
ಹೊಸನಗರ: ಪಟ್ಟಣದಲ್ಲಿರುವ ಬಿಡಾಡಿ ದನ–ಕರುಗಳನ್ನು ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಅಕ್ರಮ ಗೋಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ಕಾರ ಅವುಗಳ ರಕ್ಷಣೆ ನಿಟ್ಟಿನಲ್ಲಿ ಗೋಶಾಲೆ ಸ್ಥಾಪಿಸಬೇಕು ಎಂದು ಸ್ಥಳೀಯರು ಕೋರಿದ್ದಾರೆ.
ಇಲ್ಲಿನ ಬಸ್ ನಿಲ್ದಾಣ, ರಸ್ತೆ, ಆಟದ ಮೈದಾನ ಮತ್ತಿತರ ಕಡೆ ತಿರುಗಾಡುತ್ತಿರುವ ಬಿಡಾಡಿ ದನ–ಕರುಗಳು ಕಳ್ಳರ ಪಾಲಾಗುತ್ತಿವೆ. ಅವು ಮಲಗಿರುವ ಜಾಗದ ಮಾಹಿತಿ ಕಲೆ ಹಾಕುವ ದನಗಳ್ಳರು ರಾತ್ರಿ ಆಗುತ್ತಿದ್ದಂತೆಯೇ ಕಳವು ಮಾಡುತ್ತಿದ್ದಾರೆ.
ಬೆಲೆಬಾಳುವ ವಾಹನಗಳಲ್ಲಿ ಪ್ರವಾಸಿಗರ ಸೋಗಿನಲ್ಲಿ ಬರುವ ಖದೀಮರು ರಸ್ತೆಯಲ್ಲಿ ಮಲಗಿದ್ದ ದನಗಳನ್ನು ಅನಾಮತ್ತಾಗಿ ಎತ್ತಾಕಿಕೊಂಡು ಹೋಗುವ ಘಟನೆಗಳು ನಡೆಯುತ್ತಲೇ ಇವೆ. ರಾತ್ರಿ ಮಲಗಿದ್ದ ಹಸುಗಳು ಮಂಗಮಾಯ ಆಗುತ್ತಿವೆ ಎಂಬುದು ಸ್ಥಳೀಯರ ಆರೋಪ.
‘ಇಲ್ಲಿನ ಜೆಸಿಎಂ ರಸ್ತೆಯಲ್ಲಿ 18ಕ್ಕೂ ಹೆಚ್ಚು ದನಗಳು ಇದ್ದವು. ಇಲ್ಲಿನ ಅಂಗಡಿ, ಮನೆಗಳವರು ನೀಡುವ ಆಹಾರ ಸೇವಿಸಿ ಓಡಾಡಿಕೊಂಡು ಇದ್ದವು. ದಿನವೂ ಬೀದಿ ಪಕ್ಕ ಮಲಗುತ್ತಿದ್ದವು. ಇದೀಗ ಅವುಗಳ ಪೈಕಿ ನಾಲ್ಕು ದನಗಳು ಮಾತ್ರ ಉಳಿದಿವೆ. ಇನ್ನುಳಿದ ದನಗಳು ಎಲ್ಲಿಹೋದವು ಎಂಬುದೇ ಗೊತ್ತಾಗದಾಗಿದೆ. ಕಳ್ಳರು ಹೊತ್ತೊಯ್ದಿರಬಹುದು’ ಎಂದು ಸ್ಥಳೀಯ ವರ್ತಕ ನಾಗರಾಜ್ ‘ಪ್ರಜಾವಾಣಿ’ ಎದುರು ಶಂಕೆ ವ್ಯಕ್ತಪಡಿಸಿದರು.
