ADVERTISEMENT

ಚಂದ್ರಶೇಖರನ್‌ ಆತ್ಮಹತ್ಯೆ | ಶಿವಮೊಗ್ಗದಲ್ಲಿ ಸಿಐಡಿ ತಂಡ ಮೊಕ್ಕಾಂ: ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 29 ಮೇ 2024, 16:19 IST
Last Updated 29 ಮೇ 2024, 16:19 IST
ಶಿವಮೊಗ್ಗದ ವಿನೋಬನಗರದಲ್ಲಿರುವ ಚಂದ್ರಶೇಖರನ್‌ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು
ಶಿವಮೊಗ್ಗದ ವಿನೋಬನಗರದಲ್ಲಿರುವ ಚಂದ್ರಶೇಖರನ್‌ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು    

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣದ ತನಿಖೆ ಕೈಗೊಂಡಿರುವ ಸಿಐಡಿ ತಂಡ ನಗರದಲ್ಲಿಯೇ ಮೊಕ್ಕಾಂ ಹೂಡಿದೆ. 

ಡಿವೈಎಸ್ಪಿ ರಫೀಕ್‌ ನೇತೃತ್ವದ ತಂಡ ನಿಗಮದ ಕಚೇರಿಯಲ್ಲಿ ಚಂದ್ರಶೇಖರನ್‌ ಅವರು ಯಾರೊಂದಿಗೆ ಒಡನಾಟ ಹೊಂದಿದ್ದರು. ಶಿವಮೊಗ್ಗದಲ್ಲಿ ಯಾರೊಂದಿಗೆ ಆತ್ಮೀಯವಾಗಿದ್ದರು, ಅವರ ಬಳಿ ಕಚೇರಿಗೆ ಸಂಬಂಧಿಸಿದ ಯಾವುದಾದರೂ ಮಾಹಿತಿ ಹಂಚಿಕೊಂಡಿದ್ದರೇ ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.  

‘ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ತನಿಖಾ ಹಂತದಲ್ಲಿ ಯಾವ ಮಾಹಿತಿಯನ್ನೂ ಬಹಿರಂಗಪಡಿಸಲು ಆಗುವುದಿಲ್ಲ. ಶೀಘ್ರವೇ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗುತ್ತದೆ’ ಎಂದು ಸಿಐಡಿ ಡಿಜಿಪಿ ಎಂ.ಎ.ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

ಉಸ್ತುವಾರಿ ಸಚಿವರಿಂದ ಸಾಂತ್ವನ

ಚಂದ್ರಶೇಖರನ್‌ ಅವರ ಶಿವಮೊಗ್ಗದ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬುಧವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. 

‘ಚಂದ್ರಶೇಖರನ್‌ ಸಾವಿಗೆ ಸರ್ಕಾರ ಖಂಡಿತ ನ್ಯಾಯ ಒದಗಿಸಲಿದೆ. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿರುವುದು ನನ್ನ ಜವಾಬ್ದಾರಿ ಕೂಡ. ಅವರ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿಯವರೊಂದಿಗೆ ಭೇಟಿ ಮಾಡಿಸುತ್ತೇನೆ’ ಎಂದರು.

‘ಚಂದ್ರಶೇಖರನ್‌ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕವಾಗಿ ಸಹಕಾರ ನೀಡುತ್ತೇನೆ. ಅವರ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಹೇಳಿದರು.  

‘ಸಂಸಾರಕ್ಕೆ ಪತಿಯೇ ಆಧಾರವಾಗಿದ್ದರು. ನನಗೆ ₹ 12 ಸಾವಿರ ಸಂಬಳ ಬರುತ್ತಿದೆ. ಇದರಲ್ಲಿ ಜೀವನ ಸಾಗಿಸುವುದು ಕಷ್ಟ. ಮಕ್ಕಳಿಗೆ ಓದಿಸಲು ಆಗುವುದಿಲ್ಲ’ ಎಂದು ಚಂದ್ರಶೇಖರನ್‌ ಪತ್ನಿ ಕವಿತಾ ಅಳಲು ತೊಡಿಕೊಂಡರು. 

ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಲಿ

ಶಿವಮೊಗ್ಗ: ‘ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಬೇಕು. ಆ ಮೂಲಕ ಗೌರವ ಉಳಿಸಿಕೊಳ್ಳಬೇಕು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು.  ‘ಮರಣ ಪತ್ರದಲ್ಲಿ ಯಾರ ಹೆಸರು ಬರೆದಿದ್ದಾರೋ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ

ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣದ ಆರೋಪಿಗಳಾಗಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣವರ ಅವರು ನಿರೀಕ್ಷಣಾ ಜಾಮೀನು ಕೋರಿ ಶಿವಮೊಗ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.  ಗುರುವಾರ ಇದರ ವಿಚಾರಣೆ ನಡೆಯಲಿದೆ. ಚಂದ್ರಶೇಖರನ್‌ ಅವರ ಪತ್ನಿ ಸರ್ಕಾರಿ ವಕೀಲರ ಮೂಲಕ ಪದ್ಮನಾಭ ಮತ್ತು ದುರುಗಣ್ಣವರ ಜಾಮೀನಿಗೆ ತಕರಾರು ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.