ADVERTISEMENT

ಸೋತವರಿಗೆ ಸಾಂತ್ವನ ಸಾಹಿತ್ಯದ ಶಕ್ತಿ: ಎಸ್.ಜಿ.ಸಿದ್ದರಾಮಯ್ಯ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 6:44 IST
Last Updated 3 ಫೆಬ್ರುವರಿ 2023, 6:44 IST
ಶಿವಮೊಗ್ಗದಲ್ಲಿ ಗುರುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ತಾಳಗುಂದದ ಇತಿಹಾಸದ ಬಗ್ಗೆ ಪತ್ರಕರ್ತ ಶಿರಾಳಕೊಪ್ಪದ ಎಂ.ನವೀನ್‌ಕುಮಾರ್ ಮಾತನಾಡಿದರು
ಶಿವಮೊಗ್ಗದಲ್ಲಿ ಗುರುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ತಾಳಗುಂದದ ಇತಿಹಾಸದ ಬಗ್ಗೆ ಪತ್ರಕರ್ತ ಶಿರಾಳಕೊಪ್ಪದ ಎಂ.ನವೀನ್‌ಕುಮಾರ್ ಮಾತನಾಡಿದರು   

ಶಿವಮೊಗ್ಗ: ಸಾಹಿತ್ಯವೆಂಬುದು ಜಾತಿ ಧರ್ಮಗಳನ್ನು ಮೀರಿದ್ದು ನೋವುಂಡವರ ನೆಲೆಗೆ ಹತ್ತಿರವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

17 ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿ ನುಡಿದರು.

ಸಾಹಿತ್ಯಕ್ಕೆ ಭಾಷೆ ಎಂಬುದು ನೆಪ. ಅದರೊಳಗಿರುವ ವಿಶ್ವಕ್ಕೆ ಯಾವುದೇ ಅಡತಡೆಗಳಿಲ್ಲ. ಅದಕ್ಕಾಗಿಯೇ ವಾಲ್ಮೀಕಿ, ಟಾಲ್ಸ್ಟಾಯ್ ತಮ್ಮ ಸಾಹಿತ್ಯದ‌ ಮೂಲಕ ಹತ್ತಿರವಾಗುತ್ತಾರೆ. ಸಾಹಿತ್ಯ ಸೋತವರಿಗೆ ಸಾಂತ್ವನ ನೀಡುತ್ತದೆ‌. ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿ ಹೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಲವರಿಗೆ ಸೀಮಿತವಾಗಿದ್ದ ಸಾಹಿತ್ಯವನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಮೂಲಕ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಸಾಕ್ಷಿ ಪ್ರಜ್ಞೆ ಮೂಡಿಸಿದರು ಎಂದರು.

ADVERTISEMENT

ದುಸ್ತರ ಕಾಲಘಟ್ಟದಲ್ಲಿ ಅದನ್ನು ಎದುರಿಸುವ ಮನಸ್ಸುಗಳನ್ನು ಬೆಂಬಲಿಸದಿದ್ದಲ್ಲಿ ಅದು ನಾವೂ ಮಾಡಿದ ದ್ರೋಹದಂತಾಗುತ್ತದೆ. ಜಾಗತಿಕ ನೆಲೆಯೊಳಗೆ ಎದುರಿಸುತ್ತಿರುವ ಕನ್ನಡದ‌ ಸಮಸ್ಯೆಗಳ ಬಗ್ಗೆ ಮುಖಾಮುಖಿ ಚರ್ಚೆಯ ಅವಶ್ಯಕತೆಯಿದೆ ಎಂದರು.

ಸಮ್ಮೇಳನಾಧ್ಯಕ್ಷರಾದ ಲಕ್ಷ್ಮಣ್ ಕೊಡಸೆ ಮಾತನಾಡಿ, ಎರಡು ದಿನದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಇದರಿಂದ ಸಾಹಿತ್ಯಕ್ಕೆ ಒಂದು ಉತ್ತಮ ಸ್ಥಾನ ಮಾನ ದೊರೆತಂತೆ ಭಾಸವಾಗುತ್ತಿದೆ. ನಾಡಿನ‌‌ ಕಲೆ, ಸಂಸ್ಕೃತಿಯನ್ನು ಗುರುತಿಸುವುದು 17 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಒಂದು ಮುನ್ನುಡಿ ಬರೆದಂತೆ ಕಾಣುತ್ತಿದೆ ಎಂದರು.

