ಕೊಡಚಾದ್ರಿ
ಹೊಸನಗರ: ಇಲ್ಲಿನ ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನದಲ್ಲಿರುವ ಕೊಡಚಾದ್ರಿ ಬೆಟ್ಟದಲ್ಲಿ ರೋಪ್‌ವೇ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಿದ್ಧತೆ ನಡೆಸಿರುವ ಕ್ರಮಕ್ಕೆ ತಾಲ್ಲೂಕಿನ ಪರಿಸರಾಸಕ್ತರಿಂದ ವಿರೋಧ ವ್ಯಕ್ತವಾಗಿದೆ.
ಕೊಡಚಾದ್ರಿ ಬೆಟ್ಟವಿರುವ ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನ ಪ್ರದೇಶ ಪಶ್ಚಿಮ ಘಟ್ಟದಲ್ಲೇ ಅತಿ ಸೂಕ್ಷ್ಮ ಅರಣ್ಯ ಪ್ರದೇಶವಾಗಿದೆ. ಶೋಲಾ ಅರಣ್ಯ ಪ್ರದೇಶವಾದ ಇಲ್ಲಿ ಜೀವ ವೈವಿಧ್ಯತೆ ಅರಳುವಂತಹ ಸಹಜ ಕಾಡು ಇದೆ. ಅದರಲ್ಲೂ ಮುಖ್ಯವಾಗಿ ಕುಟಚ ಎಂಬ ಔಷಧೀಯ ಸಸ್ಯ ಸಂಕುಲವಿದೆ. ಇದು ತೀರಾ ಅಪರೂಪದ ಪ್ರಬೇಧವಾಗಿದೆ. ಅಭಿವೃದ್ಧಿ ನೆಪದಲ್ಲಿ ಕೇಬಲ್ ಕಾರು, ರೋಪ್‌ವೇ ನಿರ್ಮಾಣವಾದಲ್ಲಿ ಇಲ್ಲಿನ ಜೀವ ವೈವಿಧ್ಯತೆಗೆ ಧಕ್ಕೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಪರಿಸರ ಹೋರಾಟಗಾರ ಚಕ್ರವಾಕ ಸುಬ್ರಹ್ಮಣ್ಯ ಆತಂಕ ವ್ಯಕ್ತಪಡಿಸುತ್ತಾರೆ.
‘ಅಷ್ಟಕ್ಕೂ ಯಾರೂ ಇಲ್ಲಿ ಕೇಬಲ್ ಕಾರ್ ಯೋಜನೆ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿಲ್ಲ. ಕೆಲ ಪಟ್ಟಭದ್ರರು ಸ್ವಹಿತಾಸಕ್ತಿಗಾಗಿ ಯೋಜನೆ ಜಾರಿಗೆ ಉತ್ಸುಕತೆ ತೋರುತ್ತಿದ್ದಾರೆ. ಬಹುಕೋಟಿ ಹಣವನ್ನು ದುಂದುವೆಚ್ಚ ಮಾಡಲಿದ್ದಾರೆ. ಯೋಜನೆ ಪ್ರಕಾರ, 28 ಎಕರೆ ಕಾಡು ನಾಶವಾಗುವುದಿಲ್ಲ. ಬದಲಿಗೆ ನೂರಾರು ಎಕರೆ ಸಮೃದ್ಧ ಅರಣ್ಯ ಪ್ರದೇಶ ಹನನವಾಗಲಿದೆ. ಅಪರೂಪದ ಸಸ್ಯ ಸಂಕುಲ ಅವನತಿ ಹಾದಿ ಹಿಡಿಯುತ್ತವೆ. ಅದರಿಂದ ಪ್ರಾಕೃತಿಕ ಅಸಮತೋಲನ ಸೃಷ್ಟಿಯಾಗುತ್ತದೆ. ಯಾವುದೇ ಕಾರಣಕ್ಕೂ ಪ್ರಕೃತಿ ಮೇಲಿನ ಆಕ್ರಮಣ ಸಲ್ಲದು’ ಎಂದು ಅವರು ಹೇಳುತ್ತಾರೆ.
