ADVERTISEMENT

ಭದ್ರಾವತಿ ನಗರಸಭೆ: ದಶಕದ ನಂತರ ಕಾಂಗ್ರೆಸ್ ಆಡಳಿತ

ನಗರಸಭೆ ಅಧ್ಯಕ್ಷರಾಗಿ ಗೀತಾ ರಾಜಕುಮಾರ್, ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 4:23 IST
Last Updated 17 ಅಕ್ಟೋಬರ್ 2021, 4:23 IST
ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಜೆ.ಸಿ. ಗೀತಾ ರಾಜಕುಮಾರ್, ಉಪಾಧ್ಯಕ್ಷರಾಗಿ ಆಯ್ಕೆಯಾದ ಚನ್ನಪ್ಪ ಅವರನ್ನು ಶಾಸಕ ಬಿ.ಕೆ. ಸಂಗಮೇಶ್ವರ ಅಭಿನಂದಿಸಿದರು
ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಜೆ.ಸಿ. ಗೀತಾ ರಾಜಕುಮಾರ್, ಉಪಾಧ್ಯಕ್ಷರಾಗಿ ಆಯ್ಕೆಯಾದ ಚನ್ನಪ್ಪ ಅವರನ್ನು ಶಾಸಕ ಬಿ.ಕೆ. ಸಂಗಮೇಶ್ವರ ಅಭಿನಂದಿಸಿದರು   

ಭದ್ರಾವತಿ: ನಗರಸಭೆ ಅಧ್ಯಕ್ಷರಾಗಿ 2ನೇ ವಾರ್ಡಿನಕಾಂಗ್ರೆಸ್‌ ಸದಸ್ಯೆ ಜೆ.ಸಿ. ಗೀತಾ ರಾಜಕುಮಾರ್, ಉಪಾಧ್ಯಕ್ಷರಾಗಿ 9ನೇ ವಾರ್ಡಿನ ಚನ್ನಪ್ಪ ಶನಿವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು. ಈ ಮೂಲದ ದಶಕದ ನಂತರ ಕಾಂಗ್ರೆಸ್ ತನ್ನ ಸ್ವಂತ ಶಕ್ತಿಯ ಮೇಲೆ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿಹಿಡಿದಿದೆ.

ನಗರಸಭೆ ಪ್ರವೇಶಿಸಿದ ಮೊದಲನೇ ಬಾರಿಯೇ ಗೀತಾ ರಾಜಕುಮಾರ್ ಅವರಿಗೆ ಅಧ್ಯಕ್ಷ ಪಟ್ಟ ಸಿಕ್ಕಿದ್ದು, ಎರಡನೇ ಬಾರಿ ಚನ್ನಪ್ಪ ಅವರಿಗೆ ಉಪಾಧ್ಯಕ್ಷ ಸ್ಥಾನ ಒಲಿದಿದೆ.

20 ಮತಗಳು: ಅಧ್ಯಕ್ಷ ಸ್ಥಾನಕ್ಕೆ 5ನೇ ವಾರ್ಡಿನ ಬಿಜೆಪಿ ಸದಸ್ಯೆ ಶಶಿಕಲಾ ನಾರಾಯಣಪ್ಪ ಹಾಗೂ 15ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಮಂಜುಳಾ ಸುಬ್ಬಣ್ಣ ಕಣದಲ್ಲಿದ್ದರು.

ADVERTISEMENT

ಉಪಾಧ್ಯಕ್ಷ ಸ್ಥಾನಕ್ಕೆ 25ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಉದಯಕುಮಾರ್ ಕಣದಲ್ಲಿದ್ದರು. ಅಂತಿಮವಾಗಿ ಕೈ ಎತ್ತುವ ಮೂಲಕ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೀತಾ ರಾಜಕುಮಾರ್ 20 ಮತಗಳನ್ನು ಪಡೆದರು. ಬಿಜೆಪಿ ತನ್ನ ಸದಸ್ಯರ ನಾಲ್ಕು ಮತವನ್ನು ಹಾಗೂ ಜೆಡಿಎಸ್ ಸದಸ್ಯರು ಹಾಗೂ ಬೆಂಬಲಿತರ ಬಲದಿಂದ 12 ಮತಗಳನ್ನಷ್ಟೇ ಪಡೆಯಿತು.

ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನಪ್ಪ 20 ಮತಗಳು, ಜೆಡಿಎಸ್ ಪಕ್ಷದ ಉದಯಕುಮಾರ್ 12 ಮತಗಳನ್ನು ಪಡೆದರು. ಬಿಜೆಪಿ ಸದಸ್ಯರು ಯಾರಿಗೂ ಮತ ನೀಡದೆ ಮೌನವಹಿಸಿದ್ದರು.

ಕೈ ಎತ್ತುವ ಮೂಲಕ ಏಣಿಕೆ: ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಚುನಾವಣಾಧಿಕಾರಿ ಟಿ.ವಿ. ಪ್ರಕಾಶ್ ಅವರು ಸದಸ್ಯರ ಕೈ ಎತ್ತುವ ಮೂಲಕ ನಡೆಸಿದರು.

18 ಸದಸ್ಯ ಬಲದ ಕಾಂಗ್ರೆಸ್‌ ಪಕ್ಷಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ ಅವರು ಹಾಗೂ ಪಕ್ಷೇತರ ಸದಸ್ಯ 33ನೇ ವಾರ್ಡಿನ ಆರ್. ಮೋಹನಕುಮಾರ್ ಅವರ ಮತಗಳು ಸಿಕ್ಕಿದ್ದರಿಂದ 20 ಮತಗಳನ್ನು ಪಡೆದರು. ಇದು ಪಕ್ಷದ ಅಭ್ಯರ್ಥಿಗಳು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಲು ನೆರವಾಯಿತು.

ಮೊದಲ ಬಾರಿ ನಗರಸಭೆ ಗದ್ದುಗೆಯನ್ನು ಕಾಂಗ್ರೆಸ್‌ ತನ್ನದಾಗಿಸಿಕೊಂಡಿದ್ದರೆ,ಕಳೆದ ಎರಡೂ ಅವಧಿಯು ಜೆಡಿಎಸ್ ತೆಕ್ಕೆಯಲ್ಲಿದ್ದುದು ವಿಶೇಷ.

ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಅಧಿಕಾರ ಇದ್ದಾಗ ಮತ್ತು ಇಲ್ಲದ ಸಂದರ್ಭದಲ್ಲಿಯೂ ನಗರಸಭೆ ಅಧಿಕಾರ ಚುಕ್ಕಾಣಿಯನ್ನು ಹಿಡಿಯಲು ಒಂದಲ್ಲ ಒಂದು ರೀತಿಯಲ್ಲಿ ಕಾರ್ಯತಂತ್ರ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಜೆಡಿಎಸ್‌ಗೆ ವರದಾನವಾಗುತ್ತಿತ್ತು. ಆದರೆ, ಈ ಬಾರಿ ಅಪ್ಪಾಜಿ ನಿಧನದಿಂದ ಅದು ಸಾಧ್ಯವಾಗಿಲ್ಲ.

ಈಗ ಶಾಸಕ ಬಿ.ಕೆ. ಸಂಗಮೇಶ್ವರ ಅವರು ತಮ್ಮ ನೇತೃತ್ವದಲ್ಲಿ ಮೊದಲ ಬಾರಿ ಸ್ಪಷ್ಟ ಬಹುಮತದೊಂದಿಗೆ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.