ADVERTISEMENT

ಶಿವಮೊಗ್ಗ| ಸಕಾರಾತ್ಮಕ ಚಿಂತನೆಯೇ ಕ್ಯಾನ್ಸರ್ ಗೆಲುವಿನ ಗುಟ್ಟು: ಡಾ. ಅಪರ್ಣಾ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:50 IST
Last Updated 18 ಅಕ್ಟೋಬರ್ 2025, 6:50 IST
ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯ ನೋಟ
ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯ ನೋಟ   

ಶಿವಮೊಗ್ಗ: ‘ನಮ್ಮ ಸುತ್ತಲೂ ಸ್ಫೂರ್ತಿ ನೀಡುವಂತಹ ಜನರು ಇರುತ್ತಾರೆ. ಅವರನ್ನು ನೋಡಿ ನಾವು ಕಲಿಯಬೇಕು. ಆಗ ಮಾತ್ರ ತುಂಬಾ ಕಠಿಣ ಪರಿಸ್ಥಿತಿಗಳಿಂದ ಹೊರ ಬರಬಹುದು’ ಎಂದು ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನ್ಸಲ್ಟಂಟ್ ಮೆಡಿಕಲ್ ಅಂಕಾಲಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಹೇಳಿದರು.

ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಬ್ರೆಸ್ಟ್ ಕ್ಯಾನ್ಸರ್ ಸರ್ವೈವರ್ಸ್ ಮೀಟ್’ನಲ್ಲಿ ಮಾತನಾಡಿದದರು. ‘ಮನುಷ್ಯ ಸಕಾರಾತ್ಮಕವಾಗಿ ಆಲೋಚಿಸಬೇಕು. ಇಲ್ಲಿ ಕ್ಯಾನ್ಸರ್ ಗೆದ್ದವರು ಸೇರಿದ್ದಾರೆ. ಅವರೆಲ್ಲಾ ನಮಗೆ ಸ್ಫೂರ್ತಿ ನೀಡುವಂತಹವರಾಗಿದ್ದಾರೆ’ ಎಂದರು.

‘ಈ ಕಾರ್ಯಕ್ರಮವು ಕ್ಯಾನ್ಸರ್‌ನಿಂದ ಗುಣಮುಖರಾದವರ ಧೈರ್ಯ, ಆಶಾಭಾವನೆ ಮತ್ತು ಪುನರುತ್ಥಾನದ ಪಯಣವನ್ನು ಸಂಭ್ರಮಿಸುವ ಉದ್ದೇಶದಿಂದ ನಡೆಯಿತು. ಕ್ಯಾನ್ಸರ್‌ನಿಂದ ಗುಣಮುಖರಾದವರು ತಮ್ಮ ಅನುಭವಗಳನ್ನು ಹಂಚಿಕೊಂಡು, ಕ್ಯಾನ್ಸರ್‌ ವಿರುದ್ಧ ಹೋರಾಡುವವರಿಗೆ ಪ್ರೇರಣೆಯಾದರು’ ಎಂದು ತಿಳಿಸಿದರು. 

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಜೆಎನ್‌ಎನ್‌ಸಿಇ ಸಹ ಪ್ರಾಧ್ಯಾಪಕಿ ಕೆ.ಶೈಲಶ್ರೀ, ‘ಜೀವನದಲ್ಲಿ ನಗು ಇರಬೇಕು. ಸಣ್ಣ ಪುಟ್ಟ ನಗು ಕ್ಯಾನ್ಸರ್ ಗೆದ್ದಿದ್ದೇನೆ ಎಂಬ ಖುಷಿಯನ್ನು ದುಪ್ಪಟ್ಟು ಮಾಡುತ್ತದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್ ಅವರು ಹೆಣ್ಣು ಮಕ್ಕಳಿಗೆ ಇರುವ ಹಕ್ಕುಗಳು ಹಾಗೂ ಸರ್ಕಾರದಿಂದ ಇರುವ ಯೋಜನೆಗಳು, ಅವುಗಳ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಇದೇ ವೇಳೆ ‘ಆರ್ಯಾ ಫೌಂಡೇಷನ್ ಫಾರ್ ಕ್ಯಾನ್ಸರ್ ರೆಸಿಲಿಯನ್ಸ್’ ಪ್ರಾರಂಭಿಸಲಾಯಿತು. ಇದರ ಜೊತೆಗೆ ಯೋಗ ತರಬೇತಿ ಅಧಿವೇಶನ ಆಯೋಜಿಸಿ, ದೈಹಿಕ ಹಾಗೂ ಮಾನಸಿಕ ಸಮತೋಲನದ ಮಹತ್ವ ಎತ್ತಿಹಿಡಿಯಲಾಯಿತು. ವಿಗ್ಸ್ ಡಿಸೈನ್ಸ್ ವತಿಯಿಂದ ನಡೆದ ವಿಶೇಷ ಅಧಿವೇಶನದಲ್ಲಿ, ವಿಗ್ಸ್ (ಕೃತಕ ಕೂದಲು) ಮತ್ತು ಬ್ರೆಸ್ಟ್ ಪ್ರೋಸ್ಥೆಸಿಸ್‌ಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಉಪಯುಕ್ತ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗಿಸ್ ಪಿ ಜಾನ್,  ರೇಡಿಯೇಷನ್‌ ಆಂಕಾಲಾಜಿಸ್ಟ್‌ ಡಾ. ರವಿ ನಡಹಳ್ಳಿ, ಡಾ. ಸುದರ್ಶನ್‌ ಗುಪ್ತಾ, ಸರ್ಜಿಕಲ್‌ ಆಂಕಾಲಾಜಿಸ್ಟ್‌ ಡಾ.ಎಂ.ಎ.ವಿವೇಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.