ತೀರ್ಥಹಳ್ಳಿ: ‘ಶಾಸಕ ಆರಗ ಜ್ಞಾನೇಂದ್ರ ತವರೂರು ಗುಡ್ಡೇಕೊಪ್ಪದ ಪ್ರೌಢಶಾಲೆಯು ಅರಣ್ಯ ಇಲಾಖೆ ಪ್ರದೇಶದಲ್ಲಿದೆ. ಸರ್ಕಾರಿ ಜೆ.ಸಿ. ಆಸ್ಪತ್ರೆಯು ಸೊಪ್ಪಿನಬೆಟ್ಟದಲ್ಲಿದೆ. ಗೃಹ ಸಚಿವರಾಗಿದ್ದ ಅವರು ಸರ್ಕಾರಿ ಆಸ್ತಿಗಳ ದಾಖಲೆಗಳನ್ನು ಯಾಕೆ ಸರಿಪಡಿಸಲಿಲ್ಲ’ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಪ್ರಶ್ನಿಸಿದರು.
ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಶಿಷ್ಟಾಚಾರ ಉಲ್ಲಂಘನೆ ಆರೋಪದಡಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
‘ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಸ್ವೆಟರ್ ವಿತರಿಸುವಾಗ ಶಿಕ್ಷಣ ಸಚಿವರು, ಎಂಎಡಿಬಿ ಅಧ್ಯಕ್ಷರು, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರನ್ನು ಆಹ್ವಾನಿಸಿಲ್ಲ’ ಎಂದು ದೂರಿದರು.
‘ತಾಲ್ಲೂಕಿನಲ್ಲಿ ಶ್ರೀರಾಮಚಂದ್ರ ದೇವರ ಹೆಸರಿನಲ್ಲಿ ಇದ್ದ 10 ಎಕರೆ ಖಾತೆ ಜಮೀನು ಶಾಸಕರ ಪುತ್ರನ ಹೆಸರಿಗೆ ಜಂಟಿ ಖಾತೆಯಾಗಿದೆ. ಜಂಟಿ ಖಾತೆ ಹೆಚ್ಚುದಿನ ಇಟ್ಟುಕೊಳ್ಳಲು ಆಗುವುದಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸಾರಿಗೆ ಮತು ಹೆದ್ದಾರಿ ಸಚಿವರಿಗೆ ಈಚೆಗೆ ಹೆದ್ದಾರಿ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದಾರೆ’ ಎಂದು ಆರೋಪಿಸಿದರು.
‘ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಪ್ರಶ್ನಿಸುವ ಶಾಸಕರು, ವಿದ್ಯಾರ್ಥಿಗಳಿಗೆ ಸ್ವೆಟರ್ ಮತ್ತು ಬ್ಯಾಗ್ ಅನ್ನು ಅವರ ಅಪ್ಪನ ಮನೆಯ ಹಣದಿಂದ ನೀಡಿದ್ದಾರಾ. ಸರ್ಕಾರದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಬೇಕೆಂಬ ನಿಯಮ ತಿಳಿದಿಲ್ಲವೇ. ಕರ್ತವ್ಯದ ಲೋಪ ಹಿನ್ನೆಲೆಯಲ್ಲಿ ಶಿಕ್ಷಣಾಧಿಕಾರಿಯನ್ನು ವರ್ಗಾವಣೆ ಮಾಡಬೇಕು’ ಎಂದು ಕಾಂಗ್ರೆಸ್ ವಕ್ತಾರ ಡಿ.ಎಸ್.ವಿಶ್ವನಾಥ ಶೆಟ್ಟಿ ಒತ್ತಾಯಿಸಿದರು.
‘ರಂಜದಕಟ್ಟೆ ಶಾಲಾ ಆವರಣದಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿರುವ ಬಗ್ಗೆ ಶಿಕ್ಷಣಾಧಿಕಾರಿಗೆ ದೂರು ನೀಡಿದರೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾರ್ಮಿಕ ಇಲಾಖೆಯಿಂದ ಕೊಡಬೇಕಾದ ಸಾಮಗ್ರಿಗಳನ್ನು ಜೆರಾಕ್ಸ್ ಅಂಗಡಿ ಹಂಚುತ್ತಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ ಆರೋಪಿಸಿದರು.
ಡಿಡಿಪಿಐ ಮಂಜುನಾಥ್ ಮನವಿ ಸ್ವೀಕರಿಸಿದರು.
ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮುಡುಬ ರಾಘವೇಂದ್ರ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗ್ಡೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ, ಸದಸ್ಯೆ ಶಬನಮ್, ಮುಖಂಡರಾದ ಬಿ.ಗಣಪತಿ, ಮಂಜುಳಾ, ಬಿ.ಆರ್.ರಾಘವೇಂದ್ರ ಶೆಟ್ಟಿ, ಟಿ.ಎಲ್.ಸುಂದರೇಶ್, ಹಾರೋಗೊಳಿಗೆ ಪದ್ಮನಾಭ, ಜೀನಾ ವಿಕ್ಟರ್, ಪೂರ್ಣೇಶ್ ಕೆಳಕೆರೆ, ಶ್ರೇಯಸ್ ರಾವ್, ರವಿ ಹೊಸ್ಕೆರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.