ADVERTISEMENT

‘ಪಕ್ಷ ಸೂಚಿಸಿದ ಕೆಲಸ ಮಾಡಲು ಬದ್ಧ’

ಬಿಜೆಪಿ ಸೇರ್ಪಡೆಯಾದ ಡಾ.ಧನಂಜಯ ಸರ್ಜಿ, ಕೆ.ಎಸ್. ಪ್ರಶಾಂತ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:22 IST
Last Updated 5 ಡಿಸೆಂಬರ್ 2022, 4:22 IST
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಹಾಗೂ ಸಾಗರದ ಕಾಂಗ್ರೆಸ್ ಮುಖಂಡ ಕೆ.ಎಸ್.ಪ್ರಶಾಂತ್ ಬಿಜೆಪಿ ಸೇರ್ಪಡೆ ಆದರು.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಹಾಗೂ ಸಾಗರದ ಕಾಂಗ್ರೆಸ್ ಮುಖಂಡ ಕೆ.ಎಸ್.ಪ್ರಶಾಂತ್ ಬಿಜೆಪಿ ಸೇರ್ಪಡೆ ಆದರು.   

ಶಿವಮೊಗ್ಗ: ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಸಂತೋಷದಿಂದ ಸ್ವೀಕರಿಸಿ, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತೇನೆ ಎಂದು ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪಕ್ಷ ಸೇರ್ಪಡೆಗೊಂಡು ಅವರು ಮಾತನಾಡಿದರು.

‘ನಾನು ರೈತಾಪಿ ಕುಟುಂಬದಿಂದ ಬಂದವನು. 10 ವರ್ಷದವನಿದ್ದಾಗ ಆರ್‌ಎಸ್‌ಎಸ್‌ ಶಾಖೆಗೆ ಪದಾರ್ಪಣೆ ಮಾಡಿದೆ. ಅಲ್ಲಿ ಅನೇಕ ಸ್ವಯಂ ಸೇವಕರ ಗರಡಿಯಲ್ಲಿ ಬೆಳೆದೆ. ಅಲ್ಲಿಂದ ಬರುವಾಗಲೇ ಸಂಸ್ಕಾರ, ಶಿಸ್ತು ಹಾಗೂ ದೇಶ ಪ್ರೇಮ ತುಂಬಿ ಹರಿಸಿ ಕಳುಹಿಸಿದ್ದಾರೆ’ ಎಂದರು.

ADVERTISEMENT

‘ಸುಮಾರು 25 ವರ್ಷಗಳಿಂದಲೂ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರಂತಹ ನಾಯಕರು ನನಗೆ ಪ್ರೇರಣೆಯಾಗಿ ನಿಂತಿದ್ದಾರೆ’ ಎಂದರು.

‘ಪಕ್ಷದ ಹಿರಿಯರೆಲ್ಲರೂ ಮಾರ್ಗದರ್ಶನ ನೀಡಿ ಮುಂದೆ ಕರೆದುಕೊಂಡು ಹೋಗಬೇಕು. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಷ್ಠೆಯಿಂದ ಮಾಡುತ್ತೇನೆ’ ಎಂದು ತಿಳಿಸಿದರು.

ದೇಶದಲ್ಲಿ ಬಿಜೆಪಿ ಹಾಗೂ ಮೋದಿ ಪರವಾದ ವಾತಾವರಣ ಇದೆ. ಒಂದು ಕಾಲದಲ್ಲಿ ಬಿಜೆಪಿ ಸೇರಲು ಯಾರೂ ಬಯಸುತ್ತಿರಲಿಲ್ಲ. ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಭಾವಿಸಿದ್ದರು. ಆದರೆ, ಬಿಜೆಪಿಯ ಅಭಿವೃದ್ಧಿ ಕಾರ್ಯಸೂಚಿಯನ್ನು ಮೆಚ್ಚಿ ಎಲ್ಲಾ ವಿದ್ಯಾವಂತರು ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ದೇಶದಲ್ಲಿ ಕಾಂಗ್ರೆಸ್ ಹೆಸರಿನಲ್ಲಿ ಸ್ವಾರ್ಥಿಗಳು ಅಧಿಕಾರ ಮಾಡುತ್ತಿದ್ದಾರೆ ಎಂಬುದು ಗಾಂಧೀಜಿಯವರಿಗೆ ಅಂದೇ ತಿಳಿದಿತ್ತು. ಅದೇ ಕಾರಣಕ್ಕೆ ಗಾಂಧೀಜಿ ಕಾಂಗ್ರೆಸ್ ವಿಸರ್ಜಿಸಲು ಬಯಸಿದ್ದರು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್, ಎಸ್‌. ರುದ್ರೇಗೌಡ, ಡಿ.ಎಸ್. ಅರುಣ್, ಗ್ರಾಮಾಂತರ ಶಾಸಕ ಕೆ.ಬಿ. ಅಶೋಕನಾಯ್ಕ್, ಪ್ರಶಿಕ್ಷಣ ಪ್ರಕೋಷ್ಠಗಳ ಸಂಚಾಲಕ ಆರ್.ಕೆ. ಸಿದ್ದರಾಮಣ್ಣ, ಗೀರೀಶ್ ಪಟೇಲ್, ಎನ್‌. ನಾಗರಾಜ್‌, ಎಸ್.ಎನ್. ಚನ್ನಬಸಪ್ಪ, ಜಗದೀಶ್ ಹಾಜರಿದ್ದರು.

‘ಉತ್ತಮ ಕಾರ್ಯಗಳೇ ಪ್ರೇರಣೆ’

ಸಾಗರದ ಕಾಂಗ್ರೆಸ್ಯುವ ಮುಖಂಡ ಕೆ.ಎಸ್. ಪ್ರಶಾಂತ್ ಬಿಜೆಪಿಗೆ ಸೇರ್ಪಡೆಗೊಂಡರು.

’ನಾನು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳ ಜೊತೆಗೆ ಪ್ರತ್ಯಕ್ಷವಲ್ಲದೇ, ಪರೋಕ್ಷವಾಗಿ ತೊಡಗಿಕೊಂಡು ಕೆಲಸ ಮಾಡುತ್ತಿದ್ದೆ. ನನಗೆ ಅಲ್ಲಿ ಸ್ನೇಹಿತರಿದ್ದಾರೆ’ ಎಂದರು.

‘ಮೊದಲಿನಿಂದಲೂ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಉತ್ತಮ ರೀತಿಯ ಕಾರ್ಯಗಳನ್ನು ನೋಡಿಕೊಂಡು ಬಂದ ನನಗೆ ಈಗ ಪಕ್ಷ ಸೇರಲು ಪ್ರೇರಣೆಯಾಯಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.