ರಾಜ್ಯ ಅರಣ್ಯ ಇಲಾಖೆ ನೌಕರರ ಮಂಡಳಿ ಅಧ್ಯಕ್ಷ ರಘು ರಾಮ್ ದೇವಾಡಿಗ ಮಾತನಾಡಿ, ಜಿಲ್ಲೆಯ ಎಲ್ಲಾ ಆಯಾಮಗಳ ಬಗ್ಗೆ ಯೋಚಿಸಲು ಗೋಷ್ಠಿಗಳು ವೇದಿಕೆ ಕಲ್ಪಿಸಿವೆ. ಸಮ್ಮೇಳನ ಮಲೆನಾಡಿನ ಸಮಸ್ಯೆಗಳನ್ನು ಪ್ರತಿನಿಧಿಸಿದೆ ಎಂದರು.

ಪ್ರಮುಖರಾದ ತಾಲ್ಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಶಿಕಾರಿಪುರ ತಾಲ್ಲೂಕು ಅಧ್ಯಕ್ಷ ಎಚ್.ಎಸ್.ರಘು, ಹೊಸನಗರ ತಾಲ್ಲೂಕು ಅಧ್ಯಕ್ಷ ತಾ.ಮ.ನರಸಿಂಹ, ಭದ್ರಾವತಿ ತಾಲ್ಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಡಾ. ಮೋಹನ ಚಂದ್ರಗುತ್ತಿ, ಡಾ. ಶುಭಮರವಂತೆ, ಜಿ. ಲವ ಇದ್ದರು.

***

ಸಮ್ಮೇಳನ ಮುಗಿದರೂ ಬಾರದ ಅನುದಾನ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಯಾವುದೇ ವಿಚಾರಗಳನ್ನು ಚರ್ಚಿಸುವವರನ್ನು ಶತ್ರುಗಳ ರೀತಿಯಲ್ಲಿ ನೋಡಲಾಗುತ್ತಿದೆ. ಜಿಲ್ಲಾ ಸಮ್ಮೇಳನ ಸಂಘಟಿಸುವಾಗ ಕಸಾಪ ಖಾತೆಯಲ್ಲಿದ್ದದ್ದು ₹14 ಸಾವಿರ ಮಾತ್ರ. ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಜನರು ನೀಡಿದ ಪ್ರತಿನಿಧಿ ಶುಲ್ಕವೂ ಸಮ್ಮೇಳನದ ಒಂದಿಷ್ಟು ಹೊರೆ ತಗ್ಗಿಸುತ್ತಿದೆ. ಅನುದಾನ ಬಿಡುಗಡೆಯಾಗುತ್ತದೆಯೊ ಇಲ್ಲವೊ, ಅದರೆ ಕೊಡುವ ಮನಸ್ಸುಗಳು ಸದಾ ನಮ್ಮೊಂದಿಗೆ ಜೊತೆಯಾಗಿ ನಿಂತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

***

ಓಓಡಿ ವಿಳಂಬ: ಶಿಕ್ಷಕರ ಮುನಿಸು

ಓಓಡಿ ನೀಡದೇ ನಮ್ಮನ್ನು ಕಾಯಿಸಲಾಗುತ್ತಿದೆ ಎಂದು ಆರೋಪಿಸಿ ಸಮ್ಮೇಳನಕ್ಕೆ ಬಂದಿದ್ದ ಕೆಲವು ಶಿಕ್ಷಕರು, ಗುರುವಾರ ಸಂಜೆ ಸಾಹಿತ್ಯ ಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸಮ್ಮೇಳನದ ಆಯೋಜಕರ ಮೇಲೆ ಮುನಿಸು ತೋರಿದರು.

ದೂರದ ಊರಿಗೆ ತೆರಳಲು ತಡವಾಗುತ್ತದೆ ಎಂಬುದು ಅವರ ಅಸಮಾಧಾನಕ್ಕೆ ಮೂಲವಾಗಿತ್ತು. ಅವರನ್ನು ಸಮಾಧಾನಪಡಿಸಿದ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ್, ಓಓಡಿ ನೀಡಿ ಕಳುಹಿಸಿದರು‌. ಕೆಲವರು ಓಓಡಿ ಪಡೆಯದೇ ಊರಿಗೆ ತೆರಳಿದರು. ಸಮಾರೋಪ ಸಮಾರಂಭದ ಮಧ್ಯೆಯೇ ಅಧ್ಯಕ್ಷರು ಓಓಡಿ ಪ್ರತಿಗಳಿಗೆ ಸಹಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.