ADVERTISEMENT

ದನ ಕಳ್ಳ ಸಾಗಣೆ: ವಾಹನ ತಡೆಯಲು ವಿಫಲ ಯತ್ನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 6:52 IST
Last Updated 19 ನವೆಂಬರ್ 2021, 6:52 IST

ಹೊಸನಗರ: ತಾಲ್ಲೂಕಿನ ಮೇಲಿನ ಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯನಗರ ಗ್ರಾಮದಲ್ಲಿ ಬುಧವಾರ ತಡರಾತ್ರಿ ವಾಹನದಲ್ಲಿ ದನಗಳನ್ನು ಕದ್ದು ತುಂಬಿ ಸಾಗಣೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಹೋಗಿ ವಾಹನವನ್ನು ಅಡ್ಡಗಟ್ಟಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ದನಕಳ್ಳರು ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿದರು. ತಕ್ಷಣ ತಹಶೀಲ್ದಾರ್ ವಿ.ಎಸ್. ರಾಜೀವ್ ಅವರಿಗೆ ಫೋನ್ ಮೂಲಕ ಗಮನಕ್ಕೆ ತರಲಾಯಿತು ಎಂದು ತಿಳಿಸಿದ್ದಾರೆ.

ತಹಶೀಲ್ದಾರ್ ಜೀಪ್ ಚೇಸಿಂಗ್: ಹೊಸನಗರ ತಹಶೀಲ್ದಾರ್ ವಿ.ಎಸ್. ರಾಜೀವ್, ಜೀಪ್ ಡೈವರ್ ಗಣೇಶ್ ಹಾಗೂ ಜಯನಗರದ ಗ್ರಾಮಸ್ಥರು ದನ ತುಂಬಿದ ಗಾಡಿ ಶಿವಮೊಗ್ಗದ ಕಡೆಗೆ ಹೋಗುತ್ತಿರುವುದನ್ನು ಗಮನಿಸಿ ಚೇಸಿಂಗ್ ಮಾಡಿದ್ದು, ದನಕಳ್ಳರು ಅಧಿಕಾರಿಗಳ ಜೀಪ್ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ರಿಪ್ಪನ್‌ಪೇಟೆ ಕಡೆಗೆ ದನ ತುಂಬಿದ ವಾಹನ ಬರುತ್ತಿದ್ದು, ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಅಲ್ಲಿನ ಪೊಲೀಸರಿಗೆ ತಹಶೀಲ್ದಾರ್ ಮಾಹಿತಿ ನೀಡಿದರು. ಆದರೆ, ವಾಹನ ತಡೆಯುವಲ್ಲಿ ರಿಪ್ಪನ್‌ಪೇಟೆ ಪೊಲೀಸರು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಹೊಸನಗರ ತಾಲ್ಲೂಕಿನ ಜಯನಗರದ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ದನಗಳ ಕಳ್ಳಸಾಗಣೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅಧಿಕಾರಿಗಳು ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.