ಸೊರಬ: ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳ ಅಳವಡಿಕೆಗೆ ಸಕಲ ಸಿದ್ಧತೆ ನಡೆದಿದೆ.
ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳ ಪೈಕಿ 16 ಗ್ರಾಮ ಪಂಚಾಯಿತಿಗಳಿಗೆ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಕೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ನೀಡಿದ್ದು, 9 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಸೂಕ್ತ ಕ್ರಮಕ್ಕೆ ಇದು ಸಹಕಾರಿಯಾಗಲಿದೆ.
ತಾಲ್ಲೂಕಿನ ಚಂದ್ರಗುತ್ತಿ, ಮೂಡಿದೊಡ್ಡಿಕೊಪ್ಪ, ಕುಪ್ಪಗಡ್ಡೆ, ಗೆಂಡ್ಲ, ಜಡೆ, ಉಳವಿ, ಬೆನ್ನೂರು, ತತ್ತೂರು ಹಾಗೂ ತವನಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮರಾ ಅಳವಡಿಕೆಗೆ ಅಂದಾಜು ₹ 1.50 ಲಕ್ಷದಿಂದ ₹ 1.70 ಲಕ್ಷ ವೆಚ್ಚವಾಗಿದೆ. ಅದರ ಸಂಪೂರ್ಣ ನಿರ್ವಹಣೆ ಹೊಣೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೇ ವಹಿಸಲಾಗಿದೆ.
ಮುಖ್ಯ ರಸ್ತೆ, ದೇವಾಲಯ, ಮಸೀದಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇನ್ನು ಪ್ರವಾಸಿ ತಾಣ, ಪ್ರೇಕ್ಷಣೀಯ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚು ಒತ್ತು ನೀಡಿದ್ದು, ಚಂದ್ರಗುತ್ತಿ, ಗುಡವಿ ಹಾಗೂ ಆನವಟ್ಟಿ ಭಾಗದಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗ್ರಾಮಗಳಲ್ಲಿ ಅಪಘಾತ, ಕಳ್ಳತನ, ಅಹಿತಕರ ಘಟನೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಲು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ನೆರವಾಗಲಿದೆ ಎನ್ನುತ್ತಾರೆ ಚಂದ್ರಗುತ್ತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರೇಣುಕಾಪ್ರಸಾದ್.
ಸ್ಥಳೀಯ ಸಂಸ್ಥೆ ಚುನಾವಣೆಗೆ ಕಣ್ಗಾವಲು:
ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ ಪೂರ್ವದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಕೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ಮತದಾನ ಹಾಗೂ ಫಲಿತಾಂಶ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಗಾವಲಿಗೆ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂಬುದು ಗ್ರಾಮಸ್ಥರ ಮಾತು.
‘ಪಂಚಾಯಿತಿ ನಿಧಿಯಿಂದ ವೆಚ್ಚ’
ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಕ್ಷ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು ಇದೀಗ ಕೆಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಸಿದ್ಧತೆ ನಡೆಸಲಾಗಿದೆ. ಆಯಾ ಪಂಚಾಯಿತಿಯ ಸ್ವಂತ ನಿಧಿಯಿಂದ ವೆಚ್ಚ ಭರಿಸಿ ಅಗತ್ಯ ಸಂಖ್ಯೆಯ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಖರೀದಿ ಮಾಡಿ ಅಳವಡಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸೊರಬ ತಾಲ್ಲೂಕು ಪಂಚಾಯಿತಿ ಇ.ಒ ಶಶಿಧರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.