ADVERTISEMENT

ಕಾಂಗ್ರೆಸ್, ಬಿಜೆಪಿ ತೀವ್ರ ಹಣಾಹಣಿ ನಿರೀಕ್ಷೆ

ಆವಿನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಉಪ ಚುನಾವಣೆ

ಎಂ.ರಾಘವೇಂದ್ರ
Published 4 ಅಕ್ಟೋಬರ್ 2018, 14:17 IST
Last Updated 4 ಅಕ್ಟೋಬರ್ 2018, 14:17 IST
ಗೋಪಾಲಕೃಷ್ಣ ಬೇಳೂರು
ಗೋಪಾಲಕೃಷ್ಣ ಬೇಳೂರು   

ಸಾಗರ : ತಾಲ್ಲೂಕಿನ ಆವಿನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಉಪ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ.

ಆವಿನಹಳ್ಳಿ ಕ್ಷೇತ್ರದ ಸದಸ್ಯರಾಗಿದ್ದ ಕಾಗೋಡು ಅಣ್ಣಪ್ಪ ಅವರ ನಿಧನದಿಂದಾಗಿ ಉಪ ಚುನಾವಣೆ ಬಂದಿದ್ದು ಕಾಂಗ್ರೆಸ್ ಪಕ್ಷಕ್ಕೆ ಈ ಸ್ಥಾನವನ್ನು ಉಳಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ.

ಆವಿನಹಳ್ಳಿ ಕ್ಷೇತ್ರದ ಫಲಿತಾಂಶ ಇಡೀ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಅಧಿಕಾರದ ಚುಕ್ಕಾಣಿಯನ್ನು ಮುಂದೆ ಹಿಡಿಯುವವರು ಯಾರು ಎಂಬುದನ್ನು ನಿರ್ಧರಿಸಲಿದೆ. ಹಾಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಆಡಳಿತ ಪಕ್ಷವಾಗಿದ್ದು ಈ ಮೈತ್ರಿಕೂಟ ಕೇವಲ ಒಂದು ಸ್ಥಾನದ ಹೆಚ್ಚಿನ ಬಲ ಹೊಂದಿತ್ತು. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಕಾಗೋಡು ಅಣ್ಣಪ್ಪ ಅವರ ನಿಧನದಿಂದಾಗಿ ಈಗ ಬಿಜೆಪಿ ಹಾಗೂ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದ ಸದಸ್ಯರ ಸಂಖ್ಯೆ ಸಮಬಲಕ್ಕೆ ಬಂದಂತಾಗಿದೆ. ಈ ಹಿನ್ನೆಲೆಯಲ್ಲಿ ಆವಿನಹಳ್ಳಿ ಕ್ಷೇತ್ರದ ಚುನಾವಣೆ ಹೆಚ್ಚು ಮಹತ್ವ ಪಡೆದಿದೆ.

ADVERTISEMENT

2016ನೇ ಸಾಲಿನಲ್ಲಿ ನಡೆದ ಚುನಾವಣೆಯಲ್ಲಿ ಆವಿನಹಳ್ಳಿ ಕ್ಷೇತ್ರದಿಂದ ಬಿಜೆಪಿಯ ಭೀಮನೇರಿ ಶಿವಪ್ಪ ಅವರನ್ನು ಅಲ್ಪಮತಗಳ ಅಂತರದಿಂದ ಸೋಲಿಸಿ ಕಾಂಗ್ರೆಸ್‌ನ ಕಾಗೋಡು ಅಣ್ಣಪ್ಪ ಆಯ್ಕೆಯಾಗಿದ್ದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಕಟ್ಟಾ ಅನುಯಾಯಿಯಾಗಿರುವ ಭೀಮನೇರಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೇಳೂರಿಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸೇರಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಬಾರಿ ಆವಿನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಭೀಮನೇರಿ ಶಿವಪ್ಪ ಅವರೇ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಆನಂದಪುರಂ ಕ್ಷೇತ್ರದಿಂದ ಈ ಹಿಂದೆ ಆಯ್ಕೆಯಾಗಿದ್ದ ಹೊನಗೋಡು ರತ್ನಾಕರ, ಮಾಜಿ ಸಂಸದ ಕೆ.ಜಿ. ಶಿವಪ್ಪ ಅವರ ಪುತ್ರ ಕೆ.ಎಸ್. ಪ್ರಶಾಂತ್, ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಅವರ ಹೆಸರುಗಳು ಕೂಡ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಹಾಗೂ ಗೋಪಾಲಕೃಷ್ಣ ಬೇಳೂರು ಒಟ್ಟಾಗಿ ಚುನಾವಣೆ ನಡೆಸಿದರೂ ಸಾಗರ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ನಂತರದ ಬೆಳವಣಿಗೆಯಲ್ಲಿ ಮಾಧ್ಯಮವೊಂದಕ್ಕೆ ಕಾಗೋಡು ‘ನನ್ನ ಸೋಲಿಗೆ ಬೇಳೂರು ಕಾಂಗ್ರೆಸ್‌ಗೆ ಬಂದಿದ್ದು ಕಾರಣ’ ಎಂದು ಹೇಳಿದ್ದು ಬೇಳೂರು ಮುನಿಸಿಗೆ ಕಾರಣವಾಗಿದೆ.

