ADVERTISEMENT

ಚೀನಾ ಕೊರೊನಾ ವೈರಸ್‌ ದೇಶದಲ್ಲಿ ಹಬ್ಬಿಸಿದ್ದು ಕಾಂಗ್ರೆಸ್‌: ಈಶ್ವರಪ್ಪ ಆರೋಪ

ಸಿದ್ದರಾಮಯ್ಯಗೆ ಬಹಿರಂಗ ಪತ್ರ

​ಪ್ರಜಾವಾಣಿ ವಾರ್ತೆ
Published 22 ಮೇ 2021, 11:37 IST
Last Updated 22 ಮೇ 2021, 11:37 IST
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ    

ಶಿವಮೊಗ್ಗ: ಭಾರತಕ್ಕೆ ಚೀನಾ ಕೋವಿಡ್‌ ನೀಡಿದೆ. ಕಾಂಗ್ರೆಸ್ ದೇಶದ ಎಲ್ಲೆಡೆ ಅದನ್ನು ಹಬ್ಬಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಆರೋಪಿಸಿದ್ದಾರೆ.

‘ತಾವೂ ಸೇರಿದಂತೆ ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಜಯರಾಮ್ ರಮೇಶ್, ವೇಣುಗೋಪಾಲ್, ಮನಿಷ್ ತಿವಾರಿ ಮತ್ತಿತರ ಕಾಂಗ್ರೆಸ್ ಮುಖಂಡರು ಲಸಿಕೆಗೆ ಕುರಿತು ಆರಂಭದಲ್ಲೇ ಅಪ ಪ್ರಚಾರ ಮಾಡಿದಿರಿ. ಮೊದಲು ಪ್ರಧಾನಿ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡರೇ ಪುರುಷತ್ವ ನಾಶವಾಗುತ್ತದೆ. ಮುಸ್ಲಿಮರ ಸಂತತಿ ತಡೆಯಲು ಬಳಸುತ್ತಿದ್ದಾರೆ ಎಂದೆಲ್ಲ ಜನರಿಗೆ ತಪ್ಪು ಸಂದೇಶ ನೀಡಿದ ಪರಿಣಾಮ ಜನರು ಹಿಂದೇಟು ಹಾಕಿದ್ದರು. ಇದು ಸೋಂಕು ಹರಡಲು ಪ್ರಮುಖ ಕಾರಣ’ ಎಂದು ದೂರಿದ್ದಾರೆ.

‘ಕೋವಿಡ್ ವಿಷಯದಲ್ಲಿ ಕಾಂಗ್ರೆಸ್ ಸಲ್ಲದ ರಾಜಕಾರಣ ಮಾಡುತ್ತಿದೆ. ಬಿಜೆಪಿ, ಕೇಂದ್ರ, ರಾಜ್ಯ ಸರ್ಕಾರಗಳು ಕೋವಿಡ್‌ ನಿಯಂತ್ರಿಸಲು ಶ್ರಮಿಸುತ್ತಿದ್ದರೆ. ಕಾಂಗ್ರೆಸ್‌ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಪಪ್ರಚಾರ ಮಾಡುತ್ತಾ, ಸಹಕಾರ ನೀಡದ ಪರಿಣಾಮ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ’ ಎಂದು ಕುಟುಕಿದ್ದಾರೆ.

ADVERTISEMENT

‘ಸಿದ್ದರಾಮಯ್ಯ ಅವರೇ ಈಗ ಹಕ್ಕುಚ್ಯುತಿ ಮಂಡನೆಯ ಪ್ರಶ್ನೆ ಎತ್ತಿದ್ದೀರಿ. ಸಂವಿಧಾನ ಆಧಾರ ಇದೆ ಎಂದು ಹೇಳುತ್ತಿದ್ದೀರಾ. ತಾವೇ ಮುಖ್ಯಮಂತ್ರಿಯಾಗಿದ್ದಾಗ ನಾನು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕನಾಗಿದ್ದೆ. ಆಗ ರಾಜ್ಯದಲ್ಲಿ ಬರಗಾಲವಿತ್ತು. ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲು ನಿರ್ಧರಿಸಿದ್ದೆ. ಆಗ ವಿರೋಧ ಪಕ್ಷದ ನಾಯಕರಿಗೆ ಸಭೆ ನಡೆಸಲು ಸರ್ಕಾರದ ಅನುಮತಿ ಇಲ್ಲ ಎಂದು ಅಧಿಕಾರಿಗಳು ಉತ್ತರ ನೀಡಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಒಂದು ಸಂವಿಧಾನ, ಬಿಜೆಪಿ ಸರ್ಕಾರಕ್ಕೆ ಮತ್ತೊಂದು ಸಂವಿಧಾನ ಇದೆಯೇ? ನಾನು ಪ್ರವಾಸಿ ಮಂದಿರಗಳಲ್ಲಿ ಕುಳಿತು ಬರಗಾಲದ ಪರಿಸ್ಥಿತಿಯ ಮಾಹಿತಿ ಪಡೆದಿದ್ದೆ. ನಿಮಗೂ ಪತ್ರ ಬರೆದಿದ್ದೆ. ನಿಮ್ಮಿಂದ ಉತ್ತರ ಬಂದಿರಲಿಲ್ಲ. ಈಗ ಈ ರೀತಿ ಹೇಳುತ್ತಿರುವುದು ಸರಿಯೇ’ ಎಂದು ಪ್ರಶ್ನಿಸಿದ್ದಾರೆ.

‘ತಮ್ಮ ಹುಳುಕು ಮುಚ್ಚಿಕೊಳ್ಳಲು ಸರ್ಕಾರ, ಬಿಜೆಪಿ ಚೈತನ್ಯ ಕಳೆದುಕೊಂಡಿದೆ ಎಂದು ಅಪ ಪ್ರಚಾರ ಮಾಡುತ್ತಿರುವಿರಿ. ಕೋವಿಡ್‌ನ ಸಂಕಷ್ಟದ ಸಮಯದಲ್ಲಿ ಸಹಕಾರ ನೀಡಬೇಕು. ರಾಜಕಾರಣ ಮಾಡುವುದು ಸರಿಯಲ್ಲ. ವಿರೋಧ ಪಕ್ಷದ ನಾಯಕರಾಗಿ ದೇಶದ ಸಂಕಷ್ಟ ಪರಿಸ್ಥಿತಿ ಅರಿತು ರಚನಾತ್ಮಕ ಸಲಹೆ ನೀಡಬೇಕು.ರಾಜಕೀಯ ಲಾಭಕ್ಕಾಗಿ ಅನಗತ್ಯ ಟೀಕೆ ಮಾಡಬೇಡಿ. ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಕೋವಿಡ್ ಲಸಿಕೆ ತಲುಪಿಸಲು ಸರ್ಕಾರ ವಿಫಲವಾಗಿದೆ ಎಂದು ತಾವು ರಾಜಸ್ಥಾನ, ಪಂಜಾಬ್ ರಾಜ್ಯಗಳ ಕುರಿತು ಆಪಾದಿಸುತ್ತಿರುವಿರಾ’ ಎಂದು ಛೇಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.