ADVERTISEMENT

ಮಾ. 20ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಪಂಚಾಯತ್‌ಗೆ ಬೆಂಬಲದ ಮಹಾಪೂರ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ 7 ಸಾವಿರ ಜನ: ಆರ್.ಎಂ.ಮಂಜುನಾಥ ಗೌಡ ಮಾಹಿತಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 13:39 IST
Last Updated 17 ಮಾರ್ಚ್ 2021, 13:39 IST
ಶಿವಮೊಗ್ಗ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ರೈತ ಮುಖಂಡರು ರೈತ ಮಹಾ ಪಂಚಾಯತ್‌ನ ಪೋಸ್ಟ್‌ರ ಬಿಡುಗಡೆ ಮಾಡಿದರು
ಶಿವಮೊಗ್ಗ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ರೈತ ಮುಖಂಡರು ರೈತ ಮಹಾ ಪಂಚಾಯತ್‌ನ ಪೋಸ್ಟ್‌ರ ಬಿಡುಗಡೆ ಮಾಡಿದರು   

ಶಿವಮೊಗ್ಗ: ಬಿ.ಎಚ್.ರಸ್ತೆಯ ಸೈನ್ಸ್ ಮೈದಾನದಲ್ಲಿ ಮಾರ್ಚ್ 20ರಂದು ನಡೆಯುವ ರೈತರ ಮಹಾ ಪಂಚಾಯತ್‌ಗೆ ಹಲವು ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಬೆಂಬಲ ಘೋಷಿಸಿವೆ.

ರೈತ, ದಲಿತ, ಕಾರ್ಮಿಕ ಸಂಘಟನೆಗಳು ತಮ್ಮ ಒಳಗಣ ವೈಷಮ್ಯಗಳನ್ನು ಮರೆತು ಸಮಾವೇಶದ ಯಶಸ್ಸಿಗೆ ಶ್ರಮಿಸುತ್ತಿವೆ. ಕಾಂಗ್ರೆಸ್, ಜೆಡಿಎಸ್‌ ಸೇರಿದಂತೆ ವಿವಿಧ ಪಕ್ಷಗಳು ಬೆಂಬಲ ನೀಡಿವೆ.

2ನೇ ಸ್ವಾತಂತ್ರ್ಯ ಆಂದೋಲನ–ಕಾಂಗ್ರೆಸ್‌ ಬಣ್ಣನೆ: ‘ಶಿವಮೊಗ್ಗದಲ್ಲಿ ನಡೆಯುತ್ತಿರುವ ರೈತರ ಮಹಾ ಪಂಚಾಯತ್ ಎರಡನೇ ಸ್ವಾತಂತ್ರ್ಯ ಚಳವಳಿಯನ್ನು ನೆನಪಿಸುತ್ತಿದೆ. ರೈತರ ಹೋರಾಟಕ್ಕೆ ಪಕ್ಷ ಸಂಪೂರ್ಣ ಬೆಂಬಲ ನೀಡಿದೆ. ಸಮಾವೇಶದ ಯಶಸ್ಸಿಗೆ ಶ್ರಮಿಸಲಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ADVERTISEMENT

‘ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೇಶದ ರೈತರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಐತಿಹಾಸಿಕ ರೈತ ಮಹಾ ಪಂಚಾಯತ್‌ ನಡೆಯುತ್ತಿದೆ. ಸಮಾವೇಶಕ್ಕೆ ರೈತರು ಸೇರಿದಂತೆ ಪಕ್ಷಾತೀತವಾಗಿ ಲಕ್ಷಾಂತರ ಜನರು ಸೇರುವರು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೆಹಲಿಯಲ್ಲಿ ಆರಂಭವಾದ ಚಳವಳಿ ಶಿವಮೊಗ್ಗದಂತಹ ಸಮಾಜವಾದಿ ಹೋರಾಟದ ತವರಿಗೂ ವಿಸ್ತರಿಸಿದೆ. ಹಲವು ಸಮಸ್ಯೆಗಳು ಇಂದು ಮಲೆನಾಡನ್ನು ಬರಿದು ಮಾಡಿವೆ. ಬಗರ್‌ಹುಕುಂ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ. ರೈತರ ಆಶಯಗಳೆಲ್ಲವೂ ಮಣ್ಣು ಪಾಲಾಗುತ್ತಿವೆ. ಬಂಡವಾಳ ಶಾಹಿಗಳಿಗೆ ಈ ನೆಲ, ಜಲ ಒಪ್ಪಿಸುವ ಹುನ್ನಾರ ತಪ್ಪಿಸಬೇಕಾಗಿದೆ ಎಂದರು.

ದೇಶದಲ್ಲಿ ಈಗಾಗಲೇ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಆರಂಭವಾಗಿದೆ. ಆದರೂ ಕೇಂದ್ರ ಸರ್ಕಾರ ಇದರ ಬಗ್ಗೆ ಗಂಭೀರ ಕ್ರಮವನ್ನು ಕೈಗೊಂಡಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಬಣ್ಣದ ಮಾತುಗಳನ್ನು ಆಡುತ್ತಾ, ಪ್ರಧಾನಿ ನರೇಂದ್ರ ಮೋದಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ರೈತ ನಾಯಕರಾದ ಕಿಸಾನ್ ಮೋರ್ಚಾದ ರಾಕೇಶ್ ಟಿಕಾಯತ್, ಡಾ.ದರ್ಶನ್‌ಪಾಲ್, ಯದುವೀರ್‌ ಸಿಂಗ್ ಮತ್ತಿತರ ನಾಯಕರು ಜಿಲ್ಲೆಗೆ ಬರುತ್ತಿದ್ದಾರೆ. ಜಿಲ್ಲೆಯ ಹಾಗೂ ರಾಜ್ಯದ ಎಲ್ಲ ರೈತ ಮುಖಂಡರೂ ಭಾಗವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ನಡೆಯುತ್ತಿರುವ ಜನಾಕ್ರೋಶ ಸಭೆಗಳು ಯಶಸ್ವಿಯಾಗಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆಯ ಮಾಜಿ ಸದಸ್ಯ ಪಂಡಿತ್‌ ವಿ.ವಿಶ್ವನಾಥ್‌, ಜಿ.ಪಲ್ಲವಿ, ಚಂದ್ರಭೂಪಾಲ್, ರಾಮೇಗೌಡ, ಶ್ರೀನಿವಾಸ ಇದ್ದರು.

