್ತಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಹಳೆ ವಿದ್ಯಾರ್ಥಿನಿಯರು, ಶಿಕ್ಷಕರು, ಶತಮಾನೋತ್ಸವ ಆಚರಣೆ ಸಮಿತಿ ಪದಾಧಿಕಾರಿಗಳು, ಸಲಹಾ ಸಮಿತಿ ಪದಾಧಿಕಾರಿಗಳು, ನಾಗರಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.