ADVERTISEMENT

ಕೆರೆ ಪುನಶ್ಚೇತನ ಪ್ರಶ್ನಿಸಿದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:39 IST
Last Updated 26 ಜನವರಿ 2023, 5:39 IST
ಸಾಗರದಲ್ಲಿ ಗಣಪತಿ ಕೆರೆ ಪುನಶ್ಚೇತನ ಕಾಮಗಾರಿ ಸಹಿಸದೆ ಕಾಂಗ್ರೆಸ್ ಮುಖಂಡರ ಹತಾಶೆಯಿಂದ ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಸ್ಥಳೀಯ ಘಟಕ ಬುಧವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು ಮಾತನಾಡಿದರು.
ಸಾಗರದಲ್ಲಿ ಗಣಪತಿ ಕೆರೆ ಪುನಶ್ಚೇತನ ಕಾಮಗಾರಿ ಸಹಿಸದೆ ಕಾಂಗ್ರೆಸ್ ಮುಖಂಡರ ಹತಾಶೆಯಿಂದ ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಸ್ಥಳೀಯ ಘಟಕ ಬುಧವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು ಮಾತನಾಡಿದರು.   

ಸಾಗರ: ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆ ಪುನಶ್ಚೇತನ ಕಾಮಗಾರಿ ಸಹಿಸದೇ ಕಾಂಗ್ರೆಸ್ ಮುಖಂಡರು ಹತಾಶೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಸ್ಥಳೀಯ ಘಟಕದ ಪ್ರಮುಖರು ಬುಧವಾರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಮಾರಿಕಾಂಬಾ ದೇವಸ್ಥಾನದ ಎದುರು ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಶಾಸಕ ಎಚ್. ಹಾಲಪ್ಪ ಹರತಾಳು, ‘ಈ ಹಿಂದೆ ಮಲ, ಮೂತ್ರಗಳಿಂದ ತುಂಬಿ ಹೋಗಿದ್ದ ಗಣಪತಿ ಕೆರೆಗೆ ತಡೆಗೋಡೆ ನಿರ್ಮಿಸುವ ಮೂಲಕ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದನ್ನು ಸಹಿಸದ ಸ್ಥಳೀಯ ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಅಭಿವೃದ್ಧಿಯ ಕುರಿತು ಸಾಮಾನ್ಯ ಜ್ಞಾನವೂ ಇಲ್ಲ. ಎರಡು ಬಾರಿ ಶಾಸಕರಾಗಿದ್ದ ಅವರು ಒಮ್ಮೆಯೂ ಶಾಸನ ಸಭೆಯಲ್ಲಿ ಸಾಗರ ಕ್ಷೇತ್ರದ ಕುರಿತು ಧ್ವನಿಯನ್ನೇ ಎತ್ತಿಲ್ಲ. ಇಂತವರನ್ನು ಜೊತೆಗಿಟ್ಟುಕೊಂಡು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಆರ್. ಜಯಂತ್ ಹಾಗೂ ವಿದ್ಯಾವಂತೆಯಾಗಿರುವ ಡಾ.ರಾಜನಂದಿನಿ ಕಾಗೋಡು ಪ್ರತಿಭಟನೆಗೆ ಇಳಿದಿರುವುದನ್ನು ನೋಡಿದರೆ ಅವರ ಬಗ್ಗೆ ಅಯ್ಯೋ ಪಾಪ ಅನಿಸುತ್ತಿದೆ’ ಎಂದು ಕುಟುಕಿದರು.

ADVERTISEMENT

‘ಬೇಳೂರು ಶಾಸಕರಾಗಿದ್ದಾಗ ರೆಸಾರ್ಟ್ ಯಾತ್ರೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ನನ್ನನ್ನು ಟೀಕಿಸಿದರೆ ಕಾಂಗ್ರೆಸ್‌ನಲ್ಲಿ ಪ್ರಾಮುಖ್ಯತೆ ಸಿಗುತ್ತದೆ ಎಂದು ಅವರಿಗೆ ಯಾರೋ ಹೇಳಿಕೊಟ್ಟಿದ್ದಾರೆ. ಆದರೆ ಈಗಾಗಲೇ ಕಾಂಗ್ರೆಸ್‌ನಲ್ಲಿ ಅವರಿಗೆ ಟಿಕೆಟ್ ಕೊಡಬಾರದು ಎಂದು ತೀರ್ಮಾನವಾಗಿದೆ. ಈ ಬಗ್ಗೆ ಘೋಷಣೆಯಾಗುತ್ತಿರುವಂತೆ ರಾಜಕೀಯವಾಗಿ ಬೇಳೂರು ಅಪ್ರಸ್ತುತರಾಗುತ್ತಾರೆ’ ಎಂದು ಅವರು ಹೇಳಿದರು.