ತೀರ್ಥಹಳ್ಳಿ ಕ್ಷೇತ್ರದಿಂದ 7 ಸಾವಿರ ಜನ: ರೈತರ ಮಹಾ ಪಂಚಾಯತ್‌ಗೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ 7 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವರು ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಹೇಳಿದರು.

ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತರ ಬೃಹತ್ ಹೋರಾಟ ನೆಡೆಯುತ್ತಿದೆ. ತೀರ್ಥಹಳ್ಳಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಯಿಂದ ಒಂದೊಂದು ಬಸ್‌ ಮಾಡಿಕೊಂಡು ರೈತರು ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ತೀರ್ಥಹಳ್ಳಿ ತಾಲ್ಲೂಕು ಸಹ ಹೋರಾಟದ ನೆಲ. ಪಾದಯಾತ್ರೆ ಮೂಲಕ ರೈತರು ಗಮನ ಸೆಳೆದಿದ್ದಾರೆ. ಈಗ ‘ನಮ್ಮ ನಡೆ ಶಿವಮೊಗ್ಗದ ಕಡೆ’ಗೆ ಎಂಬ ಘೋಷಣೆಯೊಂದಿಗೆ ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಮಹಾ ಪಂಚಾಯತ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಕಾಯ್ದೆಗಳ ವಿರೋಧದ ಜತೆಗೆ ಸ್ವಾಮಿನಾಥನ್ ವರದಿ, ಕಸ್ತೂರಿ ರಂಗನ್ ವರದಿ, ಬಗರ್‌ಹುಕುಂ ಸಮಸ್ಯೆಗಳ ಕುರಿತೂ ಧ್ವನಿ ಎತ್ತಲಾಗುವುದು’ ಎಂದರು.

ಈ ನೆಲದ ಅನ್ನದಾತರು ನಿರ್ಣಾಯಕ ಹಂತದ ಹೋರಾಟಕ್ಕಿಳಿದಿದ್ದಾರೆ. ದೊಡ್ಡದೊಡ್ಡ ಬಂಡವಾಳ ಶಾಹಿಗಳನ್ನು ಓಲೈಸುವ ಸಲುವಾಗಿ ಬಿಜೆಪಿ ಸರ್ಕಾರ ಬಡ ರೈತರನ್ನು ನಿರ್ಲಕ್ಷಿಸುತ್ತ ಬರುತ್ತಿದೆ. ನೇಗಿಲ ಯೋಗಿ ಕಾಯಕ ತೊರೆದು, ಬೇಡಿಕೆ ಮುಂದಿಟ್ಟುಕೊಂಡು ಹೋರಾಟಕ್ಕಿಳಿಯುವುದು ತುಂಬಾ ವಿರಳ. ರೈತರ ಇಂತಹ ಮೌನವನ್ನು ದೌರ್ಬಲ್ಯ ಎಂದುಕೊಳ್ಳಬಾರದು. ಈಗಿನ ಕೇಂದ್ರ ಸರ್ಕಾರ ರೈತರ ಸ್ವಾಭಿಮಾನ, ಅವರ ಮಕ್ಕಳ ಭವಿಷ್ಯ, ಅವರ ಹಕ್ಕುಗಳನ್ನು ಶಾಶ್ವತವಾಗಿ ಕಾರ್ಪೊರೇಟ್ ಕಂಪನಿಗಳ ಅಡಿಯಾಳಾಗಿಸಲು ಮುಂದಾಗಿದೆ. ಇಂತಹ ಹುನ್ನಾರದ ವಿರುದ್ಧ ದೇಶದ ರೈತರು ಸಿಡಿದೆದ್ದಿದ್ದಾರೆ ಎಂದರು.

ರೈತರು ನೂರಕ್ಕೂ ಹೆಚ್ಚು ದಿನಗಳಿಂದ ದೆಹಲಿಯ ಕೊರೆಯುವ ಚಳಿ ಲೆಕ್ಕಿಸದೆ ಹೋರಾಟ ನಡೆಸುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗೆ ಕಿವಿಗೊಡಬೇಕಿದ್ದ ಸರ್ಕಾರ ದಮನಕಾರಿ ನೀತಿಗಳನ್ನು ಅನುಸರಿಸುತ್ತಾ ಅಸಡ್ಡೆಯಿಂದ ವರ್ತಿಸುತ್ತಿದೆ. ಈಗಾಗಲೇ 200ಕ್ಕೂ ಅಧಿಕ ರೈತರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಕಿವಿ, ಕಣ್ಣು ಇಲ್ಲದ ರೀತಿ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್.ಷಡಾಕ್ಷರಿ, ಮುಖಂಡರಾದ ಜಗದೀಶ್, ರಾಮಕೃಷ್ಣ, ಸುಂದರೇಶ್, ವಿನಾಯಕ್, ಆನಂದ್, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.