ADVERTISEMENT

ವರ್ಷದಲ್ಲಿ ಮೂರು ಲಕ್ಷ ಜನ ಬಲಿ

ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಡಾ.ರೋಷನ್ ಬಿ.ಎ. ರಾವ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 2:22 IST
Last Updated 26 ನವೆಂಬರ್ 2021, 2:22 IST
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರ ಮತ್ತು ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಕುಲಸಚಿವೆ ಜಿ. ಅನುರಾಧ ಮಾತನಾಡಿದರು.
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರ ಮತ್ತು ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಕುಲಸಚಿವೆ ಜಿ. ಅನುರಾಧ ಮಾತನಾಡಿದರು.   

ಶಿವಮೊಗ್ಗ: ಭಾರತದಲ್ಲಿ ಒಂದು ವರ್ಷಕ್ಕೆ 3 ಲಕ್ಷ ಜನರು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಮಲ್ನಾಡ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ.ರೋಷನ್ ಬಿ.ಎ. ರಾವ್ ಆಂತಕ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರ ಮತ್ತು ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಕ್ಯಾನ್ಸರ್ ಕಾಯಿಲೆ ಕುರಿತು ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಕ್ಯಾನ್ಸರ್‌ನಿಂದ ಗುಣಮುಖವಾಗುವರ ಸಂಖ್ಯೆ ಶೇ 80ರಷ್ಟಿದೆ. ಭಾರತದಲ್ಲಿ ಶೇ 60ರಷ್ಟಿದೆ. ಕಾಯಿಲೆಯ ಅರಿವಿನ ಕೊರತೆಯಿಂದ ಕ್ಯಾನ್ಸರ್ ಪೀಡಿತರು 3ನೇ ಮತ್ತು 4ನೇ ಹಂತದಲ್ಲಿ ಆಸ್ಪತ್ರೆಗೆ ಭೇಟಿ ನೀಡುತ್ತಿರುವುದು ರೋಗದ ತೀವ್ರತೆಗೆ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು.

ADVERTISEMENT

ತಂಬಾಕು ಸೇವನೆ, ಮದ್ಯಪಾನ, ಧೂಮಪಾನ, ಜೀವನದ ಒತ್ತಡ, ಡ್ರಗ್ಸ್ ಸೇವನೆ, ದೀರ್ಘಕಾಲದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಕ್ಯಾನ್ಸರ್ ಪೀಡಿತರಲ್ಲಿ ಬಹುತೇಕ ಮಂದಿ ತಂಬಾಕು ಸೇವನೆ, ಧೂಮಪಾನ ಮತ್ತು ಮದ್ಯವ್ಯಸನಿಗಳಾಗಿದ್ದಾರೆ ಎಂದು ತಿಳಿಸಿದರು.

ಒಂದು ಅಥವಾ ಎರಡು ವಾರಗಳಿಗೂ ಅಧಿಕ ಸಮಯದಿಂದ ಬಾಯಿಯಲ್ಲಿ ಗಾಯ ಗುಣವಾಗದಿರುವುದು, ಧ್ವನಿ ಬದಲಾವಣೆ, ಊಟ ಕಡಿಮೆ ಸೇರುವುದು, ಮೂತ್ರದಲ್ಲಿ ರಕ್ತ ಹೋಗುವಿಕೆ, ಮೂಳೆಗಳಲ್ಲಿ ನೋವು ಮತ್ತು ದೇಹದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವುದು ಕ್ಯಾನ್ಸರ್‌ ಮುನ್ಸೂಚನೆಗಳಾಗಿವೆ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪ್ರಾರಂಭಿಸಿದರೆ ಕ್ಯಾನ್ಸರ್‌ನಿಂದ ಗುಣಮುಖರಾಗಬಹುದು ಎಂದರು.

ಕುಲಸಚಿವರಾದ ಜಿ. ಅನುರಾಧ ಮಾತನಾಡಿ, ‘ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ದುಶ್ಚಟಗಳು ಮಾರಣಾಂತಿಕ ಕ್ಯಾನ್ಸರ್‌ಗೆ ಮುಖ್ಯ ಕಾರಣ. ಆದ್ದರಿಂದ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದು, ಸೂಕ್ತ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು. ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಆರೋಗ್ಯಾಧಿಕಾರಿ ಡಾ.ಶ್ರೀರಕ್ಷಾ, ಮಹಿಳಾ ವೈದ್ಯಾಧಿಕಾರಿ ಡಾ.ಉಷಾರಾಣಿ, ಆಪ್ತ ಸಮಾಲೋಚಕಿ ರಜಿನಿ, ಹಸೀನ, ವಿಶ್ವವಿದ್ಯಾಲಯದ ಆರೋಗ್ಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.