ADVERTISEMENT

ಬಲಹೀನರಿಗೆ ಆರ್ಥಿಕ ಶಕ್ತಿ ತುಂಬುವುದೇ ಸಹಕಾರ ತತ್ವ

ಭಗೀರಥ ಸಹಕಾರ ಸಂಘದ ಉದ್ಘಾಟನೆ: ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:40 IST
Last Updated 14 ಸೆಪ್ಟೆಂಬರ್ 2024, 15:40 IST
ಶಿವಮೊಗ್ಗದಲ್ಲಿ ಶನಿವಾರ ಭಗೀರಥ ಸಹಕಾರ ಸಂಘದ ಉದ್ಘಾಟನೆ ನಡೆಯಿತು
ಶಿವಮೊಗ್ಗದಲ್ಲಿ ಶನಿವಾರ ಭಗೀರಥ ಸಹಕಾರ ಸಂಘದ ಉದ್ಘಾಟನೆ ನಡೆಯಿತು   

ಶಿವಮೊಗ್ಗ: ‘ಬಲಹೀನರಿಗೆ ಆರ್ಥಿಕ ಶಕ್ತಿ ನೀಡುವ ಸಂಸ್ಕೃತಿ ಭಾರತದ್ದು. ಅನಾದಿಕಾಲದಿಂದಲೂ ನಮ್ಮಲ್ಲಿ ಆರ್ಥಿಕ ಸಹಕಾರವನ್ನು ನೀಡುವಂತಹ ಪದ್ಧ‌ತಿ ಇದೆ. ಅದರ ಮುಂದುವರಿದ ಭಾಗವೇ ಸಹಕಾರ ಸಂಘಗಳು’ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಭಗೀರಥ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಲೋಗೋ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರತಿಭಾ ಪುರಸ್ಕಾರ ನೆರವೇರಿಸಿದ ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ‘ಸಮುದಾಯ ಮುಂದೆ ಬರಬೇಕಾದರೆ ಅಥವಾ ಉನ್ನತಿಯನ್ನು ಕಾಣಬೇಕಾದರೆ ಆ ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗಬೇಕು. ಇಂದು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ್ದು, ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಸಮಾಜದ ಮಕ್ಕಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ’ ಎಂದು ಆಶಿಸಿದರು.

ADVERTISEMENT

‘ಸಹಕಾರ ಸಂಘಗಳು ರಾಷ್ಟ್ರದ ಆರ್ಥಿಕ ವ್ಯವಸ್ಥೆ ಬಲಗೊಳಿಸುತ್ತವೆ. 119 ವರ್ಷಗಳ ಹಿಂದೆಯೇ ಸಹಕಾರ ತತ್ವದ ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಸಂಘ ಆರಂಭಗೊಂಡಿತು. ಅಂದಿನ ಹಿರಿಯರು ಬಡವರ ಮೇಲಿನ ಸಾಲದ ಹೊರೆ ತಗ್ಗಿಸಲು ಮತ್ತು ಸಾಹುಕಾರರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳುವಂತೆ ಮಾಡಲು ಈ ಸಂಘ ಸ್ಥಾಪಿಸಲಾಯಿತು. ಆದರೆ ಇಂದು ದೇಶದಲ್ಲಿಯೇ ಸಹಕಾರ ತತ್ವ ಆರ್ಥಿಕ ಬದ್ಧತೆ ಒದಗಿಸಿದೆ‘ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.

700ಕ್ಕೂ ಅಧಿಕ ಸದಸ್ಯರನ್ನು ₹ 15 ಲಕ್ಷ ಬಂಡವಾಳ ಹೊಂದುವ ಮೂಲಕ ಸಹಕಾರ ಸಂಘ ಸ್ಥಾಪಿಸುವುದು ಸುಲಭದ ಮಾತಲ್ಲ. ಸಮಾಜದಲ್ಲಿನ ಬಡವರನ್ನು ಆರ್ಥಿಕವಾಗಿ ಸಬಲರಾಗಿಸುವ ಉದ್ದೇಶದಿಂದ ಸಂಘ ಮುಂದಿನ ದಿನಗಳಲ್ಲಿ ಯಶಸ್ಸಿನ ಹಾದಿ ತುಳಿಯಲಿ ಎಂದು ಆಶಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಭಗೀರಥ ಸಹಕಾರ ಸಂಘದ ಅಧ್ಯಕ್ಷ ಎನ್.ಮಂಜುನಾಥ್, ‘ಸಂಘಟನೆ ಮಾಡುವುದು ಎಷ್ಟೊಂದು ಕಷ್ಟ ಎಂದು ಅರ್ಥವಾಗುತ್ತಿದೆ. ಸಮಾಜದ ಜನರ ಬಹುದಿನದ ಕನಸಾದ ಈ ಸಂಘ ಇಂದು ನನಸಾಗಿದೆ’ ಎಂದರು.

ಜಿಲ್ಲೆಯಲ್ಲಿ 48 ಹಳ್ಳಿಗಳಿಂದ ಷೇರುದಾರರನ್ನು ಸಹಕಾರ ಸಂಘ ಹೊಂದಿದೆ. ಅನೇಕ ಕುಟುಂಬಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಈ ಕುಟುಂಬಗಳಿಗೆ ಆರ್ಥಿಕ ಬಲ ತುಂಬುವ ಸಲುವಾಗಿ ಈ ಸಂಘ ಸ್ಥಾಪಿಸಲಾಗಿದೆ ಎಂದು ಹೇಳಿದರು.

50 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ದಂಪತಿಗೆ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ನಿವೃತ್ತ ನ್ಯಾಯಾಧೀಶ ಬಿಲ್ಲಪ್ಪ, ಜಗನ್ನಾಥ್ ಸಾಗರ್, ಸಂಘದ ಉಪಾಧ್ಯಕ್ಷ ವಸಂತ್ ಹೋಬಳಿದಾರ್, ನಿರ್ದೇಶಕರಾದ ಸುಧಾಕರ್, ರವಿ, ಲೋಕೇಶ್, ಹನುಮಂತಪ್ಪ, ವೆಂಕಟೇಶ್, ರಮೇಶ್ , ಶ್ರೀನಿವಾಸ್, ಶಾಂತಮ್ಮ, ಅರ್ಚನಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.