‘ಇಲ್ಲಿನ ನೆಹರೂ ಮೈದಾನದ ಬಳಿ ಸಂಜೆಯಾಗುತ್ತಿದ್ದಂತೆ ಹಿಂಡುಹಿಂಡಾಗಿ ಬರುತ್ತಿದ್ದ ಹಸುಗಳು ಕಾಣೆಯಾಗಿ ಇದೀಗ ಬೆರಳೆಣಿಕೆಯಷ್ಟಿವೆ. ನಾನು ಬೆಳಿಗ್ಗೆ ವಾಕಿಂಗ್ ಬರುವಾಗ ಹಸುಗಳೇ ಇಲ್ಲದಿರುವುದನ್ನು ಗಮನಿಸಿದ್ದೇನೆ’ ಎಂದು ಉಮೇಶ್ ಎಂಬವರು ಹೇಳಿದರು.
ಪಟ್ಟಣದ ಹೊರವಲಯದ ಮಾವಿನ ಕೊಪ್ಪ, ಮಾರಿಗುಡ್ಡ, ದ್ಯಾವರ್ಸಗಳ ಬಳಿ ನಡೆಯುತ್ತಿರುವ ದನ ಕಳ್ಳತನವು ಗುಟ್ಟಾಗಿ ಉಳಿದಿಲ್ಲ. ದನ– ಕರುಗಳ ಸಾಗಣೆ ಕೇವಲ ಪಟ್ಟಣ ಪ್ರದೇಶದಲ್ಲಿ ಮಾತ್ರವಲ್ಲದೇ ಹಳ್ಳಿಹಳ್ಳಿಯಲ್ಲೂ ತನ್ನ ಕಬಂಧಬಾಹುವನ್ನು ಚಾಚಿದೆ. ತಾಲ್ಲೂಕಿನ ಗಡಿಭಾಗ ಯಡೂರು ಸುಳುಗೋಡು, ನಿಟ್ಟೂರು, ನಗರ ಸೇರಿ ಎಲ್ಲಡೆಯೂ ದನಗಳ ಕಳ್ಳ ಸಾಗಣೆ ಎಗ್ಗಿಲ್ಲದೆ ಸಾಗಿದೆ.
‘ಸಂಜೆ ದನ– ಕರುಗಳು ಮನೆಗೆ ಬರದಿದ್ದರೆ ಅವು ಕಳ್ಳರ ಪಾಲಾಗಿವೆ ಎಂದೇ ಅರ್ಥ ಎಂಬ ಸ್ಥಿತಿ ಕೆಲವೆಡೆಗಳಲ್ಲಿದೆ. ಇನ್ನೂ ದನಗಳ ವ್ಯಾಪಾರದ ಸೋಗಿನಲ್ಲಿ ರಾಜಾರೋಷವಾಗಿಯೇ ದನಗಳ ಅಕ್ರಮ ಸಾಗಾಟ ನಡೆಯುತ್ತಿದೆ. ಕಾಲು ಸೋತ, ವಯಸ್ಸಾದ (ಮುದಿ), ಕಾಯಿಲೆಗೆ ತುತ್ತಾದ ದನಕರುಗಳನ್ನು ಮಾರುವ ಪದ್ದತಿ ಕಾಣುತ್ತಿದ್ದೆವು. ಆದರೆ, ಈಗ ಹಣಕ್ಕಾಗಿ ದನಗಳನ್ನು ಮಾರುವ, ಕಸಾಯಿಖಾನೆಗೆ ತಳ್ಳುವ ಕಾರ್ಯ ವ್ಯಾಪಕವಾಗಿದೆ’ ಎನ್ನುತ್ತಾರೆ ಕೃಷಿಕ ಮಂಜುನಾಥ್.