‘ಗಣಪತಿ ಕೆರೆ ಅಭಿವೃದ್ಧಿ ಕಾಮಗಾರಿ ಚಾಲ್ತಿಯಲ್ಲಿದೆ. ಕಾಮಗಾರಿ ನಡೆಯುವಾಗ ಕೊಳಚೆ ನೀರು ಕೆರೆಯ ನೀರಿಗೆ ಸೇರುವುದು, ಕೆರೆಯ ನೀರು ಕೊಳಚೆ ನೀರಿನ ಕಡೆ ಹರಿಯುವುದು ನಡೆಯುತ್ತಲೆ ಇರುತ್ತದೆ. ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡ ನಂತರ ಲೋಪವಾಗಿದ್ದರೆ ಪ್ರಶ್ನಿಸಬೇಕು ಎಂಬ ಸಾಮಾನ್ಯ ತಿಳಿವಳಿಕೆ ಕಾಂಗ್ರೆಸ್ ಮುಖಂಡರಿಗೆ ಇಲ್ಲವಾಗಿದೆ’ ಎಂದು ಅವರು ಟೀಕಿಸಿದರು.

‘ಗಣಪತಿ ಕೆರೆಯ ಸಮೀಪ ಹಮ್ಮಿಕೊಂಡಿರುವ ಸಾಗರಾರತಿ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡುವ ಉದ್ದೇಶದಿಂದಲೇ ಕಾಂಗ್ರೆಸ್ಸಿಗರು ಕೆರೆಯ ಬಳಿ ಪ್ರತಿಭಟನೆ ಮಾಡಿದ್ದಾರೆ. ನಾನು ಒಳ್ಳೆಯ ಮನಸ್ಸಿನಿಂದ ಕೆರೆ ಅಭಿವೃದ್ಧಿಗೆ ಮುಂದಾಗಿದ್ದೇನೆ. ಒಂದು ವೇಳೆ ಈ ವಿಷಯದಲ್ಲಿ ನಾನು ತಪ್ಪು ಮಾಡಿದ್ದರೆ ಆ ಗಣಪತಿ ದೇವರು ನನಗೆ ಶಿಕ್ಷೆ ನೀಡುತ್ತದೆ’ ಎಂದು ಹೇಳಿದರು.

ಬಿಜೆಪಿಯ ಪ್ರಮುಖರಾದ ಕೆ.ಆರ್. ಗಣೇಶ್ ಪ್ರಸಾದ್, ಮಧುರಾ ಶಿವಾನಂದ್, ವಿ. ಮಹೇಶ್, ಸಂತೋಷ್ ಆರ್. ಶೇಟ್, ಅರವಿಂದ ರಾಯ್ಕರ್, ಮೈತ್ರಿ ಪಾಟೀಲ್, ದೇವೇಂದ್ರಪ್ಪ, ಅರುಣ್ ಕುಗ್ವೆ, ಪ್ರೇಮಾ ಕಿರಣ್ ಸಿಂಗ್, ಸತೀಶ್ ಬಾಬು, ಆರ್.ಶ್ರೀನಿವಾಸ್, ಕಲಸೆ ಚಂದ್ರಪ್ಪ, ನಾಗರಾಜ್ ಪೈ, ಯು.ಎಚ್. ರಾಮಪ್ಪ ಇದ್ದರು.

‘ಮದ್ಯ ಮಾರಾಟ ಮಳಿಗೆ ಪರವಾನಗಿ ಸಾಬೀತುಪಡಿಸಿದರೆ ನಿವೃತ್ತಿ’
ನಾನು ಶಾಸಕನಾದ ನಂತರ ಸಾಗರ ತಾಲ್ಲೂಕಿನಲ್ಲಿ ಯಾವುದೇ ಮದ್ಯ ಮಾರಾಟ ಮಳಿಗೆಗೆ ಹೊಸದಾಗಿ ಅನುಮತಿ ನೀಡಿಲ್ಲ. ಆದಾಗ್ಯೂ ಸಾಗರವನ್ನು ಕುಡುಕರ ಸಾಮ್ರಾಜ್ಯವನ್ನಾಗಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ. ನನ್ನ ಅವಧಿಯಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆಗೆ ಅನುಮತಿ ನೀಡಿರುವುದನ್ನು ಕಾಂಗ್ರೆಸ್ಸಿಗರು ಸಾಬೀತುಪಡಿಸಿದರೆ ರಾಜಕೀಯವಾಗಿ ನಾನು ನಿವೃತ್ತಿಯಾಗುತ್ತೇನೆ ಎಂದು ಶಾಸಕ ಹಾಲಪ್ಪ ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.