ಶಿಕಾರಿಪುರ: ಇಲ್ಲಿನ ಪೌರ ಕಾರ್ಮಿಕರಿಗೆ ಸರ್ಕಾರದ ಅನುದಾನದಲ್ಲಿ ವಿತರಣೆ ಆಗಬೇಕಿದ್ದ 116 ಕುಕ್ಕರ್‌ಗಳು ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಈವರೆಗೂ ವಿತರಣೆ ಆಗಿಲ್ಲ.
ಪೌರ ಕಾರ್ಮಿಕ ದಿನದಂದು ಪೌರ ಕಾರ್ಮಿಕರಿಗೆ 5 ಲೀಟರ್‌ನ 116 ಕುಕ್ಕರ್ ವಿತರಣೆಗೆ ₹ 2.99 ಲಕ್ಷ ಮತ್ತು ಪೌರ ಕಾರ್ಮಿಕರ ಆರೋಗ್ಯ ಉಚಿತ ತಪಾಸಣೆ ಮಾಡುವುದಕ್ಕಾಗಿ ₹ 6 ಲಕ್ಷ ಅನುದಾನ ನೀಡಲಾಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮಾಸ್ಟರ್ ಹೆಲ್ತ್ ಚೆಕಪ್ ಮಾಡಿಸಲಾಗಿದೆ. ಆದರೆ, ಕುಕ್ಕರ್ ವಿತರಣೆ ಮಾಡುವ ಹಂತದಲ್ಲಿ ಅಳತೆ ವ್ಯತ್ಯಾಸ ಕಾರಣಕ್ಕೆ ವಿತರಣೆ ತಡೆ ಹಿಡಿಯಲಾಗಿತ್ತು.
ಕುಕ್ಕರ್ ಮೇಲ್ಭಾಗದ ಪ್ಯಾಕ್‌ನಲ್ಲಿ 5 ಲೀಟರ್ ಎಂದು ನಮೂದಾಗಿದೆ. ಒಳಗಡೆ 4.5 ಲೀಟರ್ ಅಳತೆ ಇದೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಕುರಿತು ಗುಣಮಟ್ಟ ಪರಿಶೀಲನೆಗೆ ಸರ್ಕಾರ ಮೂರನೇ ಏಜೆನ್ಸಿ ನೇಮಿಸಿತ್ತು. ಹುಬ್ಬಳ್ಳಿಯ ಸನ್ಮಿತ್ರ ಏಜೆನ್ಸಿಯು ಮೂರನೇ ತಪಾಸಣೆ ನಡೆಸಿ ಕುಕ್ಕರ್ ಅಳತೆ ಸರಿಯಿಲ್ಲ ಎಂದು ವರದಿ ನೀಡಿದೆ. ಹೀಗಾಗಿ ಪೂರೈಕೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ.
₹ 2.99 ಲಕ್ಷ ಮೌಲ್ಯಕ್ಕೆ 116 ಕುಕ್ಕರ್ ಎಂದರೆ ಪ್ರತಿಯೊಂದಕ್ಕೆ ₹ 2,577 ಆಗುತ್ತದೆ. ಪೂರೈಕೆದಾರರು ಐಎಸ್‌ಐ ಗುರುತುಳ್ಳ ‘ಉದಯ’ ಎನ್ನುವ ಕಂಪೆನಿಯ ಅಲ್ಯೂಮಿನಿಯಂ ಕುಕ್ಕರ್ ನೀಡುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಅದಕ್ಕಿಂತ ಕಡಿಮೆ ದರಕ್ಕೆ ಒಳ್ಳೆಯ ಕಂಪೆನಿ ಕುಕ್ಕರ್ ದೊರೆಯುತ್ತವೆ. ಸ್ಥಳೀಯರು ಪೂರೈಕೆ ಮಾಡಿದರೆ ವಾರಂಟಿ, ರಿಪೇರಿ ಸೇರಿ ಹಲವು ಬಗೆಯ ಅನುಕೂಲ ಆಗುತ್ತದೆ. ಆದರೆ, ವಿಜಯನಗರ ಜಿಲ್ಲೆಯ ವ್ಯಕ್ತಿಗೆ ಟೆಂಡರ್ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕುಕ್ಕರ್ ಪೂರೈಕೆಯಾದ ನಂತರವೂ ಸಮಸ್ಯೆ ಆಗಲಿದೆ ಎಂಬುದು ಪೌರ ಕಾರ್ಮಿಕರ ಅಳಲು.