ಇದರಿಂದ ನೊಂದಿರುವ ಗೋಪಾಲಕೃಷ್ಣ ಬೇಳೂರು ವಿಧಾನಸಭೆ ಚುನಾವಣೆಯ ನಂತರ ಕ್ಷೇತ್ರದಿಂದ ದೂರವಿದ್ದು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿಲ್ಲ. ಕಾಗೋಡು ತಿಮ್ಮಪ್ಪ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದು, ಈಗ ಬಂದಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಾರಥ್ಯ ವಹಿಸುವ ಅವಕಾಶ ಬೇಳೂರಿಗೆ ಲಭ್ಯವಾಗಲಿದೆಯೆ ಎನ್ನುವುದು ಕುತೂಹಲಕರ ಸಂಗತಿಯಾಗಿದೆ.

ಕಾಗೋಡು ಹಾಗೂ ಬೇಳೂರು ನಡುವೆ ಯಾವುದೇ ಅಸಮಾಧಾನ ಏರ್ಪಡದೆ ಇದ್ದರೆ ಭೀಮನೇರಿ ಶಿವಪ್ಪ ಪರವಾಗಿ ಇವರಿಬ್ಬರೂ ಪ್ರಚಾರದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಹಾಗಾದಲ್ಲಿ ಮಾತ್ರ ಕಾಂಗ್ರೆಸ್ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಬಲ್ಲದು ಎಂಬ ಮಾತುಗಳು ಕೇಳಿ ಬರುತ್ತಿವೆ.

2016ರಲ್ಲಿ ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆದ ಸಂದರ್ಭದಲ್ಲಿ ಹಾಲಪ್ಪ ಹರತಾಳು ಅವರು ಈ ಕ್ಷೇತ್ರದ ರಾಜಕೀಯದಿಂದ ದೂರವೇ ಇದ್ದರು. ಈಗ ಅವರು ಇಲ್ಲಿನ ಶಾಸಕರಾಗಿದ್ದು ಆವಿನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಹೊಂದಿದ್ದಾರೆ. ಅವರ ಸಂಬಂಧಿಗಳು ಸೇರಿದಂತೆ ಹೆಚ್ಚಿನ ಬೆಂಬಲಿಗರು ಈ ಕ್ಷೇತ್ರದ ವ್ಯಾಪ್ತಿಗೆ ಬರುವುದು ಬಿಜೆಪಿಗೆ ಅನುಕೂಲಕರ ಅಂಶವಾಗಿದೆ.

ಬಿಜೆಪಿಯಿಂದ ಚೇತನ್ ರಾಜ್ ಕಣ್ಣೂರು ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಹಾಲಪ್ಪ ಅವರ ಸಹೋದರನ ಪುತ್ರ ಬಿ.ಟಿ. ರವೀಂದ್ರ ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಬೇಳೂರು ಹಾಗೂ ಹಾಲಪ್ಪ ನಡುವೆ ತೀವ್ರ ಪೈಪೋಟಿ ಏರ್ಪಟ್ಟಾಗ ಪ್ರಬಲ ವಿರೋಧದ ನಡುವೆಯೂ ಚೇತನ್ ರಾಜ್ ಕಣ್ಣೂರು, ಹಾಲಪ್ಪ ಅವರ ಪರವಾಗಿ ನಿಂತಿದ್ದರು. ಈ ಅಂಶ ಈಗ ಅವರ ನೆರವಿಗೆ ಬರುವ ಸಾಧ್ಯತೆ ಇದೆ.

ಹೀಗಾಗಿ ಬಿಜೆಪಿಯ ಚೇತನ್ ರಾಜ್ ಕಣ್ಣೂರು ಹಾಗೂ ಕಾಂಗ್ರೆಸ್‌ನ ಭೀಮನೇರಿ ಶಿವಪ್ಪ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ. ಕಾಂಗ್ರೆಸ್‌ಗೆ ಗಳಿಸಿರುವ ಸ್ಥಾನವನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದ್ದು, ಬಿಜೆಪಿಗೆ ಈ ಸ್ಥಾನವನ್ನು ಗೆಲ್ಲುವ ಮೂಲಕ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಆಡಳಿತ ಪಕ್ಷದ ಸ್ಥಾನಕ್ಕೆ ಬರುವ ತವಕವಿದೆ. ಮತ್ತೊಮ್ಮೆ ರಾಜಕೀಯ ಕಣದಲ್ಲಿ ಹಾಲಪ್ಪ ಹರತಾಳು ಹಾಗೂ ಗೋಪಾಲಕೃಷ್ಣ ಬೇಳೂರು ಅವರು ಮುಖಾಮುಖಿಯಾಗಲು ಅಖಾಡ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.