ADVERTISEMENT

ಶಿಕಾರಿಪುರ | ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:28 IST
Last Updated 28 ಜುಲೈ 2025, 7:28 IST
ಶಿಕಾರಿಪುರದಲ್ಲಿ ಶನಿವಾರ ನಡೆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಂ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
ಶಿಕಾರಿಪುರದಲ್ಲಿ ಶನಿವಾರ ನಡೆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಂ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ   

ಶಿಕಾರಿಪುರ: ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಬೇಕು.  ಅದಕ್ಕಾಗಿ ಈಗಿನಿಂದಲೇ ಪಕ್ಷದ ಸಂಘಟನೆ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳ ಹೇಳಿದರು.

ಪಟ್ಟಣದ ಭ್ರಾಂತೇಶ ಭವನದಲ್ಲಿ ಶನಿವಾರ ನಡೆದ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ನಮ್ಮ ಪಕ್ಷ ನೀಡಿರುವ ಗ್ಯಾರಂಟಿ ಕಾರ್ಯಕ್ರಮಗಳು ಬಡವರ ಬದುಕು ಉತ್ತಮಗೊಳ್ಳುವುದಕ್ಕೆ ಕಾರಣವಾಗಿವೆ. ಮಹಿಳೆಯರಿಗೆ ನೀಡಿರುವ ₹2,000 ಹಣ, ಉಚಿತ ಬಸ್ ಪ್ರಯಾಣ ಇಡೀ ರಾಜ್ಯದ ಆರ್ಥಿಕ ಚೇತರಿಗೆ ಕಾರಣವಾಗಿವೆ. ಕೇಂದ್ರ ಸರ್ಕಾರವೇ ರಾಜ್ಯದ ಆರ್ಥಿಕ ಸಾಧನೆ ಮೆಚ್ಚಿ ಪ್ರಶಸ್ತಿ ನೀಡಿದೆ. ರಾಜ್ಯದ ತಲಾ ಆದಾಯ ಇತರೆ ಎಲ್ಲ ರಾಜ್ಯಕ್ಕಿಂತ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಯಿಂದ ರಾಜ್ಯದ ಆರ್ಥಿಕ ಸ್ಥಿತಿ ತಳಮುಟ್ಟಿದೆ ಎನ್ನುವ ಬಿಜೆಪಿ ರಾಜ್ಯ ಮುಖಂಡರ ಆರೋಪಕ್ಕೆ ಕೇಂದ್ರವೇ ಉತ್ತರ ನೀಡಿದೆ. ಮಾತ್ರವಲ್ಲದೆ ದೆಹಲಿ, ಬಿಹಾರ ಚುನಾವಣೆಯಲ್ಲಿ ಬಿಜೆಪಿಯು ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದೆ. ಈ ಎಲ್ಲ ವಿಷಯ ಕುರಿತು ಪ್ರತಿ ಮನೆ ಮನೆಗೆ ತೆರಳಿ ಮಾಹಿತಿ ನೀಡುವ ಕೆಲಸ ಕಾರ್ಯಕರ್ತರು ಮಾಡಬೇಕಿದೆ’ ಎಂದರು.

ADVERTISEMENT

‘ಬಡವರ ಪರವಾದ ಆಡಳಿತ ನೀಡುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ. ಬಿಜೆಪಿ ಉಳ್ಳವರ ಪಕ್ಷವಾಗಿದ್ದು ದೊಡ್ಡ ವ್ಯಾಪಾರಿ ಸಂಸ್ಥೆಗಳಿಗೆ ಅನುಕೂಲ ಮಾಡುವುದು, ಖಾಸಗೀಕರಣ, ಭ್ರಷ್ಟಾಚಾರಕ್ಕೆ ಹೆಸರಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಪಕ್ಷ. ಮುಖಂಡರ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಅದಕ್ಕೆ ಗಮನ ನೀಡದೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಮುಖಂಡ ನಗರದ ಮಹಾದೇವಪ್ಪ ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಮುಖಂಡರಾದ ರುದ್ರಗೌಡ, ಡಿ.ಎಸ್.ಈಶ್ವರಪ್ಪ, ನವುಲೇಶಪ್ಪ, ಮಂಜಣ್ಣ ಮುಡಬಸಿದ್ಧಾಪುರ, ಉಮೇಶ್ ಮಾರವಳ್ಳಿ, ಧಾರವಾಡ ಸುರೇಶ್, ರೇಣುಕಸ್ವಾಮಿ ಇತರರಿದ್ದರು.

ಶಿಕಾರಿಪುರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಸಭೆ ನಡೆಸಿ ಒಗ್ಗಟ್ಟು ಪ್ರದರ್ಶಿಸಿ ಚರ್ಚೆ ನಡೆಸಿದರು

ಶನಿವಾರ ನಿಗದಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಅಧಿಕೃತವಾಗಿ ನಡೆಯದೇ ಬ್ಲಾಕ್ ಅಧ್ಯಕ್ಷ ಶಿವರಾಂ ಪಾರಿವಾಳ ಅವರ ಜನ್ಮದಿನ ಆಚರಣೆಗೆ ಮೀಸಲಾಯಿತು. ತನ್ಮೂಲಕ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಸಾಕ್ಷಿಯಾಯಿತು. ಕಾರ್ಯಕರ್ತರ ಮತ್ತೊಂದು ಗುಂಪು ಗುರುವಾರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿತ್ತು. ‘ಸಭೆ ಅಧಿಕೃತವಲ್ಲ ಅದಕ್ಕೆ ಜಿಲ್ಲಾ ಘಟಕದ ಅಧ್ಯಕ್ಷರ ಒಪ್ಪಿಗೆ ಇಲ್ಲ’ ಎನ್ನುವ ಸಂದೇಶವನ್ನು ಎಲ್ಲಡೆ ಪಸರಿಸುವ ಕಾರ್ಯ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.