ವ್ಯಾಪಕ ಜಾಲ:
‘ದನಗಳನ್ನು ಕಸಾಯಿಖಾನೆಗೆ ಸಾಗಿಸುವ ಕಟುಕರ ಜಾಲ ಹಳ್ಳಿಯಲ್ಲಿವೆ. ಹಗಲಲ್ಲಿ ಬೇರೆಬೇರೆ ವ್ಯಾಪಾರದ ಸೋಗಿನಲ್ಲಿ ಹಳ್ಳಿ ಸುತ್ತುತ್ತಾರೆ. ಈ ಕೃತ್ಯದಲ್ಲಿ ಕೆಲ ಸ್ಥಳೀಯರು ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ದನ ಸಾಗಣೆದಾರರಿಗೆ ದನಗಳನ್ನು ಸಂಗ್ರಹಿಸಿ ಕೊಡುವ ಕೆಲಸ ಇವರದ್ದಾಗಿದೆ. ರೈತರಿಂದ ಸಾಕಲೆಂದು ದನಗಳನ್ನು ಖರೀದಿಸಲಾಗುತ್ತದೆ. ಸಾಕಷ್ಟು ದನಗಳು ಸಂಗ್ರಹವಾದ ನಂತರ ರಾತ್ರೋರಾತ್ರಿ ವಾಹನದಲ್ಲಿ ಸಾಗಿಸಲಾಗುತ್ತದೆ. ಇಲ್ಲಿಂದ ಶಿವಮೊಗ್ಗ, ಮಂಗಳೂರು ಕಡೆ ಅಕ್ರಮ ಸಾಗಣೆ ನಡೆಯುತ್ತಿದೆ’ ಎಂಬುದು ಸಾಮಾಜಿಕ ಕಾರ್ಯಕರ್ತ ಸುಧೀಂದ್ರ ಪಂಡಿತ್ ಅವರ ದೂರು.
ಬೆಂಬಲ ಬೇಕು:
‘ಪಟ್ಟಣದಲ್ಲಿ ಅಕ್ರಮ ಗೋ ಸಾಗಣೆ ಹಚ್ಚುತ್ತಿದೆ. ಯಾರ ಭಯವೂ ಇಲ್ಲದೆ ಹಸುಗಳನ್ನು ಕಳವು ಮಾಡಲಾಗುತ್ತಿದೆ. ಅಕ್ರಮ ಸಾಗಣೆ ತಪ್ಪಿಸಲು ಗೋ ಪ್ರೇಮಿಗಳೆಲ್ಲ ಒಟ್ಟಾಗಿ ಮನಸಿ ಸಲ್ಲಿಸಬೇಕಾಗಿದೆ. ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ಮಾಡಿದರೆ ಕಳ್ಳರು ಸಿಕ್ಕೇ ಸಿಗುತ್ತಾರೆ’ ಎಂದು ಅವರು ಹೇಳುತ್ತಾರೆ.
ಈ ಹಿಂದೆ ಸರ್ಕಾರ ಸರ್ಕಾರಿ ಗೋಶಾಲೆ ತೆರೆದಿತ್ತು. ಬಿಡಾಡಿ ದನ– ಕರುಗಳ ಸಂರಕ್ಷಣೆಗೆ ಅದು ಅನುಕೂಲ ಕಲ್ಪಿಸಿತ್ತು. ಇದೀಗ ಸರ್ಕಾರಿ ಗೋಶಾಲೆ ನಿರ್ವಹಣೆ ಇಲ್ಲದೆ ಹಳ್ಳ ಹಿಡಿದಿದೆ. ಸರ್ಕಾರ ಗೋಶಾಲೆ ತೆರೆದು ಗೋ ರಕ್ಷಣೆಯತ್ತ ಹೆಜ್ಜೆಯಿಡಬೇಕುಸುಬ್ರಹ್ಮಣ್ಯ ಮತ್ತಿಮನೆ ಸ್ಥಳೀಯ ನಿವಾಸಿ
ಪಟ್ಟಣದಲ್ಲಿ ನಡೆಯುತ್ತಿದೆ ಎನ್ನಲಾದ ದನ ಕರುಗಳ ಕಳವು ಹಾಗೂ ಅಕ್ರಮ ಗೋಸಾಗಣೆ ಕುರಿತು ಸಾರ್ವಜನಿಕರಿಂದ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದುಶಂಕರಗೌಡ ಪಾಟೀಲ್ ಪಿಎಸ್ಐ ಹೊಸನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.