ಶಿಕಾರಿಪುರ: ವಸತಿ ಶಾಲೆ, ವಸತಿ ನಿಲಯದ ವಿದ್ಯಾರ್ಥಿನಿಯರ ಚಟುವಟಿಕೆ ಮೇಲೆ ಶಿಕ್ಷಕರು ಸದಾ ನಿಗಾ ಇಡಬೇಕು ಆಗ ಬಾಲ್ಯ ವಿವಾಹ ನಡೆಯುವುದನ್ನು ತಪ್ಪಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಎಚ್.ಗಣೇಶ್ ಹೇಳಿದರು.
ಜಿಲ್ಲಾಡಳಿತ, ಜಿ.ಪಂ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಸತಿ ಶಾಲೆ, ವಸತಿ ನಿಲಯದ ಮೇಲ್ವಿಚಾರಕರು, ಕಾವಲುಗಾರರು, ಅಡುಗೆಯವರು, ಆರೋಗ್ಯ ಸಹಾಯಕರಿಗೆ ಆಯೋಜಿಸಿದ್ದ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿನಿಯರು ಬಹಳ ದಿನ ರಜೆಮೇಲೆ ತೆರಳುವುದಕ್ಕೆ ಸಿದ್ಧತೆ ನಡೆಸಿದ್ದರೆ, ನಿತ್ಯ ಶಾಲೆಗೆ ಹಾಜರಾಗದಿದ್ದರೆ, ಹೆಚ್ಚು ಸಮಯ ಮೊಬೈಲ್‌ನಲ್ಲಿ ಮಾತನಾಡುವುದು, ವಸತಿ ಶಾಲೆ ಅಥವಾ ನಿಲಯಕ್ಕೆ ವಿದ್ಯಾರ್ಥಿನಿಯರ ಭೇಟಿಗೆ ಆಗಮಿಸುವ ವ್ಯಕ್ತಿಗಳು – ಹೀಗೆ ಎಲ್ಲ ವಿಷಯದ ಕುರಿತು ಗಮನ ನೀಡಬೇಕು. ಆಗ ಬಾಲ್ಯ ವಿವಾಹ ತಪ್ಪಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಪೋಕ್ಸೊ ಪ್ರಕರಣ ಹೆಚ್ಚುತ್ತಿರುವುದು ಕಳವಳಕಾರಿ. ಪ್ರಕರಣ ಬೆಳಕಿಗೆ ಬಂದರೆ ಮರ್ಯಾದೆ ಹೋಗುತ್ತದೆ ಎನ್ನುವ ಕಾರಣಕ್ಕೆ ದೂರು ನೀಡಲು ಹಿಂದೇಟು ಹಾಕುವುದರಿಂದ ದುಷ್ಟರಿಗೆ ಶಿಕ್ಷೆ ಆಗುತ್ತಿಲ್ಲ. ಅದಕ್ಕಾಗಿ ಸರ್ಕಾರ ಪೋಕ್ಸೊ ಕಾಯ್ದೆ ಜಾರಿಗೊಳಿಸಿದೆ. ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ಯಾವುದೇ ಗುರುತು ಪತ್ತೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಅದಕ್ಕಾಗಿ ‘ಮಿಷನ್ ಸುರಕ್ಷಾ’ ಎಂಬ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಬಾಲಕಿಯರ ಮೇಲೆ ದೌರ್ಜನ್ಯ ಇಲ್ಲವಾಗಿಸಬೇಕಿದೆ. ಅದಕ್ಕಾಗಿ ವಸತಿ ನಿಲಯ, ವಸತಿ ಶಾಲೆ, ಅಂಗನವಾಡಿ ಕಾರ್ಯಕರ್ತೆಯರು, ನಾಗರಿಕರು ಕೈಜೋಡಿಸಬೇಕು ಎಂದು ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಹೇಳಿದರು.
ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೇಶಪ್ಪ, ಪರಿಶಿಷ್ಟ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಶ್ರೀನಿವಾಸ್, ಪಟ್ಟಣ ಠಾಣೆ ಸಬ್ ಇನ್‌ಸ್ಪೆಕ್ಟರ್ ಶರತ್, ತಾ.ಪಂ.ನ ಪಾಂಡುರಂಗ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಂರಕ್ಷಣಾಧಿಕಾರಿ ರತ್ನಮ್ಮ, ಮಕ್ಕಳ ರಕ್ಷಣಾ ಘಟಕದ ಗಾಯಿತ್ರಿ, ತಾಲ್ಲೂಕಿನ ಎಲ್ಲ ವಸತಿ ಶಾಲೆ, ವಸತಿ ನಿಲಯ ಪಾಲಕರು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.