ಚಾರಣದಿಂದ ಆರೋಗ್ಯ: ಕೊಡಚಾದ್ರಿ ಗಿರಿ ಶಿಖರದ ಸೊಬಗು ಸವಿಯಲು ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿನ ಬೆಟ್ಟವನ್ನು ಚಾರಣ ಗೈಯುವುದು ಪರಿಸರ ಪ್ರೇಮಿಗಳಿಗೆ ಆಸಕ್ತಿಕರ ವಿಷಯ. ಚಾರಣ ಮಾಡುವುದರಿಂದ ಪ್ರವಾಸಿಗರ ಆರೋಗ್ಯ ವೃದ್ಧಿಯಾಗುತ್ತದೆ. ಅಶಕ್ತರಿಗೆ ಓಡಾಡಲು ಜೀಪ್ ವಾಹನದ ವ್ಯವಸ್ಥೆಯೂ ಇಲ್ಲಿದೆ. ರೋಪ್ ವೇ ನಿರ್ಮಾಣದಿಂದ ಚಾರಣ ವ್ಯವಸ್ಥೆಗೆ ಹಿನ್ನಡೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮನೋಲ್ಲಾಸವೇ ಇಲ್ಲ: ಪ್ರಕೃತಿ ಸವಿ ಸವಿಯಲು ಚಾರಣ ಸುಲಭದ ದಾರಿಯಾಗಿದೆ. ಇಲ್ಲಿನ ಸಮೃದ್ಧ ಕಾಡು, ರಮಣೀಯ ಹಸಿರಿನ ಸೊಬಗು, ಜೀವ ಸಂಕುಲಗಳನ್ನು ಕಣ್ತುಂಬಿಕೊಳ್ಳಲು ಕೇಬಲ್ ಕಾರ್ ಪಯಣದಿಂದ ಸಾಧ್ಯವಿಲ್ಲ. ರೋಪ್ ವೇ ಪ್ರಯಾಣದಿಂದ ಯಾವ ಮನೋಲ್ಲಾಸವೂ ಲಭಿಸದು. ಯಾಂತ್ರಿಕ ಪ್ರವಾಸವಷ್ಟೇ ನಮ್ಮದಾಗುತ್ತದೆ. ರೋಪ್ ವೇ ಮಲೆನಾಡಿಗೆ ಸರಿ ಹೊಂದುವುದಿಲ್ಲ’ ಎಂದು ಸುಬ್ರಹ್ಮಣ್ಯ ವಿವರಿಸಿದ್ದಾರೆ.
‘ಪರಿಸರ ನಾಶಕ್ಕೆ ಬರೆದ ಮರಣ ಶಾಸನ’
‘ಕೊಲ್ಲೂರು ಮತ್ತು ಕೊಡಚಾದ್ರಿ ಗಿರಿ ನಡುವೆ ಕೇಬಲ್ ಕಾರ್ ಯೋಜನೆ ಅವೈಜ್ಞಾನಿಕವಾಗಿದೆ. ಈಗ ಹೇಳಿದಂತೆ ಯೋಜನೆ ಜಾರಿಗೆ ₹375 ಕೋಟಿ ವ್ಯಯಿಸಲಾಗುತ್ತಿದೆ. ಆದರೆ ಸಂಪೂರ್ಣವಾಗುವ ಹೊತ್ತಿಗೆ ಮತ್ತಷ್ಟು ಕೋಟಿ ಹಣ ವ್ಯಯವಾಗುತ್ತದೆ. ಯೋಜನೆಯಿಂದ ಗಿರಿಯ ಸೌಂದರ್ಯಕ್ಕೆ ಧಕ್ಕೆಯಾಗುವುದು ಖಚಿತ. ಈ ಯೋಜನೆ ಗಿರಿಯ ಸುಂದರ ಸಮೃದ್ಧ ಪರಿಸರ ನಾಶಕ್ಕೆ ಬರೆದ ಮರಣ ಶಾಸನ’ ಎಂಬುದು ಪರಿಸರ ಪ್ರೇಮಿ ಮಂಜುನಾಥ ಬ್ಯಾಣದ್ ಅವರ ವಾದ.
ಸರ್ಕಾರ ಒಂದೆಡೆ ಕೋಟಿ ಕೋಟಿ ಹಣ ಸುರಿದು ಅಭಿವೃದ್ಧಿ ನೆಪದಲ್ಲಿ ಪರಿಸರ ನಾಶಕ್ಕೆ ಯೋಜನೆ ರೂಪಿಸುತ್ತಿದೆ. ಮತ್ತೊಂದೆಡೆ ಪರಿಸರ ಉಳಿಸುವ ನಾಟಕವಾಡಿ ವನವಾಸಿಗಳನ್ನು ಒಕ್ಕಲೆಬ್ಬಿಸುವ ತಂತ್ರಗಾರಿಕೆ ನಡೆಸುತ್ತಿದೆ. ಇದು ಸರ್ಕಾರದ ಇಬ್ಬಗೆ ನೀತಿಯಾಗಿದೆ. ಸರ್ಕಾರ ಹತ್ತಾರು ಯೋಜನೆ ಜಾರಿಯಿಂದ ತಾಲ್ಲೂಕು ಹಿಂದುಳಿದಿದೆ. ಜಲಯೋಜನೆಯಲ್ಲಿ ಇಲ್ಲಿ ಭೂಮಿ ಕಾಡು ನಾಶವಾಗಿದೆ. ಮುಳುಗಡೆ ಬೇಗೆಯಲ್ಲಿ ಬೇಯುತ್ತಿದ್ದೇವೆ. ಮತ್ತೆ ಮತ್ತೆ ಯೋಜನೆ ರೂಪಿಸುವುದು ತರವಲ್ಲ. ಅಷ್ಟಕ್ಕೂ ಯೋಜನೆಯಿಂದ ಹೊಸನಗರಕ್ಕೆ ಯಾವುದೇ ಪ್ರಯೋಜನವಿಲ್ಲ. ಕೊಲ್ಲೂರು ಅಭಿವೃದ್ಧಿ ಆಗುತ್ತದೆ. ಪ್ರವಾಸಿಗರು ಇಲ್ಲದೆ ಹೊಸನಗರ ಬಡವಾಗುವ ಅಪಾಯವಿದೆ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.