ತೀರ್ಥಹಳ್ಳಿ: ‘ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ವಿಶ್ವಾಸಕ್ಕೆ ಬಳಸಿಕೊಳ್ಳುತ್ತಿದೆ. ಬಹುಮತ ಇದ್ದಾಗ್ಯೂ ಈಗಾಗಲೇ 4 ಅಧ್ಯಕ್ಷರು, 3 ಉಪಾಧ್ಯಕ್ಷರು ಕಾರ್ಯ ನಿರ್ವಹಿಸಿದ್ದು ಇನ್ನೂ ಅಧ್ಯಕ್ಷ ಆಕಾಂಕ್ಷಿಗಳ ಸಂಖ್ಯೆ ಇದೆ. ಇದೆಂತಹ ಆಡಳಿತ’ ಎಂದು ಶಾಸಕ ಆರಗ ಜ್ಞಾನೇಂದ್ರ ಲೇವಡಿ ಮಾಡಿದರು.
‘ಪಟ್ಟಣ ಪಂಚಾಯಿತಿಯಲ್ಲಿ 22 ವರ್ಷಗಳ ಸುದೀರ್ಘ ಆಡಳಿತ ನಡೆಸಿದ್ದ ಬಿಜೆಪಿ ಎಂದಿಗೂ ಇಂತಹ ಬೀದಿ ಜಗಳ ಮಾಡಿಕೊಂಡಿಲ್ಲ. ಅಧ್ಯಕ್ಷ ಹುದ್ದೆಯ ಅವಿಶ್ವಾಸ ನಿರ್ಣಯ ಪ್ರಹಸನವನ್ನು ತಾಲ್ಲೂಕು ನೋಡುತ್ತಿದೆ. ಕಾಂಗ್ರೆಸ್ ದಾರಿದ್ರಕ್ಕೆ ಇದೊಂದು ಉತ್ತಮ ಉದಾಹರಣೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಮಾಜಿ ಶಾಸಕರು ತಮ್ಮ ಪಕ್ಷದ ಭಿನ್ನಮತದ ಬಗ್ಗೆ ಮಾತನಾಡುವ ಬದಲು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರ ಲಾಜಿಕ್ ಏನು ಅಂತ ಗೊತ್ತಾಗುತ್ತಿಲ್ಲ. ಆಡಳಿತದಲ್ಲಿ ಬೀದಿ ಜಗಳ ಮಾಡಿಕೊಂಡು ಅಭಿವೃದ್ಧಿಯನ್ನು ಮೂಲೆಗೆ ಸರಿಸುತ್ತಿದ್ದಾರೆ. ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರು ಬಿಡಿಗಾಸು ಅಭಿವೃದ್ಧಿಗೆ ತರುವ ಪ್ರಯತ್ನ ಮಾಡಿಲ್ಲ ಎಂದು ದೂರಿದರು.
ಇತಿಹಾಸದಲ್ಲಿ ಇಂತಹ ಲಂಚಗುಳಿತನ, ಭ್ರಷ್ಟಾಚಾರದ ಆಡಳಿತ ಪಟ್ಟಣ ಪಂಚಾಯಿತಿಯಲ್ಲಿ ನಡೆದಿಲ್ಲ. ಗೃಹ ನಿರ್ಮಾಣಕ್ಕೆ ನಿರಪೇಕ್ಷಣಾ ಪತ್ರ ನೀಡುವಾಗ ಸುಲಿಗೆ ಮಾಡುತ್ತಿದ್ದಾರೆ. ಮುಖ್ಯಾಧಿಕಾರಿಗೆ ಪ್ರಶ್ನೆ ಕೇಳಿದ್ದೇನೆ ಎಂಬ ಕಾರಣಕ್ಕೆ ನನ್ನ ವಿರುದ್ದವೇ ಖಂಡನಾ ನಿರ್ಣಯ ಮಾಡಲು ಹೊರಟಿದ್ದರು. ಅಸಮಾದಾನಿತರು ಬಿಜೆಪಿ ಸಂಪರ್ಕಿಸುವ ಪ್ರಯತ್ನ ಮಾಡಿದ್ದು ಅದು ನಿಮ್ಮ ಹಣೆಬರಹ ಎಂದು ವಾಪಾಸ್ಸು ಕಳಿಸಿದ್ದೇನೆ ಎಂದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯರೊಬ್ಬರು ಸ್ತ್ರೀರೋಗ ತಜ್ಞ ಡಾ.ಅರವಿಂದ್ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾರೆ. ವೈದ್ಯರು ಯಾವುದೇ ಕ್ಷಣದಲ್ಲಿ ಜೈಲಿಗೆ ಹೋಗಬಹುದು. ಉಳಿದ ಸಿಬ್ಬಂದಿಗಳು ನಾವು ಕೆಲಸ ಮಾಡುವುದಿಲ್ಲ ಎಂದು ಹೆದರುತ್ತಿದ್ದಾರೆ. ರಾಮೇಶ್ವರ ದೇವರ ರಥದ ಚಕ್ರ ದೇವಸ್ಥಾನದ ಆವರಣದಲ್ಲಿ ಮಾಡುವ ಬದಲು ಮೇಳಿಗೆ ಖಾಸಗಿ ವ್ಯಕ್ತಿಯ ಜಾಗದಲ್ಲಿ ಯಾಕೆ ಮಾಡಬೇಕು. ಇವುಗಳ ವಿರುದ್ಧ ಮಾಜಿ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಜ್ಯೋತಿ, ಯತಿರಾಜ್, ರವೀಶ್ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.