ಅನ್ಯರಿಗೂ ಪಾಲು:
85 ಸ್ವಚ್ಛತಾ ಕಾರ್ಮಿಕರು ಇಲ್ಲಿನ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 37 ಸ್ವಚ್ಛತಾ ಕಾರ್ಮಿಕರು, ಇನ್ನುಳಿದವರು ಡ್ರೈವರ್, ಲೋಡರ್ ಸೇರಿದ್ದಾರೆ. ಪೌರ ಕಾರ್ಮಿಕರಿಗೆ ಮಾತ್ರ ಸರ್ಕಾರದ ಅನುದಾನ ಬಳಸಬೇಕು. ಆದರೆ,ಸ್ವಚ್ಛತಾ ಕಾರ್ಮಿಕರಲ್ಲದೆ ತಾತ್ಕಾಲಿಕ ಗಣಕ ಯಂತ್ರ ನಿರ್ವಾಹಕರು, ಕಂದಾಯ ಸಿಬ್ಬಂದಿ ಸೇರಿ ಹಲವರಿಗೆ ಕುಕ್ಕರ್ ನೀಡಲಾಗುತ್ತಿದೆ.
‘ಈಗ ಎಲ್ಲರ ಮನೆಯಲ್ಲೂ ಕುಕ್ಕರ್ ಇರುತ್ತವೆ. ಅದರ ಬದಲಿಗೆ ಪೌರ ಕಾರ್ಮಿಕರಿಗೆ ಮಾತ್ರ ವಾಷಿಂಗ್ ಮೆಷಿನ್ ನೀಡಿದರೆ ನಿತ್ಯದ ಮನೆ ಕೆಲಸವಾದರೂ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಪೂರ್ವಭಾವಿ ಸಭೆಯಲ್ಲಿ ಸದಸ್ಯರು ಹೇಳಿದರೂ ಪ್ರಯೋಜನ ಆಗಿಲ್ಲ. ಪುರಸಭೆ ಮುಖ್ಯಾಧಿಕಾರಿ ಕೇವಲ ಹಣ ಬರುವ ಕೆಲಸಕ್ಕೆ ಆದ್ಯತೆ ನೀಡುತ್ತಾರೆ’ ಎಂದು ನಾಮನಿರ್ದೇಶನ ಸದಸ್ಯ ಸುರೇಶ್ ಧಾರವಾಡ ಆರೋಪಿಸುತ್ತಾರೆ.
ಪೌರ ಕಾರ್ಮಿಕರಿಗೆ ಕುಕ್ಕರ್ ಕೊಡಲು ಸ್ಥಳೀಯರಿಗೆ ಟೆಂಡರ್ ನೀಡುವ ಬದಲು ದೂರದ ಜಿಲ್ಲೆಯವರಿಗೆ ನೀಡಲಾಗಿದೆ. ಸದಸ್ಯರ ಮಾತು ಕೇಳುವ ವ್ಯವದಾನ ಅಧಿಕಾರಿಗಳಿಗೆ ಇಲ್ಲವಾಗಿರುವುದು ದುರಂತರವಿಕಿರಣ್ ಪುರಸಭೆ ನಾಮನಿರ್ದೇಶಿತ ಸದಸ್ಯ
ಪೂರೈಕೆದಾರರು ನೀಡಿದ್ದ ಕುಕ್ಕರ್ ಅಳತೆಯಲ್ಲಿ ವ್ಯತ್ಯಾಸ ಇರುವುದು ದೃಢಪಟ್ಟಿದ್ದು ಬೇರೆ ಕುಕ್ಕರ್ ಪೂರೈಸುವಂತೆ ನೋಟಿಸ್ ನೀಡಲಾಗಿದೆ. ಹೊಸ ಕುಕ್ಕರ್ ಸ್ಯಾಂಪಲ್ ನೀಡಿದ್ದು ಗುಣಮಟ್ಟ ಪರಿಶೀಲನೆ ನಂತರ ವಿತರಿಸಲಾಗುವುದುಭರತ್ ಮುಖ್ಯಾಧಿಕಾರಿ ಪುರಸಭೆ ಶಿಕಾರಿಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.